ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜಮಾಡಿ ಬಂದರು: ಚಿಗುರಿದ ನಿರೀಕ್ಷೆ

Last Updated 10 ಸೆಪ್ಟೆಂಬರ್ 2011, 9:30 IST
ಅಕ್ಷರ ಗಾತ್ರ

ಹೆಜಮಾಡಿ (ಪಡುಬಿದ್ರಿ): ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ಕೆ. ಶಿವರಾಂ ನೇತೃತ್ವದ ಅಧಿಕಾರಿಗಳ ತಂಡ ಹೆಜಮಾಡಿ ಕಿರು ಮೀನುಗಾರಿಕಾ ಬಂದರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದೆಹಲಿಯಲ್ಲಿ ಕೇಂದ್ರ ಸರ್ಕಾರ ಇದೇ 12ರಂದು ಕರೆದಿರುವ ಸಭೆಯಲ್ಲಿ ವಿವಿಧ ಬಂದರು ಯೋಜನೆಗಳ ಅಭಿವೃದ್ಧಿ ಪ್ರಗತಿ ಬಗ್ಗೆ ಚರ್ಚೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ  ಮಂಗಳೂರಿನಿಂದ ಕಾರವಾರವರೆಗಿನ ಎಲ್ಲಾ ಬಂದರುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಯುಕ್ತ ರಾಜ್ಯದ ಎಲ್ಲಾ ಬಂದರುಗಳಿಗೆ ಭೇಟಿ ನೀಡುತ್ತಿದ್ದೇವೆ~ ಎಂಧು ಶಿವರಾಂ ಸುದ್ದಿಗಾರರಿಗೆ ತಿಳಿಸಿದರು.

`ಕಳೆದ ಫೆಬ್ರವರಿಯಲ್ಲಿ ಹೆಜಮಾಡಿ ಬಂದರಿಗೆ ಭೇಟಿ ಕೊಟ್ಟಿದ್ದ ಡಿ.ವಿ.ಸದಾನಂದ ಗೌಡ ಅವರು ಬಂದರಿನ ಹೂಳೆತ್ತುವ ಕಾಮಗಾರಿಗೆ ಎರಡು  ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲು ಸಹಕರಿಸಿದ್ದರು.

ತಮ್ಮ ಸಂಸತ್ ಕ್ಷೇತ್ರದಲ್ಲಿರುವ ಈ ಬಂದರು ಅಭಿವೃದ್ಧಿಗೆ, ಈಗ ಮುಖ್ಯಮಂತ್ರಿಯಾಗಿರುವ ಡಿ.ವಿ.ಸದಾನಂದ ಗೌಡ ವಿಶೇಷ ಆಸಕ್ತಿ ವಹಿಸ್ದ್ದಿದಾರೆ. ಬಂದರು ಅಭಿವೃದ್ಧಿಗೆ ಅಗತ್ಯವಾಗಿ ಆಗಬೇಕಾದ ಬ್ರೇಕ್ ವಾಟರ್ ಕಾಮಗಾರಿಗೆ ಶೀಘ್ರ ಅನುಮತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ~ ಎಂದು ಅವರು ಭರವಸೆ ನೀಡಿದರು.

ನಡಿಕುದ್ರು ಸೇತುವೆಯಿಂದ ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದು, ಬಂದರು ಅಭಿವೃದ್ಧಿ ಯೋಜನೆಯ ದ್ವಿತೀಯ ಹಂತದ ಕಾಮಗಾರಿಗೆ ತಡೆಯೊಡ್ಡಿದೆ. ಅಳಿವೆ ಪ್ರದೇಶದಲ್ಲಿ ಕಳೆದ 7-8 ವರ್ಷಗಳಿಂದ ನಡೆಸಿದ ಹಲವು ಸಮೀಕ್ಷೆಗಳು  ನಿಷ್ಪ್ರಯೋಜಕವಾಗಿವೆ. ಆದರೆ ಈ ಬಾರಿ ಪುಣೆಯ ಸಿಡಬ್ಲ್ಯುಆರ್‌ಎಸ್ ಸಂಸ್ಥೆಯು ಬಂದರು ಯೋಜನೆಗೆ ಪೂರಕ ವರದಿ ನೀಡಿದೆ.
 
60 ಕೋಟಿ ರೂಪಾಯಿಗಿಂತಲೂ ಕಡಿಮೆ ವೆಚ್ಚದಲ್ಲಿ ಬ್ರೇಕ್‌ವಾಟರ್ ನಿರ್ಮಿಸುವ ಸಾಧ್ಯತೆ ಬಗ್ಗೆ ಸಕಾರಾತ್ಮಕ ವರದಿ ನೀಡಿದೆ. ಈ ಬಗ್ಗೆ ಇಲಾಖಾ ಮಾಹಿತಿಯನ್ನು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳು ಕೆ.ಶಿವರಾಂ ಅವರಿಗೆ ಮನದಟ್ಟು ಮಾಡಿದರು. ಬಳಿಕ ಅವರು ಯೋಜನೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಮುಂದಿನ ವಾರ ಪುಣೆಯ ವರದಿ ಕೈ ಸೇರಲಿದ್ದು. ಯೋಜನೆಗೆ ತ್ವರಿತ ಚಾಲನೆ ದೊರಕಬಹುದು ಎಂದು ಇಲಾಖಾಧಿಕಾರಿಗಳು, ಸ್ಥಳೀಯ ಮೀನುಗಾರ ಮುಖಂಡರು ಕೆ. ಶಿವರಾಂ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಕಳೆದ ಹಲವು ವರ್ಷಗಳಿಂದ ಹೆಜಮಾಡಿ ಕಿರು ಮೀನುಗಾರಿಕಾ ಬಂದರು ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಸುಮಾರು 7 ವರ್ಷಗಳ ಹಿಂದೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರು ಯೋಜನೆಗೆ ಪೂರಕವಾಗಿ 40 ಮೀ. ಉದ್ದದ ಜೆಟ್ಟಿ ಸಹಿತ ಮೀನುಗಾರಿಕಾ ಶೆಲ್ಟರ್ ನಿರ್ಮಿಸಲಾಗಿತ್ತು. ಆದರೆ ಶಾಂಭವಿ ಹೊಳೆಯ ಬಂದರು ಪ್ರದೇಶದಾದ್ಯಂತ ಹೂಳು ತುಂಬಿದ್ದರಿಂದ ಯಾಂತ್ರಿಕ ದೋಣಿಗಳು ಬಂದರಿಗೆ ಬರಲು ಅಸಾಧ್ಯವಾಗಿ ಇಡೀ ಯೋಜನೆ  ನೆನೆಗುದಿಗೆ ಬಿದ್ದಿತ್ತು.

ಮೀನುಗಾರರ ನಿರೀಕ್ಷೆ: ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಹಲವು ಬಾರಿ ಬಂದರಿಗೆ ಭೇಟಿ ನೀಡಿ ಮೀನುಗಾರರಿಗೆ ಬಂದರು ಅಭಿವೃದ್ಧಿ ಬಗ್ಗೆ ಭರವಸೆ ಮಾತ್ರ ನೀಡುತ್ತಿದ್ದರು. ಆದರೆ ಇದುವರೆಗೂ ಯಾವುದೇ ಭರವಸೆ ಈಡೇರಿಲ್ಲ. ಇದೀಗ ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖಾ ಅಧಿಕಾರಿಗಳ ದಿಢೀರ್ ಭೇಟಿ ಮೀನುಗಾರರಲ್ಲಿ ಒಂದಿಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

`ಈ ಬಾರಿಯಾದರೂ ಬಂದರು ಅಭಿವೃದ್ಧಿ ಕಾಣುವ ನಿರೀಕ್ಷೆ ಇದೆ~ ಎಂದು ಸ್ಥಳೀಯ ಮೀನುಗಾರರು ವಿಶ್ವಾಸ ವ್ಯಕ್ತಪಡಿಸಿದರು.

ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಸುರೇಶ್ ಕುಮಾರ್, ಮೀನುಗಾರಿಕೆ ಮತ್ತು ಬಂದರು ಇಲಾಖಾ ಅಧಿಕಾರಿಗಳಾದ ಗಂಗಾಧರ ಮಡಿಕೇರಿ, ಎನ್.ಎಂ. ಖಾರ್ವಿ, ಟಿ.ಎಸ್ ರಾಥೋಡ್, ವಿ.ಕೆ ಶೆಟ್ಟಿ, ಗಣಪತಿ ಭಟ್, ಹರೀಶ್ ಕುಮಾರ್, ಕವಿತಾ, ಸಂತೋಷ್, ಡ್ರೆಜ್ಜಿಂಗ್ ಕಾಮಗಾರಿ ಗುತ್ತಿಗೆದಾರ ಪ್ರದೀಪ್ , ಮೂಲ್ಕಿ  ವಲಯ  ಪರ್ಸಿನ್ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ರಾಮ ಬಂಗೇರ, ಕಾರ್ಯದರ್ಶಿ ವಿಜಯ ಎಸ್. ಬಂಗೇರ, ಪದಾಧಿಕಾರಿಗಳಾದ ವಿನೋದ್ ಕೋಟ್ಯಾನ್, ಸುರೇಶ ಬಂಗೇರ, ರಾಜು ಕರ್ಕೆರ, ಗಿಲ್‌ನೆಟ್ ಮೀನುಗಾರರ ಸಂಘದ ಏಕನಾಥ ಕರ್ಕೇರ, ಸೋಮನಾಥ ಕರ್ಕೆರ, ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT