ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಗುರುತಿನ ಮೇಲೆ ನಡೆಯುವುದು ಕಷ್ಟ...

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತೆಲುಗಿನ ‘ಬೃಂದಾವನಂ’ ಚಿತ್ರಕ್ಕೂ, ಕನ್ನಡದ ‘ಬೃಂದಾವನ’ಕ್ಕೂ ಏನು ವ್ಯತ್ಯಾಸ?
ಮೂಲಕತೆಯನ್ನು ಹಾಗೆಯೇ ಇಟ್ಟುಕೊಂಡಿದ್ದೇವೆ. ಕನ್ನಡದ ನೇಟಿವಿಟಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಶಾಟ್‌ಗಳು, ದೃಶ್ಯಗಳು ಕಾಪಿ ಆಗಿಲ್ಲ.

ಈ ಸಿನಿಮಾ ಮಾಡುವುದು ನಿಮ್ಮ ಆಯ್ಕೆಯಾಗಿತ್ತೋ, ನಿರ್ಮಾಪಕರದ್ದೋ?
ನನಗೆ ಆ ಸಬ್ಜೆಕ್ಟ್ ತುಂಬಾ ಇಷ್ಟವಾಗಿತ್ತು. ಅದನ್ನು ಸ್ಕ್ರೀನ್‌ಪ್ಲೇ ಮಾಡಿಕೊಂಡೆ. ಆಮೇಲೆ ನಿರ್ಮಾಪಕರು ಸಿಕ್ಕರು. ಅವರಿಗೆ ಕತೆ ಹಿಡಿಸಿತು. ದರ್ಶನ್ ಅವರಿಗೂ ಇಷ್ಟವಾಯಿತು. ಸ್ಕ್ರೀನ್‌ಪ್ಲೇವರೆಗೆ ಅದು ನನ್ನದೇ ಆಯ್ಕೆ. ಸಿನಿಮಾ ಆಗಿದ್ದು ಎಲ್ಲರ ಒಮ್ಮತದಿಂದ.

ಕನ್ನಡದಲ್ಲಿ ನೀವು ರೀಮೇಕ್ ಮಾಡುವುದರಲ್ಲಿ ನಿಸ್ಸೀಮ ನಿರ್ದೇಶಕ ಎನಿಸಿಕೊಂಡಿದ್ದೀರಿ. ಇದನ್ನು ನೀವು ಕ್ರೆಡಿಟ್ ಎಂದು ಭಾವಿಸುತ್ತೀರೋ, ಲಿಮಿಟ್ ಎಂದುಕೊಳ್ಳುತ್ತಿರೋ?
ನಿರ್ದೇಶಕನಾಗಿ ನನಗೆ ಎಲ್ಲವೂ ಕ್ರೆಡಿಟ್ಟೇ. ಚಿತ್ರರಂಗದ ಒಳ ಹೊರಗನ್ನು ನಾನು ಬಲ್ಲೆ. ಸ್ವಮೇಕ್ ಮಾಡುವುದು ಸುಲಭ. ರೀಮೇಕ್ ಮಾಡುವುದು ತುಂಬಾ ಕಷ್ಟ. ಇದು ನನ್ನ ಒಬ್ಬನದೇ ಅಭಿಪ್ರಾಯವಲ್ಲ. ಒಂದು ಸಲ ಇಟ್ಟ ಹೆಜ್ಜೆಯ ಗುರುತಿನ ಮೇಲೆ ಮತ್ತೊಮ್ಮೆ ಇಟ್ಟು ನಡೆಯುವುದು ತುಂಬಾ ಕಷ್ಟ ಎಂದು ‘ಗಜಿನಿ’ ಸಿನಿಮಾ ನಿರ್ದೇಶಿಸಿದ್ದ ಎ.ಆರ್. ಮುರುಗದಾಸ್ ಹೇಳಿದ್ದರು. ತಮಿಳು, ಹಿಂದಿ ಎರಡರಲ್ಲೂ ಆ ಸಿನಿಮಾಗೆ ಆ್ಯಕ್ಷನ್, ಕಟ್ ಹೇಳಿದ್ದಾಗ ಅವರಿಗೆ ತುಂಬಾ ಕಷ್ಟವಾಗಿತ್ತಂತೆ.

ನಿರ್ಮಾಪಕರು ನಿಮ್ಮ ಬಳಿಗೆ ಬಂದರೆ ಹೇಳಲು ಸ್ವಮೇಕ್ ಕತೆಗಳು ಇವೆಯೇ?
ಖಂಡಿತ ಇವೆ. ನನ್ನ ತಲೆಯಲ್ಲಿ ಹಲವು ಕತೆಗಳಿವೆ. ಸ್ವಮೇಕ್ ಬೇಕು ಎನ್ನುವವರಿಗೆ ಅದನ್ನು ಹೇಳುತ್ತೇನೆ. ರೀಮೇಕ್ ಬಯಸಿ ಬರುವವರಿಗೆ ಏನು ಮಾರ್ಪಾಟು ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತೇನೆ. ಸ್ಕ್ರೀನ್‌ಪ್ಲೇ ಮಾಡುವುದು ನಾನೇ ಆದ್ದರಿಂದ ನಮ್ಮ ಜಾಯಮಾನಕ್ಕೆ ಹೇಗೆ ಹೊಂದಿಸುವುದು ಎಂಬ ಸ್ವಾತಂತ್ರ್ಯ ನನ್ನದೇ.

ನಿಮ್ಮ ನಿರ್ದೇಶನದ ‘ಕರಿ ಚಿರತೆ’ ಸ್ವಮೇಕ್. ಅದು ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಅದರ ಸೋಲಿನಿಂದ ಇನ್ನಷ್ಟು ರೀಮೇಕ್ ಕಡೆಗೆ ನಿಮ್ಮ ಮನಸ್ಸು ವಾಲಿತೇ? ಇಷ್ಟಕ್ಕೂ ಆ ಚಿತ್ರ ಸೋತದ್ದು ಯಾಕೆ?
ಅಂತಿಮವಾಗಿ ಚಿತ್ರದ ಹಣೆಬರಹ ನಿರ್ಧರಿಸುವುದು ಪ್ರೇಕ್ಷಕ. ‘ಕರಿ ಚಿರತೆ’ ಅವನಿಗೆ ಇಷ್ಟವಾಗಲಿಲ್ಲ. ಅದು ಸೋತಿತು ಎಂಬ ಒಂದೇ ಕಾರಣಕ್ಕೆ ನಾನು ರೀಮೇಕ್‌ಗಳನ್ನು ಮಾಡುತ್ತಿಲ್ಲ. ಅಂಥ ಚಿತ್ರಗಳನ್ನು ಮಾಡಲು ಹೊರಡುವವರಿಗೆ ನನ್ನ ಮೇಲೆ ನಂಬಿಕೆ ಇದೆ.

ನಿರ್ಮಾಪಕರು, ನಟರ ಅಭಿರುಚಿಗೆ ನಾನೂ ಸ್ಪಂದಿಸುತ್ತಿದ್ದೇನೆ, ಅಷ್ಟೆ. ರೀಮೇಕ್ ಚಿತ್ರ ಸೋತರೆ ಸ್ವಮೇಕ್‌ನತ್ತ ಹೊರಳುತ್ತೇನೆ ಎಂದೂ ಹೇಳಲಾಗದು. ಈಗಲೂ ಯಾರೇ ಬಂದು ಸ್ವಮೇಕ್ ಮಾಡಿಕೊಡುವ ಬೇಡಿಕೆ ಮುಂದಿಟ್ಟರೆ ನಾನು ಸಿದ್ಧ.

ನಿಮ್ಮ ಮುಂದಿನ ಚಿತ್ರವೂ ರೀಮೇಕ್. ತೆಲುಗಿನ ‘ದೂಕುಡು’ ಎತ್ತಿಕೊಂಡಿದ್ದೀರಿ. ಅದರ ಸ್ಕ್ರೀನ್‌ಪ್ಲೇ ಮುಗಿದಿದೆಯೇ?
ಅಪ್ಪು ಅವರು ಒಪ್ಪಿರುವುದರಿಂದ ಆ ಸಿನಿಮಾ ಆಗಲಿದೆ. ಸ್ಕ್ರೀನ್‌ಪ್ಲೇ ಇನ್ನೂ ಪೂರ್ತಿ ಆಗಿಲ್ಲ. ಅದೇ ಕೆಲಸದಲ್ಲಿ ಈಗ ತಲ್ಲೀನನಾಗಿದ್ದೇನೆ.

ಈಗ ಜನರು ಎಂಥ ಸಿನಿಮಾಗಳನ್ನು ಇಷ್ಟಪಡುತ್ತಾರೆ ಎಂದು ನಿಮಗನ್ನಿಸುತ್ತದೆ?
ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ನೋಡುತ್ತಾರೆ. ಕೊಡುವ ಕಾಸಿಗೆ ಮೋಸವಾಗಬಾರದು. ಭರ್ತಿ ಮನರಂಜನೆ ಸಿಗಬೇಕು. ಅದು ಆ್ಯಕ್ಷನ್, ಪ್ರೀತಿ, -ಪ್ರೇಮ ಏನು ಬೇಕಾದರೂ ಆಗಿರಬಹುದು.

ನಿಮಗೆ ಈಗ ರೀಮೇಕ್ ಹಂಗು. ಇನ್ನೊಂದು ಕಡೆ ಡಬ್ಬಿಂಗ್ ಬರಲಿ ಎಂದು ಅನೇಕರು ಸೊಲ್ಲೆತ್ತಿದ್ದಾರೆ. ಡಬ್ಬಿಂಗ್ ಬಂದರೆ ನಿರ್ದೇಶಕರಾಗಿ ನಿಮಗೆ ಯಾವ ಸವಾಲು ಎದುರಾಗಬಹುದು?
ಡಬ್ಬಿಂಗ್ ಬಂದರೆ ಇಂಡಸ್ಟ್ರಿಗೆ ಕೆಟ್ಟದಾಗುತ್ತದೆ. ಅಣ್ಣಾವ್ರ ಕಾಲದಿಂದ, ಗೋಕಾಕ್ ಚಳವಳಿಯ ಸಂದರ್ಭದಿಂದ ಅದನ್ನೇ ಹೇಳಿಕೊಂಡು ಬಂದಿರುವುದು. ರಜನೀಕಾಂತ್ ಇಲ್ಲಿಯವರು ಎಂಬುದೇನೋ ನಿಜ. ಆದರೆ ಅವರ ತಮಿಳು ಸಿನಿಮಾದಲ್ಲಿ ಕನ್ನಡದ ಮಾತು ಸೇರಿಸಿದರೆ ಅದನ್ನು ನೋಡುವುದು ತುಂಬಾ ಕಷ್ಟ.

ಬೇರೆ ಭಾಷೆಯಲ್ಲಿ ಮಾಡುವ ಚಿತ್ರಗಳನ್ನು ಎತ್ತಿಕೊಂಡು ರೀಮೇಕ್ ಮಾಡುವವರಿಗೆ ಅಲ್ಲಿನ ಸಂಸ್ಕೃತಿ ಬೇಕು, ಡಬ್ಬಿಂಗ್ ಮಾತ್ರ ಬೇಡ. ಯಾಕೆಂದರೆ, ಅದರಿಂದ ಅವರ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ವಾದವೂ ಇದೆ. ರೀಮೇಕ್ ಚಿತ್ರಗಳ ನಿರ್ದೇಶಕರಾಗಿ ಇದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
ನಾನು ಮೊದಲೇ ಹೇಳಿದಂತೆ ರೀಮೇಕ್ ಮಾಡುವುದು ಸುಲಭವಲ್ಲ. ನಾವು ಇನ್ನೊಂದು ನೇಟಿವಿಟಿಯ ಕತೆಯನ್ನು ನಮ್ಮ ನೇಟಿವಿಟಿಗೆ ಒಗ್ಗಿಸಬೇಕು. ಅದನ್ನು ಮಾಡಲು ಸಾಕಷ್ಟು ಕಷ್ಟಪಡುತ್ತೇವೆ. ಡಬ್ಬಿಂಗ್ ಹಾಗಲ್ಲ. ಯಾವುದೋ ಭಾಷೆಯ ತುಟಿಚಲನೆಗೆ ಕನ್ನಡದ ಮಾತುಗಳನ್ನು ಹಾಕಿದರೆ ಅದು ನೋಡಲು ಅಸಹನೀಯ.

ಅದು ಅಸಹನೀಯ ಎನ್ನುವುದಾದರೆ ಜನರೇ ಅದನ್ನು ನಿರಾಕರಿಸುತ್ತಾರೆ. ತಡೆಯುವುದು ಯಾಕೆ ಎಂಬ ಪ್ರಶ್ನೆಯೂ ಇದೆಯಲ್ಲ..?
ಕೆಟ್ಟದ್ದನ್ನು ಒಳಗೆ ಬಿಟ್ಟುಕೊಳ್ಳುವುದು ಸರಿಯಲ್ಲ. ಡಬ್ಬಿಂಗ್ ನನ್ನ ಪ್ರಕಾರ ನಮ್ಮ ಕನ್ನಡಕ್ಕೆ ಕೆಟ್ಟದ್ದು. ಹಾಗಾಗಿ ಅದನ್ನು ತಡೆಯುತ್ತಿದ್ದೇವೆ.

ನೀವು ಕನ್ನಡದ ‘ರನ್ನಿಂಗ್ ಹಾರ್ಸ್’ಗಳಾದ ದರ್ಶನ್, ಪುನೀತ್ ಇಬ್ಬರ ಚಿತ್ರಗಳನ್ನು ನಿರ್ದೇಶಿಸಿದ್ದೀರಿ. ಅವರಿಬ್ಬರ ಸಾಮರ್ಥ್ಯ ಏನು?
ಇಬ್ಬರ ಶ್ರದ್ಧೆಗೆ ಸಾಟಿಯಿಲ್ಲ. ಡ್ಯೂಪ್ ಬಳಸದೆ ಎಂಥ ದೃಶ್ಯಗಳನ್ನೂ ನಿರ್ವಹಿಸುತ್ತಾರೆ. ಎಷ್ಟೇ ಕಷ್ಟವಾದರೂ ಸಹಿಸಿಕೊಳ್ಳುತ್ತಾರೆ.

ಅವರಿಬ್ಬರ ಜೊತೆ ನಿಮ್ಮ ಮರೆಯಲಾಗದ ಒಂದೆರಡು ಅನುಭವಗಳನ್ನು ಹೇಳಿ?
‘ಗಜ’ ಚಿತ್ರ ಮಾಡುವಾಗ ದರ್ಶನ್ ಕಾಲ್‌ಶೀಟ್‌ ಕೊಟ್ಟ ಸಂದರ್ಭವನ್ನು ನಾನು ಬದುಕಿನಲ್ಲಿ ಮರೆಯಲಾರೆ. ಅಣ್ಣಾವ್ರ ಬದುಕಿದ್ದಾಗ ಅವರ ಮನೆಗೆ ಹೋಗುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಆಮೇಲೆ ಅವರ ಮನೆಗೆ ಆಹ್ವಾನ ಬಂದಿತು. ‘ರಾಮ್’ ಚಿತ್ರ ಮಾಡುವ ಅವಕಾಶವನ್ನು ಕರೆದುಕೊಟ್ಟರು. ಅದರ ಚರ್ಚೆಗೆಂದು ಆ ಮನೆಗೆ ಹೋದಾಗ ಒಂಥರಾ ವೈಬ್ರೇಷನ್ಸ್ ಆಯಿತು.

ನಿರ್ದೇಶಕರಾಗಿ ನಿಮ್ಮ ಮಹಾತ್ವಾಕಾಂಕ್ಷಿ ಸಿನಿಮಾ ಎಂಬುದು ಇದೆಯೇ? ಇದ್ದರೆ ಅದು ಯಾವುದು?
ಅಣ್ಣಾವ್ರ ಚಿತ್ರಗಳನ್ನು ನಾನು ಇಷ್ಟಪಡುತ್ತಾ ಬೆಳೆದೆ. ಈಗ ದರ್ಶನ್ ಸಿನಿಮಾಗಳು ಇಷ್ಟ. ಕನ್ನಡದ ಇಬ್ಬರು ದೊಡ್ಡ ನಟರ ಜೊತೆ ಇಲ್ಲಿನ ಮಟ್ಟಿಗೆ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬೇರೆ ಭಾಷೆಗಳಲ್ಲೂ ಸಿನಿಮಾಗಳನ್ನ ನಿರ್ದೇಶಿಸುವ ಹೆಬ್ಬಯಕೆ ಇದೆ. ಏನಾಗುತ್ತದೋ ನೋಡಬೇಕು. ನನ್ನ ತಲೆಯಲ್ಲಿ ಹಲವು ಕತೆಗಳಿರುವುದರಿಂದ ನಿರ್ದೇಶಿಸಬಲ್ಲೆ ಎಂಬ ಆತ್ಮವಿಶ್ವಾಸವಿದೆ.
ಸಂದರ್ಶನ : ವಿಶಾಖ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT