ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಹೆಜ್ಜೆಗೆ ಸಂಶಯ

Last Updated 6 ಏಪ್ರಿಲ್ 2013, 7:13 IST
ಅಕ್ಷರ ಗಾತ್ರ

ನೂತನ ಜಿಲ್ಲಾಧಿಕಾರಿಯಾಗಿ ಹರ್ಷ ಗುಪ್ತ ದಕ್ಷಿಣ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿದೊಡನೆ ಹಲವರ ಎದೆಯಲ್ಲಿ ನಡುಕ ಉಂಟಾಗಿತ್ತು. ಅವರು ಏಕೆ ಒಬ್ಬ ಭಿನ್ನ ಅಧಿಕಾರಿ ಎಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡವರ ಸಂಖ್ಯೆ ಕಂಡು ಅವರು ಸಂಶಯಪಟ್ಟಾಗ ಸುಸ್ತಾಗುವ ಸರದಿ ಇತರ ಅಧಿಕಾರಿಗಳದ್ದಾಯಿತು.

ಎರಡು ದಿನಗಳ ಹಿಂದೆ ಒಂದೇ ದಿನ 650ಕ್ಕೂ ಅಧಿಕ ಹೊಸ ಮತದಾರರು ಮಂಗಳೂರಿನಲ್ಲಿ ತಮ್ಮ ಹೆಸರು ನೋಂದಾಯಿಸಿದ್ದರು. ಚುನಾವಣೆಯ ಗಡಿಬಿಡಿಯಲ್ಲಿ ಒಮ್ಮೆ ಹೆಸರು ನೋಂದಾಯಿಸಿಬಿಡಲಿ ಎಂದು ಕೈತೊಳೆದುಕೊಳ್ಳುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಹರ್ಷ ಗುಪ್ತ ಅವರಿಗೆ ಸಂಶಯ ಕಾಡತೊಡಗಿತು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಲ್ಲಿ ಏನೋ `ಗೋಲ್‌ಮಾಲ್' ಆಗಿರಬೇಕು ಎಂದು ತರ್ಕಿಸಿದ ಅವರು, ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ ದೃಢಪಡಿಸಿಕೊಳ್ಳಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಹೀಗೆ ಪತ್ತೆಹಚ್ಚುವುದಕ್ಕೆ ಅವರು ಹೆಚ್ಚು ಕಾಲಾವಕಾಶ ಕೂಡ ನೀಡಲಿಲ್ಲ. ವಾಹನ ಏರಿದ ಅಧಿಕಾರಿಗಳು ಮನೆ ಮನೆಗೆ ಧಾವಿಸಿ ಹೆಸರು ನೀಡಿದವರು ನಿಜವಾದ ಮತದಾರರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಯಿತು.

ಜಿಲ್ಲಾಧಿಕಾರಿ ಅವರು ಇಷ್ಟು ಬಿಗಿ ನಿಲುವು ತೆಗೆದುಕೊಳ್ಳಲು ಕಾರಣ ಇತ್ತು. ಕಳೆದ ಪಾಲಿಕೆ ಚುನಾವಣೆಯಲ್ಲಿ ಮಂಗಳೂರಿನ ಮತಗಟ್ಟೆಯೊಂದಕ್ಕೆ ಕಾಲೇಜು ಬಸ್ಸೊಂದರಲ್ಲಿ ಬಂದಿದ್ದ ಯುವ ಮತದಾರರು, ಗುಂಪು ಗುಂಪಾಗಿ ಮತ ಚಲಾಯಿಸಿದ್ದರು. ಸಹಜವಾಗಿಯೇ ಭಾರಿ ಶಂಕೆ ವ್ಯಕ್ತವಾಗಿತ್ತು.

ಜಿಲ್ಲಾಧಿಕಾರಿ ಅವರು ಪ್ರತಿದಿನ ಹತ್ತಾರು ಸಭೆಗಳನ್ನು ನಡೆಸುತ್ತಿದ್ದಾರೆ, ಸಲಹೆ, ಸೂಚನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕೇವಲ ಸಭೆಗಳನ್ನೇ ನಡೆಸುತ್ತಿದ್ದರೆ, ಅದರ ಪಾಲನೆಯ ನಿಗಾ ವಹಿಸುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT