ಮುಂಬೈ (ಪಿಟಿಐ): 26/11ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇವಿಡ್ ಹೆಡ್ಲಿ ಹಾಗೂ ಆತನ ಸಹಚರ ತಹಾವುರ್ ರಾಣಾನನ್ನು ಪ್ರಶ್ನೆಗೊಳಪಡಿಸಲು ಅನುಮತಿ ನೀಡುವಂತೆ ಇಲ್ಲಿನ ಮೆಟ್ರೊಪಾಲಿಟನ್ ಕೋರ್ಟ್, ಅಮೆರಿಕದ ನ್ಯಾಯಾಲಯಕ್ಕೆ ಮನವಿ ಪತ್ರ (ಲೆಟರ್ ಆಫ್ ರೊಗೆಟರಿ) ಕಳುಹಿಸಿದೆ.
`37ನೇ ಮೆಟ್ರೊಪಾಲಿಟನ್ ನ್ಯಾಯಾಲಯ ಸೋಮವಾರ ಈ ಪತ್ರಕ್ಕೆ ಸಹಿ ಹಾಕಿದ್ದು, ಗೃಹ ಹಾಗೂ ವಿದೇಶಾಂಗ ಸಚಿವಾಲಯದ ಮೂಲಕ ಪತ್ರವನ್ನು ಅಮೆರಿಕದ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ. ನ್ಯಾಯಾಂಗ ತನಿಖೆಗೆ ನೆರವು ನೀಡುವಂತೆ ಕೋರಲು ಒಂದು ದೇಶ ಇನ್ನೊಂದು ದೇಶಕ್ಕೆ ಕಳುಹಿಸುವ ಅಧಿಕೃತ ಮನವಿ ಪತ್ರ ಇದಾಗಿದೆ.
`ಅಮೆರಿಕದ ಕೋರ್ಟ್ ಈ ಪತ್ರವನ್ನು ಸ್ವೀಕರಿಸುತ್ತದೆ, ಹೆಡ್ಲಿ ಹಾಗೂ ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುತ್ತದೆ ಎಂದು ಭಾವಿಸುತ್ತೇವೆ. ಇದರಿಂದ ನಾವು ಈ ಇಬ್ಬರಿಗೆ ಮುಂಬೈನಲ್ಲಿ ಇರುವ ಸಂಪರ್ಕಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ~ ಎಂದು ಅಪರಾಧ ವಿಭಾಗದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಹೆಡ್ಲಿಯ ಪಾತ್ರವನ್ನು ತಿಳಿದುಕೊಳ್ಳಲು ಕಳೆದ ವರ್ಷ ಜೂನ್‌ನಲ್ಲಿ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಆತನನ್ನು ಒಂದು ವಾರ ಕಾಲ ನೇರವಾಗಿ ವಿಚಾರಣೆಗೆ ಒಳಪಡಿಸಿದ್ದರು.