ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್ಲಿಯಿಂದ ಇನ್ನಷ್ಟು ವಿವರ ಬಹಿರಂಗ ರಕ್ಷಣಾ ಕಾಲೇಜಿನ ಮೇಲೆ ದಾಳಿ ಸಂಚು

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

 ವಾಷಿಂಗ್ಟನ್ (ಪಿಟಿಐ): ಮುಂಬೈ ದಾಳಿ ಯಶಸ್ಸಿನ ಬಳಿಕ ಅಷ್ಟಕ್ಕೆ ತೃಪ್ತಿ ಹೊಂದದ ಉಗ್ರರು ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಬಂಧಿತ ಉಗ್ರ ಡೇವಿಡ್ ಹೆಡ್ಲಿ ಹಲವು ಸಂಗತಿಗಳನ್ನು ವಿಚಾರಣೆ ವೇಳೆ ಬಯಲುಗೊಳಿಸಿದ್ದಾನೆ.

ಮುಂಬೈ ದಾಳಿ ನಂತರ ಭಾರತಕ್ಕೆ ಪುನಃ ತೆರಳಿ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿಗೆ ಮೂರ‌್ನಾಲ್ಕು ಬಾರಿ ತೆರಳಿ ಅದನ್ನು ಸಹ ಚಿತ್ರೀಕರಿಸಿಕೊಂಡಿದ್ದೆ. ಪಾಕ್‌ಗೆ ಹಿಂದಿರುಗಿದ ಬಳಿಕ ಅದರ ದೃಶ್ಯಸುರುಳಿಗಳನ್ನು ಲಷ್ಕರ್ ಎ ತೊಯ್ಬಾ ಮುಖಂಡ ಅಬ್ದುರ್ ರೆಹಮಾನ್ ಪಾಷಾಗೆ ನೀಡಿ, ದಾಳಿಗೆ ಅದೇ ಸೂಕ್ತ ಗುರಿ ಎಂದು ತಿಳಿಸಿದ್ದಾಗಿ ಹೆಡ್ಲಿ ಷಿಕಾಗೊ ನ್ಯಾಯಾಲಯದಲ್ಲಿ ಹೇಳಿದ್ದಾನೆ.

 `ಕಾಲೇಜಿನ ಒಂದು ಮುಖ್ಯದ್ವಾರ ಸದಾ ಮುಚ್ಚಿರುತ್ತಿದ್ದರೆ ಇನ್ನೊಂದು ತೆರೆದಿರುತ್ತಿತ್ತು. ಅಲ್ಲಿನ ಕಾವಲುಗಾರರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಅಲ್ಲಿ ದಾಳಿ ನಡೆಸುವುದು ಅತ್ಯಂತ ಸುಲಭವೆಂಬ ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದ ಪಾಷಾ ಶೀಘ್ರದಲ್ಲಿಯೇ ಈ ದಾಳಿಯನ್ನು ಖಚಿತವಾಗಿ ಮಾಡುವುದಾಗಿ ತಿಳಿಸಿದ್ದ~ ಎಂದೂ ಆತ ತಿಳಿಸಿದ್ದಾನೆ.

ಆತ ದಾಳಿಯ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದು, ಈ ದಾಳಿ ಭವಿಷ್ಯದಲ್ಲಿ ಶೀಘ್ರವೇ ನಡೆಯಲಿದೆ ಎಂಬುದು ಆತನ ಮಾತಿನಿಂದ ತಿಳಿಯುತ್ತಿತ್ತು ಎಂದು ಹೆಡ್ಲಿ ಹೇಳಿದ್ದಾನೆ.ಪಾಷಾ ಭಾರತದಲ್ಲಿನ ಚಬಾದ್ ಹೌಸ್‌ಗಳ ಪಟ್ಟಿ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಬಗ್ಗೆ ವಿವರಗಳನ್ನು ಮತ್ತು ಪ್ರಯಾಣದ ವೆಚ್ಚದ ಹಣವನ್ನು ಹೆಡ್ಲಿಗೆ ನೀಡಿದ್ದನಂತೆ. ನವದೆಹಲಿ, ಪುಷ್ಕರ್ ಮತ್ತು ಗೋವಾಗಳಲ್ಲಿ ಓಡಾಡಿ ಅಲ್ಲಿನ ಸ್ಥಳಗಳ ಸೂಕ್ಷ್ಮ ಅವಲೋಕನ ಮಾಡಿದ್ದಲ್ಲದೆ. ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾಗಿ ತಿಳಿಸಿದ್ದಾನೆ.

ಮುಂಬೈ ದಾಳಿ ದಾಳಿ ಬಳಿಕ ಇಸ್ರೇಲ್‌ನ ಗಾಜಾ ಪಟ್ಟಿಯಲ್ಲಿನ ನಡೆದ ಬಾಂಬ್ ದಾಳಿ ಬಗ್ಗೆ ತನ್ನ ನಾಯಕತ್ವವು ತೀವ್ರ ಹತಾಶೆಗೊಳಗಾಗಿದೆ. ಇದರ ಸೇಡನ್ನು ಯಾವುದಾದರೂ ಒಂದು ಮಾರ್ಗದಲ್ಲಿ ತೀರಿಸಿಕೊಳ್ಳಲು ಅದು ಬಯಸಿದೆ.

ಹೀಗಾಗಿ ಭಾರತಕ್ಕೆ ಹೋಗಿ ಅಲ್ಲಿನ ಚಾಬಾದ್ ಹೌಸ್‌ಗಳನ್ನು ಪುನಃ ಸರ್ವೇಕ್ಷಣೆ ಮಾಡಿ ಚಿತ್ರೀಕರಿಸಿಕೊಂಡು ಬರುವಂತೆ ಅಲ್‌ಖೈದಾ ಕಮಾಂಡರ್ ಇಲ್ಯಾಸ್ ಕಾಶ್ಮೀರಿ ಆದೇಶಿಸಿದ್ದ ಎಂದು ಹೇಳಿದ್ದಾನೆ.

ದಾಳಿಗೆ ಭಾರತೀಯರ ಆಸಕ್ತಿ
ಕರಾಚಿಯಲ್ಲಿ ವಾಸಿಸುತ್ತಿರುವ ಕೆಲವು ಭಾರತೀಯ ಮೂಲದ ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ ಸಂಘಟನೆ ಜೊತೆ ಸೇರಿ ಭಾರತದ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಇಚ್ಛಿಸುತ್ತಿದ್ದಾರೆ ಎಂಬ ಸತ್ಯವನ್ನು ಉಗ್ರ ಡೇವಿಡ್ ಹೆಡ್ಲಿ ಹೊರಗೆಡವಿದ್ದಾನೆ.

ಪಾಕಿಸ್ತಾನದ ಕರಾಚಿಯಲ್ಲಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಹೆಡ್ಲಿ, ಕರಾಚಿಯಲ್ಲಿರುವ ಕೆಲವು ಭಾರತೀಯರು ಲಷ್ಕರ್ ಮುಖಂಡ ಅಬ್ದುರ್ ರೆಹಮಾನ್ ಪಾಷಾ ಜೊತೆಗೆ ಕೈಜೋಡಿಸಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪಾಷಾ ಅವರನ್ನು ಭೇಟಿ ಮಾಡಲು ಕರಾಚಿಗೆ ಹಲವು ಬಾರಿ ಪ್ರಯಾಣಿಸಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಇಚ್ಛೆ ಹೊಂದಿರುವ ಅಲ್ಲಿನ ರಾಷ್ಟ್ರೀಯರೊಂದಿಗೆ ಪಾಷಾ ಸಂಪರ್ಕ ಹೊಂದಿದ್ದು, ಅವರ ಮೂಲಕ ಭಾರತದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದನೆಂದು ಎಂದು ಹೆಡ್ಲಿ ತಿಳಿಸಿದ್ದಾನೆ.|

ಕಲಾಪ ಮುಂದೂಡಿಕೆ
ಇಸ್ಲಾಮಾಬಾದ್ (ಪಿಟಿಐ):  ಮುಂಬೈ ದಾಳಿಯ ಶಂಕಿತ ಆರೋಪಿಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರ ಝಕಿಯುರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಪಾಕಿಸ್ತಾನಿಯರ ವಿಚಾರಣೆಯನ್ನು ಶನಿವಾರ ಒಂದು ವಾರ ಕಾಲ ಮುಂದೂಡಲಾಯಿತು.

ಈ ಪ್ರಕರಣವನ್ನು ಆಲಿಸುತ್ತಿರುವ ರಾವಲ್ಪಿಂಡಿ ಮೂಲದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಕಲಾಪ ನಡೆಸಲು ಯಾವುದೇ ನ್ಯಾಯಾಧೀಶರು ಲಭ್ಯರಿಲ್ಲದ ಕಾರಣ ವಿಚಾರಣೆ ಮುಂದೂಡಲ್ಪಟ್ಟಿತು. 2010ರ ನವೆಂಬರ್‌ನಲ್ಲಿ ರಾವಲ್ಪಿಂಡಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸಂಖ್ಯೆ 3ರಲ್ಲಿ ಪ್ರಕರಣದ ಕಲಾಪ ನಡೆಸಲು ನೇಮಕಗೊಂಡಿದ್ದ ರಾಣಾ ನಿಸಾರ್ ಅಹಮದ್ ಅವರನ್ನು ಇದೇ ಜೂನ್ 11ರಂದು ವಿಚಾರಣೆ ನಡೆಸಿದ ಬಳಿಕ ವರ್ಗಾವಣೆ ಮಾಡಲಾಗಿದೆ.

ಪ್ರಕರಣದ ವಿಚಾರಣೆ ಈ ದಿನಕ್ಕೆ ನಿಗದಿಯಾಗಿದ್ದರೂ ಸಹ ಈ ಸ್ಥಾನಕ್ಕೆ ಯಾವುದೇ ಹೊಸ ನ್ಯಾಯಾಧೀಶರನ್ನು ಈವರೆಗೆ ನೇಮಿಸಿಲ್ಲ. ಇದರಿಂದ ಪ್ರಕರಣವನ್ನು ಕರ್ತವ್ಯನಿರತ ನ್ಯಾಯಾಧೀಶರ ಮುಂದೆ ಮಂಡಿಸಿದಾಗ, ಅವರು ಜೂನ್ 25ರವರೆಗೆ ವಿಚಾರಣೆಯನ್ನು ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT