ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ವಿರುದ್ಧ ಸದ್ದಿಲ್ಲದ ಕ್ರೌರ್ಯ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಸಮಾನತೆ, ಲಿಂಗ ತಾರತಮ್ಯ, ಶೋಷಣೆ, ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದ ಮೂವರು ಮಹಿಳೆಯರಿಗೆ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಯ ಗರಿ. ಈ ಮಹಿಳೆಯರೆಲ್ಲ ಸಂಪ್ರದಾಯಕ್ಕೆ ಕಟ್ಟುಬಿದ್ದ ಸಮಾಜದಲ್ಲಿ, ಪ್ರತಿಕೂಲ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ತಾವು ಪ್ರತಿಪಾದಿಸಿದ ನಿಲುವು ಎತ್ತಿಹಿಡಿದಿದ್ದರು. ಆದರೆ, ಇಂಥದ್ದೇ ಸನ್ನಿವೇಶ ಇರುವ ಭಾರತದಲ್ಲಿ ಅಂತಹ ಹೋರಾಟ ಯಾರು ಮಾಡುತ್ತಿದ್ದಾರೆ? ವಿಶ್ವಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಏಷ್ಯಾದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದು.

ಮಹಿಳಾ ಸಬಲೀಕರಣದ ಕುರಿತು ಒಣ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಹದಿಹರೆಯದ ಹೆಣ್ಣುಮಕ್ಕಳು, ಅಪ್ರಾಪ್ತ ಬಾಲಕಿಯರ ಮೇಲೆ ನಗರ, ಪಟ್ಟಣ, ಹಳ್ಳಿ ಎನ್ನದೇ ಅತ್ಯಾಚಾರ ನಡೆಯುತ್ತಿರುತ್ತದೆ. ಹೆಣ್ಣುಮಕ್ಕಳನ್ನು ಮುಗಿಸಲು ತೋಳಗಳು ಹೊಂಚು ಹಾಕಿವೆಯೇನೋ ಎಂಬಂತೆ ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆಗಳು ಅವ್ಯಾಹತವಾಗಿ ವರದಿಯಾಗುತ್ತವೆ.

ಆಡಳಿತ ವ್ಯವಸ್ಥೆಯಲ್ಲಿನ ಕುಸಿತ, ಸಮಾಜದ ನಿಷ್ಕ್ರಿಯತೆ, ಉದಾಸೀನ, ಸ್ವಕೇಂದ್ರಿತ ಮನೋಭಾವ ಮಹಿಳೆಯರ ಅದರಲ್ಲೂ ದಲಿತ ಮಹಿಳೆಯರ ಬದುಕನ್ನು ನರಕವಾಗಿಸಿದೆ. ಈಗಲೂ ಊಳಿಗಮಾನ್ಯ ವ್ಯವಸ್ಥೆಯ ನೆನಪುಗಳನ್ನು ಭದ್ರವಾಗಿಟ್ಟುಕೊಂಡಿರುವ ಮಧ್ಯಮ ಜಾತಿಗಳ ತೋಳ್ಬಲ, ಹಣಬಲ ಮತ್ತು ರಾಜಕೀಯ ಬಲಕ್ಕೆ ದಲಿತ ಮಹಿಳೆಯರು ಬಲಿಯಾಗುತ್ತಿದ್ದಾರೆ. 

 ಖಾಸಗಿ ಜೀವನದಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯ ಪ್ರತಿಪಾದಿಸುವ ಯುವತಿಯರನ್ನು `ಮರ್ಯಾದಾ ಹತ್ಯೆ~ಯ ಹೆಸರಿನಲ್ಲಿ ಬರ್ಬರವಾಗಿ ಕೊಲ್ಲಲಾಗುತ್ತಿದೆ. ಇನ್ನೊಂದೆಡೆ ಮಹಿಳೆಯ ಆತ್ಮಗೌರವವನ್ನು ಕೊಲ್ಲುವಂತೆ ಮಾನಭಂಗ ಮಾಡಲಾಗುತ್ತಿದೆ. ಸರ್ಕಾರ, ಸಮಾಜ ಇದಕ್ಕೆಲ್ಲ ಕುರುಡಾಗಿದೆ. ಅತ್ಯಾಚಾರವನ್ನು ಪ್ರತಿಭಟಿಸುವ ಬಡ, ಕೆಳ ಜಾತಿಯ ಹೆಣ್ಣು ಮಕ್ಕಳ ಮೂಗು ಕೊಯ್ಯುವ, ಕಿವಿ ಕತ್ತರಿಸುವ ಘಟನೆಗಳು ಕಡಿಮೆಯೇನಲ್ಲ.

ಇವುಗಳಲ್ಲಿ ಕೆಲವಷ್ಟೇ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಮತ್ತೆ ಹಲವು ಹಳ್ಳಿ, ಪಟ್ಟಣಗಳ ಗಡಿದಾಟಿ ಹೊರಬರುವುದೇ ಇಲ್ಲ. ಎಷ್ಟೋ ಪ್ರಕರಣಗಳಲ್ಲಿ ಸಚಿವರೇ ಅತ್ಯಾಚಾರದ ಆರೋಪಕ್ಕೆ ಒಳಗಾಗಿರುತ್ತಾರೆ.

ಮುಖ್ಯಮಂತ್ರಿ, ಸ್ಪೀಕರ್, ವಿರೋಧ ಪಕ್ಷದ ನಾಯಕಿ, ಆಡಳಿತ ಪಕ್ಷದ ಅಧ್ಯಕ್ಷೆ ಇತ್ಯಾದಿ ಉನ್ನತ ಹುದ್ದೆ, ಸ್ಥಾನಗಳಲ್ಲಿ ಕುಳಿತಿರುವ ಮಹಿಳೆಯರು ತಮ್ಮದೇ ಲಿಂಗ ವರ್ಗಕ್ಕೆ ಆಗುತ್ತಿರುವ ಈ ಅನ್ಯಾಯ ತಡೆಗಟ್ಟಲು ಯಾವುದೇ ಮಹತ್ತರ ಕೊಡುಗೆ ನೀಡುತ್ತಿಲ್ಲ. ಬದಲಾವಣೆಗೆ ದಿಕ್ಸೂಚಿಯಾಗುತ್ತಿಲ್ಲ.

ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ಥಳಿಸುವ, ಕೊಚ್ಚಿಹಾಕುವ ಪ್ರಕರಣಗಳು ವರದಿಯಾಗದ ದಿನವೇ ಇಲ್ಲ. ಯಾವುದೇ ವಯೋಮಾನಕ್ಕೆ ಸೇರಿದ ಹೆಣ್ಣುಮಕ್ಕಳು ಅಂಗರಕ್ಷಕರು ಇಲ್ಲದೇ ಸುರಕ್ಷಿತವಾಗಿ ಓಡಾಡದ ಸನ್ನಿವೇಶ ಕೆಲವೆಡೆ ನಿರ್ಮಾಣವಾಗಿದೆ. ಆದರೆ, ಉನ್ನತ ಹುದ್ದೆಯಲ್ಲಿರುವ ಮಹಿಳೆಯರು, ಮಹಿಳಾ ಉದ್ಯಮಿಗಳು, ಮಹಿಳಾ ರಾಜಕಾರಣಿಗಳು, ಬಾಲಿವುಡ್ ನಟಿಯರ ಹೊರತಾಗಿ ಈ ಅನುಕೂಲ ಮತ್ಯಾರಿಗೂ ಇಲ್ಲ.

ಮಹಿಳೆಯ ಕುರಿತ ಈ ತಾರತಮ್ಯ ಧೋರಣೆಯ ಬೇರುಗಳು ಶತಮಾನಗಳಷ್ಟು ಪುರಾತನವಾದದ್ದು. ಹೆಣ್ಣು ಮಗುವಿನ ಕುರಿತ ಈ ಅಭದ್ರತಾ ಭಾವನೆಯನ್ನು ಮೂಢ ಸಂಪ್ರದಾಯ ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಶಿಕ್ಷಣ ಸಹ ಈ ಮನೋಭಾವದಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುತ್ತಿಲ್ಲ. ಮಧ್ಯಮ ವರ್ಗದ ಸುಶಿಕ್ಷಿತ ಆಷಾಢಭೂತಿಗಳು ಲಿಂಗ ಪತ್ತೆ ಪರೀಕ್ಷೆಗಾಗಿ ಸಿಂಗಪುರ ಮತ್ತು ಥಾಯ್ಲೆಂಡ್‌ಗೆ ಧಾವಿಸುತ್ತಾರೆ. ಪ್ರಖ್ಯಾತ ಸಿನಿಮಾ ತಾರೆಯರು ಸಹ ಗಂಡು ಸಂತಾನ ಪಡೆಯಲು ಈ ದೇಶಗಳಿಗೆ ಹೋಗಿದ್ದಾರೆ ಎಂಬ ಸುದ್ದಿಯಿದೆ.

ಪೊಳ್ಳು ಪ್ರತಿಷ್ಠೆ
ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ನಿಂತು ಸ್ವತಂತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದ್ದಾಗಲೂ ಸಹ ತಾವು `ಆಧುನಿಕರು~ ಎಂದು ಹೇಳಿಕೊಳ್ಳುವ ವರ್ಗ ಪೊಳ್ಳು ಪ್ರತಿಷ್ಠೆಗೆ ಕಟ್ಟುಬಿದ್ದು ಲಕ್ಷಾಂತರ ರೂಪಾಯಿ ವರದಕ್ಷಿಣೆ ನೀಡುತ್ತದೆ. ಸಿರಿವಂತ ಪಾಲಕರು ಹೆಣ್ಣುಮಕ್ಕಳನ್ನು ತವರಿಗೆ ಕರೆಯಿಸುವ ಧೈರ್ಯವಿಲ್ಲದೇ (ಸಮಾಜದ ದೂಷಣೆಗೆ ಹೆದರಿ) ಅತ್ತೆ ಮನೆಯವರ `ಬ್ಲಾಕ್‌ಮೇಲ್~ಗೆ ಒಳಗಾಗಿ ಕೋಟ್ಯಂತರ ರೂಪಾಯಿ ನೀಡಿದ ಪ್ರಕರಣಗಳು ಅಸಂಖ್ಯಾತ.

ಇಂತಹ ಬಹುಪಾಲು ಪ್ರಕರಣಗಳ ಹಣೆಬರಹ ಒಂದೇ. ತವರು ಮನೆಯವರಿಂದ ಹಣ ಹಿಂಡಲು ಅತ್ತೆ ಮನೆಯವರು ಹೆಣ್ಣುಮಕ್ಕಳನ್ನು ಸಾವಿನ ಅಂಚಿಗೆ ದೂಡುತ್ತಾರೆ. ನಿತ್ಯ ಚಿತ್ರಹಿಂಸೆ ನೀಡುತ್ತಾರೆ. ಉಳಿದೆಲ್ಲ ಸಮಯದಲ್ಲಿ ಪಾಶ್ಚಿಮಾತ್ಯ ಜೀವನಶೈಲಿ ಅನುಸರಿಸುವ, ವ್ಯಕ್ತಿಗತ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ನಗರದಲ್ಲಿ ನೆಲೆಸಿರುವ ಇಂಗ್ಲಿಷ್ ಮಾತನಾಡುವ ಆಧುನಿಕ ವರ್ಗದ ಕಥೆ ಇದು.

ಇದರೆಲ್ಲದರ ಫಲಿತಾಂಶ ಭಯಾನಕ. ಇಡೀ ವಿಶ್ವದಲ್ಲಿ ಅತಿಹೆಚ್ಚು ಸಂಖ್ಯೆಯ ಹೆಣ್ಣು ಭ್ರೂಣಹತ್ಯೆ ಭಾರತದಿಂದ ವರದಿಯಾಗುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯ ಬಾಲ ವೇಶ್ಯೆಯರು ಭಾರತದಲ್ಲಿ ಇದ್ದಾರೆ. ಪ್ರತಿವರ್ಷ ದೇಶದಾದ್ಯಂತ ನಾಪತ್ತೆಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ (ಅಂದಾಜು 70 ಸಾವಿರ) ಬಾಲಕಿಯರ ಸಂಖ್ಯೆಯೇ ಹೆಚ್ಚಿದೆ.

ಹೆಣ್ಣುಮಕ್ಕಳ ಮೇಲೆ ದಶಕಗಳಿಂದ ನಡೆಯುತ್ತಿರುವ ಇಂತಹ ವ್ಯವಸ್ಥಿತ ಕ್ರೌರ್ಯದಿಂದ, ಅಪರಾಧದಿಂದ ಲಿಂಗ ಅನುಪಾತದಲ್ಲಿ ಭಾರಿ ಅಸಮತೋಲನವಾಗಿದೆ. ಮಹಿಳೆಯರನ್ನು ಸಾರ್ವಜನಿಕವಾಗಿಯೇ ಕೊಲ್ಲುವ ಹರಿಯಾಣಾದಲ್ಲಿ ಪುರುಷ, ಮಹಿಳೆ ನಡುವಿನ ಅನುಪಾತ 1000ಕ್ಕೆ 877ರಷ್ಟಿದೆ. ಪಂಜಾಬ್, ದೆಹಲಿ, ಮಹಾರಾಷ್ಟ್ರ ಇತ್ಯಾದಿ ಉತ್ತರ ಭಾರತದ ರಾಜ್ಯಗಳಲ್ಲಿಯೂ ಈ ಅನುಪಾತ ಉತ್ತಮವಾಗಿಲ್ಲ.

ಹಿರಿಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಯುವ ಜೋಡಿಗಳನ್ನು ಕೊಲ್ಲುವ ಹರಿಯಾಣಾದ ಕುಖ್ಯಾತ `ಖಾಪ್ ಪಂಚಾಯತ್~ಗಳಿಗೆ ರಾಜಕೀಯ ಪಕ್ಷಗಳ ಕೃಪಾಕಟಾಕ್ಷ ಇರುತ್ತದೆ. ಸ್ವಾತಂತ್ರ್ಯ ಬಂದು 63 ವರ್ಷಗಳಾದರೂ `ಖಾಪ್~ಗಳ ವಿರುದ್ಧ ಸುಪ್ರೀಂಕೋರ್ಟ್ ಗುರುತರ ಟೀಕೆ ಮಾಡಿದ್ದಾಗ್ಯೂ ರಾಜಕೀಯ ಪಕ್ಷಗಳೆಲ್ಲ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಈ `ಖಾಪ್~ಗಳ ಬೆನ್ನಿಗೆ ನಿಲ್ಲುತ್ತವೆ. ಕಾಂಗ್ರೆಸ್‌ನ ಯುವ ಸಂಸದ ನವೀನ್ ಜಿಂದಾಲ್ `ಖಾಪ್~ಗಳನ್ನು ಬಹಿರಂಗವಾಗಿಯೇ ಬೆಂಬಲಿಸಿ ಹೇಳಿಕೆ ನೀಡಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ.

ಕಾನೂನು ಸುವ್ಯವಸ್ಥೆ ಕಾಪಾಡಲು, ಶೋಷಿತರಿಗೆ ನ್ಯಾಯ ನೀಡಲು, ಪೊಲೀಸ್ ಕಾರ್ಯವೈಖರಿ ಬದಲಿಸಲು ನೀತಿ ನಿರೂಪಣೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ, ಮಾನವ ಹಕ್ಕು ಸಂಘಟನೆ, ಮಹಿಳಾ ಸಂಘಟನೆ ಅಥವಾ ಮಹಿಳಾ ರಾಜಕಾರಣಿಗಳು ಕೊಂಚವೂ ಯತ್ನಿಸದೇ ಇರುವುದು ದೊಡ್ಡ ವಿಪರ್ಯಾಸ. ಉದ್ಯೋಗಸ್ಥ ಅಥವಾ ಆಧುನಿಕ ಮಹಿಳೆಯ ವಿರುದ್ಧ ಅನುಮಾನದಿಂದ ನೋಡುವಂತಹ ದೃಷ್ಟಿಕೋನದ ಹಿಂದೆ ಸಹ ಇದೇ ಮನೋಭಾವ ಅಡಗಿದೆ.

ಸಿರಿವಂತ ಅಥವಾ ಪ್ರಖ್ಯಾತ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆದಾಗ ಅಥವಾ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿರುವಾಗ ಮಾತ್ರ ಮಹಿಳಾ ಸಂಘಟನೆಗಳು, ಸರ್ಕಾರ ಮಧ್ಯ ಪ್ರವೇಶಿಸುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮದ ಕ್ಯಾಮೆರಾ ಕಣ್ಣು ಶೋಷಿತ ಮಹಿಳೆಯಿಂದ ಹಿಂದಕ್ಕೆ ಸರಿದ ತಕ್ಷಣ ಇವರ ಕಾಳಜಿಯೂ ಮಾಯವಾಗುತ್ತದೆ.

ಈ ದೇಶದ ಧಾರ್ಮಿಕ ಪಠ್ಯ, ಸಾಹಿತ್ಯ, ಪರಂಪರೆಯಲ್ಲಿ ದೊಡ್ಡ ಸ್ಥಾನ ಹೊಂದಿರುವ ಮಹಿಳೆಯರು ಕಾಲ, ಸಂಪ್ರದಾಯ, ರಾಜಕೀಯ ಚದುರಂಗದಾಟ ಮತ್ತು ಗ್ರಾಹಕ ಸಂಸ್ಕೃತಿಯ ಜಾಲದಲ್ಲಿ ಕೈದಿಗಳಾಗಿ ಉಳಿದಿದ್ದಾರೆ. ನಗರ ಪ್ರದೇಶದ ಉದ್ಯೋಗಸ್ಥ ಮಹಿಳೆಯಾಗಲಿ, ಬಾವಿಯಿಂದ ನೀರು ಸೇದುವ ಹಳ್ಳಿಯ ಹೆಣ್ಣು ಮಗಳಾಗಲಿ ಸದ್ಯದ ಭವಿಷ್ಯದಲ್ಲಿ ಈ ಸೆರೆಮನೆಯಿಂದ ಸುರಕ್ಷಿತವಾಗಿ ಹೊರಬರುವ ದಾರಿ ಗೋಚರಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT