ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಸವಾಲುಗಳ ಹಲವು ಮುಖಗಳು

Last Updated 23 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ದೃಶ್ಯ ಒಂದು: ಅರಸೀಕೆರೆ ತಾಲ್ಲೂಕಿನ ಒಂದು ಪಂಚಾಯ್ತಿಯಲ್ಲಿ ಆ ವ್ಯಾಪ್ತಿಯ ಶಾಲೆಗಳ ಸ್ಥಿತಿಗತಿ ಚರ್ಚಿಸಲು ಕರೆದ ಸಭೆ. ಸದಸ್ಯರೆಲ್ಲ ಒಬ್ಬೊಬ್ಬರಾಗಿ ಬರುತ್ತಿದ್ದಂತೆ ಲೋಕಾಭಿರಾಮ ಮಾತುಕತೆ ಶುರು­ವಾಯಿತು. ಒಬ್ಬಾತ ಎಲ್ಲದಕ್ಕೆ ಮುಂದಾಗಿ ಮಾತಾಡುತ್ತಿದ್ದ.

ನೀವು ಯಾವ ಊರಿನ ಸದಸ್ಯರು ಎಂದು ಎಂದು ಕೇಳಿದರೆ, ಆಗ ಮೆಲ್ಲನೆ ಪಕ್ಕದಲ್ಲಿದ್ದಾಕೆಯನ್ನು ತೋರಿಸಿ  ‘ನಾನು ಸದಸ್ಯನಲ್ಲ, ಇವ್ರ ಗಂಡ’ ಎನ್ನುವುದೇ! ಆಮೇಲೆ ಗೊತ್ತಾಗಿದ್ದು ಪಂಚಾಯ್ತಿ ಕೇಂದ್ರವಾದ ಅದೇ ಊರಿನ ಸದಸ್ಯೆಯೊಬ್ಬರ ಗಂಡ ಆತ ಎಂದು. ಸಭೆಯುದ್ದಕ್ಕೂ ಆಕೆ ಏನೂ ಮಾತನಾಡಲೇ ಇಲ್ಲ, ಸಭೆ ನಡೆಸುತ್ತಿದ್ದವರು ಆಗೀಗ ಆಕೆಯ ಅಭಿಪ್ರಾಯವನ್ನು ಕೇಳಿದಾಗ ತಲೆಯಲ್ಲಾಡಿಸಿ, ಹೆಚ್ಚೆಂದರೆ ಹೌದ್ಹೌದು ಎಂದು ಆಕೆ ಸುಮ್ಮನಾದರೆ ಆಕೆಯ ಪರವಾಗಿ ಗಂಡನೇ ಎಲ್ಲದರಲ್ಲಿ ಮೂಗು ತೂರಿಸಿ ಮಾತಾಡುತ್ತಿದ್ದ.

ದೃಶ್ಯ ಎರಡು: ಚಳ್ಳಕೆರೆಯ ಒಂದು ಪಂಚಾಯ್ತಿಯಲ್ಲಿ ಇಂಥದೇ ಒಂದು ಸಭೆ. ಅಲ್ಲಿ ಗ್ರಾ.ಪಂ. ಅಧ್ಯಕ್ಷರು ಮಹಿಳೆ ಮತ್ತು ಉಪಾಧ್ಯಕ್ಷ ಪುರುಷ. ಸದಸ್ಯರು, ಪಿಡಿಒ ಮತ್ತು ಆ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರು ಬರುತ್ತಿದ್ದಂತೆ ಸಭೆ ಆರಂಭವಾಯಿತು.

ಎಲ್ಲರೂ ಮೊದಲಿಗೆ ಅವರವರ ಹೆಸರು, ಗ್ರಾಮದ ಹೆಸರು ಹೇಳಿ ಪರಿಚಯಿಸಿಕೊಂಡರು. ಎಲ್ಲರ ಸರದಿ ಮುಗಿದರೂ, ಒಬ್ಬಾತ ಮಾತ್ರ ಹೆಸರು ಹೇಳದೇ ಸುಮ್ಮನೇ ಕುಳಿತಿದ್ದ. ಪರಿಚಯಿಸಿಕೊಳ್ಳುವಂತೆ ಕೇಳಿ­ಕೊಂಡರೂ, ಆತ ‘ಇರ್ಲಿ ಬಿಡ್ರಿ ಎನ್ನುತ್ತ ಕುಳಿತೇ ಇದ್ದ’ ಆಗ ಸದಸ್ಯರು ನಗುತ್ತ ‘ಅವರು ಅಧ್ಯಕ್ಷರ ಗಂಡ’ ಎಂದಾಗ ಸಭೆ ನಡೆಸುತ್ತಿದ್ದ ನಾವು ಸುಮ್ಮನಾಗಲೇ ಬೇಕಾಯಿತು. ಇಡೀ ಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ಮಾತ್ರ. ಅಧ್ಯಕ್ಷೆ ಮಾತಿಲ್ಲದ ಬೊಂಬೆಯಾಗಿದ್ದರು.

ಇದು ಹೆಚ್ಚಿನ ಗ್ರಾಮ ಪಂಚಾಯ್ತಿಗಳಲ್ಲಿ ಕಂಡು ಬರುವ ದೃಶ್ಯ. ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷೆ ಅಥವಾ ಸದಸ್ಯೆ ಎಂದು ಹೆಸರಿಗೆ ಇದ್ದರೂ, ಹೆಚ್ಚಿನ ವೇಳೆ ಆಕೆಯ ಪರವಾಗಿ ಮಾತು, ಚರ್ಚೆಯಲ್ಲಿ ಪಾಲ್ಗೊಳ್ಳುವುದು ಗಂಡ. ತೆಗೆದುಕೊಳ್ಳುವ ನಿರ್ಧಾರಗಳಲ್ಲಿಯೂ ಗಂಡನದೇ ಮುಂದಾಳ್ತನ. ‘ನಾನೇ ನಿಲ್ಲುವವನಿದ್ದೆ, ಹೆಣ್ಣುಮಕ್ಕಳಿಗೆ ಮೀಸಲು ಅಲ್ವಾ, ಅದ್ಕೇ ನಮ್ಮ ಹೆಂಗಸನ್ನ ನಿಲ್ಲಿಸಿದೆ. ಆಕೆಗೇನೂ ತಿಳಿಯಂಗಿಲ್ಲ, ಅದ್ಕೇ ನಾನೇ ಎಲ್ಲ ನೋಡ್ಕಂತೀನಿ’ ಇದು ಹೆಚ್ಚಿನ ಮಹಿಳಾ ಸದಸ್ಯರ ಗಂಡಂದಿರು ಹೇಳುವ ಮಾತು.

ಪಂಚಾಯ್ತಿಗೆ ಮಹಿಳಾ ಅಧ್ಯಕ್ಷರು ಅಥವಾ ಉಪಾಧ್ಯಕ್ಷರಾಗಿದ್ದರೆ ಇನ್ನುಳಿದ ಪುರುಷ ಸದಸ್ಯರು, ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಈಗ ಪಿಡಿಒಗಳು ಈ ಯೋಜನೆ, ಕಾರ್ಯಕ್ರಮಗಳ ವಿಚಾರ ನಿಮಗೆ ಅಷ್ಟು ತಿಳಿಯೋದಿಲ್ಲ. ನೀವು ಬರೀ ಸಹಿ ಮಾಡಿ ಸಾಕು ಎನ್ನುತ್ತಲೇ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುವುದನ್ನು, ಅವರ ಧ್ವನಿ ಉಡುಗಿಹೋಗುವ ವಾತಾವರಣ ನಿರ್ಮಿಸಿದ್ದನ್ನು ನೋಡುತ್ತಿರುತ್ತೇವೆ.

ಹಾಗೆಂದು ಎಲ್ಲ ಪಂಚಾಯ್ತಿ ಮಹಿಳಾ ಸದಸ್ಯರು ಮೌನವಾಗಿದ್ದು ಬಿಡುವವರು ಎಂದೇನಲ್ಲ. ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುವ, ತಮ್ಮ ಗ್ರಾಮಗಳಿಗೆ ಇಂತಿಂಥ ಕೆಲಸಗಳು ಆಗಬೇಕಿದೆ ಎಂದು ದಿಟ್ಟತನದಿಂದ ಹೇಳುವ ಅದರಂತೆಯೇ ನಡೆದುಕೊಳ್ಳುವ ಸದಸ್ಯೆಯರೂ ಇದ್ದಾರೆ. ಅಧ್ಯಕ್ಷರ ಆಯ್ಕೆ ಪ್ರಶ್ನೆ ಬಂದಾಗಲೂ ತಮ್ಮ ದಿಟ್ಟತನ ಕಾಯ್ದುಕೊಂಡ ಸದಸ್ಯೆಯರೂ ಇದ್ದಾರೆ. ಆದರೆ ಅದಕ್ಕೆ ತೆರುವ ಬೆಲೆ ಕೆಲವು ಸಲ ದುಬಾರಿ ಎನ್ನುವುದು ಕಳೆದ ವರ್ಷ ಚನ್ನಪಟ್ಟಣದ ಮಾಕಳಿ ಗ್ರಾಮ ಪಂಚಾಯ್ತಿಯ ಸದಸ್ಯೆಗೆ ಅರಿವಾಗಿದೆ.

ಮಾಕಳಿ ಪಂಚಾಯ್ತಿಯಲ್ಲಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ತನ್ನ ವಿರೋಧಿಗೆ ಮತ ಹಾಕಬಹುದು ಎಂದು ಸದಸ್ಯೆಯೊಬ್ಬಳನ್ನು ಅಧ್ಯಕ್ಷನ ಕಡೆಯವರು ಮನೆಯೊಂದರಲ್ಲಿ ಕೂಡಿ, ಹಾಕಿ, ಬಟ್ಟೆ ಎಳೆಯುತ್ತ, ಈಗ ಯಾರಿಗೆ ಓಟ್ ಹಾಕ್ತೀಯೋ ಹಾಕು ಹೋಗು ಎಂದು ಹಿಂಸೆ ನೀಡಿದ್ದರು.

ಪೊಲೀಸರು ಸೂಕ್ತ ಸಮಯಕ್ಕೆ ಅಲ್ಲಿಗೆ ಬಂದಿದ್ದರಿಂದ ಆಕೆ ಇನ್ನಷ್ಟು ಹಿಂಸೆಗೆ ಒಳಗಾಗುವುದು ತಪ್ಪಿತ್ತು. ಹೀಗೆ ಧೈರ್ಯವಾಗಿ ಮಾತನಾಡುವ ಸದಸ್ಯೆ­ಯರಿಗೆ ಲೈಂಗಿಕ ಕಿರುಕುಳವೂ ಸೇರಿದಂತೆ ಕೆಟ್ಟ ಮಾತು­ಗಳಲ್ಲಿ ಅಪಹಾಸ್ಯ ಸಾಮಾನ್ಯವಾಗಿ ಎದುರಾಗುತ್ತವೆ. 

ಇನ್ನೂ ಒಂದು ಗಮನಿಸಬೇಕಾದ ವಿಷಯವೆಂದರೆ ಸದಸ್ಯೆಯರ ವಿದ್ಯಾಭ್ಯಾಸದ ಮಟ್ಟ ಮತ್ತು ಜಾತಿ. ಹೆಚ್ಚಿನ ಪಂಚಾಯ್ತಿ ಸದಸ್ಯೆಯರ ವಿದ್ಯಾಭ್ಯಾಸ ಹೈಸ್ಕೂಲು ಅಥವಾ ಅದಕ್ಕಿಂತ ಕೆಳಗಿರುತ್ತದೆ. ಪಿಯುಸಿ ಅಥವಾ ಅದಕ್ಕಿಂತ ಹೆಚ್ಚು ಓದಿದವರ ಮಹಿಳಾ ಸದಸ್ಯರ ಸಂಖ್ಯೆ ಬಹಳ ಕಡಿಮೆ ಇದೆ.

ಹೆಚ್ಚು ಓದಿದವರು ಪಂಚಾಯ್ತಿ ಸದಸ್ಯರಾಗಿ ತಮ್ಮ ಕರ್ತವ್ಯಗಳು, ಪಾತ್ರ, ಜವಾಬ್ದಾರಿ ಕುರಿತು ಹೆಚ್ಚು ವಿಷಯ ತಿಳಿದುಕೊಂಡಿರುತ್ತಾರೆ ಮತ್ತು ಸ್ವಲ್ಪ ಮಟ್ಟಿಗಾದರೂ ಧೈರ್ಯದಿಂದ ಕೆಲಸ ಮಾಡಲು ಮುಂದಾಗುತ್ತಾರೆ. ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗುವ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳಾ ಸದಸ್ಯರು ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನ ಎರಡರಲ್ಲಿಯೂ ಹಿಂದುಳಿದ­ವರಾಗಿದ್ದರಿಂದ, ಇವರಿಗೆ ಧ್ವನಿ ಎತ್ತಲಿಕ್ಕೆ ಹಿಂಜರಿಕೆ ಮತ್ತು ಧ್ವನಿ ಎತ್ತದಂತೆ ನೋಡಿಕೊಳ್ಳುವ ವಾತಾವರಣವೇ ಪಂಚಾಯ್ತಿಗಳಲ್ಲಿರುತ್ತದೆ.

ಅಲ್ಲದೇ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಮಿಸಲಾತಿ ಅಡಿಯಲ್ಲಿ ಅಧ್ಯಕ್ಷೆ ಅಥವಾ ಉಪಾಧ್ಯಕ್ಷೆ­ಯಾದವರು ಹಿಂದುಳಿದ ಜಾತಿಗೆ ಸೇರಿದ ಮಹಿಳೆಯಾದರೆ ಮೇಲ್ಜಾತಿಗೆ ಸೇರಿದ ಇನ್ನುಳಿದ ಸದಸ್ಯರು ಅವರಿಗೆ ಹೆಚ್ಚಿನ ಗೌರವ ತೋರುವುದಿಲ್ಲ ಮತ್ತು ಸಾಧ್ಯವಿದ್ದಷ್ಟು ಅವರ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಾರೆ.

ಹಾಗೆಂದು ಪರಿಸ್ಥಿತಿ ತುಂಬ ನಿರಾಶಾದಾಯಕವಾಗಿದೆ ಎಂದೇನೂ ಅಲ್ಲ. ಕಳೆದೆರಡು ದಶಕಗಳಲ್ಲಿ ಪಂಚಾಯ್ತಿ­ಯಲ್ಲಿ ಮಹಿಳಾ ಸದಸ್ಯರ ಪಾಲ್ಗೊಳ್ಳುವಿಕೆ­ಯಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ. ಇತ್ತೀಚೆಗೆ ಕ್ರಿಯಾಶೀಲ­ರಾಗಿರುವ ಮಹಿಳಾ ಸದಸ್ಯರನ್ನು ಗಮನಿಸಿದರೆ, ಅವರು ಅಧಿಕಾರದಾಟದಲ್ಲಿ ಹೆಚ್ಚು ಆಸಕ್ತಿ ತೋರುವುದಿಲ್ಲ, ಬದಲಿಗೆ ಹಳ್ಳಿಗಳ ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು. ಪಂಚಾಯ್ತಿ ಚಟುವಟಿಕೆಗಳಲ್ಲಿ ಪುರುಷ ಸದಸ್ಯರಿಗಿಂತ ಮಹಿಳಾ ಸದಸ್ಯರು ಹೆಚ್ಚು ಧನಾತ್ಮಕ ಮತ್ತು ಸಹಕಾರದ ಮನೋಭಾವ ತೋರುತ್ತಾರೆ ಎನ್ನುವುದು ಪಿಡಿಒ ಒಬ್ಬರ ಅಭಿಪ್ರಾಯ.

ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರ ಕೂಡ ಪಂಚಾಯ್ತಿ ಸದಸ್ಯೆಯರಿಗೆ ತರಬೇತಿಗಳನ್ನು ನೀಡಿದ್ದು, ಸದಸ್ಯೆಯರಾಗಿ ಅವರ ಪಾತ್ರ ಮತ್ತು ಕರ್ತವ್ಯದ ಕುರಿತು ಸಾಕಷ್ಟು ಚರ್ಚೆ ಮಾಡಿ, ತಿಳಿವಳಿಕೆ ನೀಡಿದ್ದಾರೆ. ಇಂತಹ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ನಂತರ ಮಹಿಳಾ ಸದಸ್ಯರು ಹಿಂಜರಿಕೆ ಬಿಟ್ಟು, ಸಕ್ರಿಯವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಯ್ಯೋ, ಮೀಸಲಾತಿ ಇದೆಯಲ್ಲ ಅಂತ ಆಯ್ಕೆ ಮಾಡಿದೀವಿ, ಅವ್ರಿಗೇನೂ ಗೊತ್ತಾಗಲ್ಲ ಎಂದು ಹೀಯಾಳಿಸುವುದು ಬಿಟ್ಟು ಅವರಿಗೆ ಸೂಕ್ತ ತರಬೇತಿ, ತಿಳಿವಳಿಕೆ ನೀಡಿ, ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಹೆಚ್ಚುವಂತೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT