ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಗುವಿನ ಸುರಕ್ಷತೆಗೆ ಚತುರ ಸಾಧನ

Last Updated 3 ನವೆಂಬರ್ 2015, 19:51 IST
ಅಕ್ಷರ ಗಾತ್ರ

ಪ್ರಪಂಚ  ಇನ್ನೂ ಏನೆಂದು ಸರಿಯಾಗಿ ಅರಿಯದ ಮುಗ್ಧ ಹಸುಳೆಗಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಸಾಫ್ಟವೇರ್‌ ತಂತ್ರಜ್ಞರ ಮನಸ್ಸನ್ನು  ಘಾಸಿಗೊಳಿಸಿದವು. ಇಂಥ ವಿಕೃತಗಳಿಗೆ ತಡೆಯೊಡ್ಡಲು ನಡೆದ ಚಿಂತನೆಯ ಫಲವಾಗಿ ‘ಹೊಸ ಸಾಫ್ಟವೇರ್‌’ ರೂಪುಗೊಂಡಿದೆ.  ಮನೆಯಿಂದ ಹೊರ ಹೋಗುವ ಮಗುವಿನ ಮೇಲೆ ಸದಾ ತಾಯಿಯಂತೆ ಕಣ್ಣಿಡುವ ಈ ಪೆನ್‌ಡ್ರೈವ್‌ ಗಾತ್ರದ ಸಾಧನದ ಬಗೆಗಿನ ಮಾಹಿತಿಯನ್ನು ಸಚ್ಚಿದಾನಂದ ಕುರಗುಂದ ಅನಾವರಣಗೊಳಿಸಿದ್ದಾರೆ.

ಪ್ರತಿನಿತ್ಯ ಶಾಲೆಯಿಂದ ಮಗು ಮನೆಗೆ ಮರುಳುವವರೆಗೂ ಪೋಷಕರ ಆತಂಕ ತಪ್ಪಿದ್ದಲ್ಲ. ಆಟವಾಡಲು ಹೊರ ಹೋದ ಮಗು ಸುರಕ್ಷಿತವಾಗಿ ಮನೆ ತಲುಪಿದ ನಂತರವಷ್ಟೇ ತಾಯಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ. ಮುಗ್ಧ ಹಸುಳೆಗಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳಿಂದಾಗಿ ಪೋಷಕರ ಆತಂಕ ಸಹಜ.   ಅವರ ಆತಂಕ ನಿವಾರಿಸಲೆಂದೇ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಪುಟ್ಟ ಸಾಧನವೊಂದು ಇದೀಗ ಮಾರುಕಟ್ಟೆಗೆ ಬಂದಿದೆ.

ಮಗು ಮನೆಯಿಂದ  ಶಾಲೆಯತ್ತ ಹೆಜ್ಜೆ ಹಾಕಿದ ಕ್ಷಣದಿಂದ ಮತ್ತೆ ಮರುಳುವವರೆಗೂ ಈ ಸಾಧನ ಪ್ರತಿಯೊಂದು ಚಟುವಟಿಕೆಯನ್ನು ಧ್ವನಿ ಮೂಲಕ ಗ್ರಹಿಸಿ ದಾಖಲಿಸುತ್ತದೆ. ಈ ಮೂಲಕ ಮುಂದೆ ಎದುರಾಗಬಹುದಾದ ಆಪತ್ತನ್ನು ತಡೆವೊಡ್ಡುವ ಪ್ರಯತ್ನ ಮಾಡುತ್ತದೆ. ಒಂದು ದಿನದಲ್ಲಿ ಸುಮಾರು 13ರಿಂದ 14 ಗಂಟೆ ಅವಧಿಯಲ್ಲಿ ಬಾಲಕಿಯರ ಜತೆ ಮಾತನಾಡಿರುವವರ  ಧ್ವನಿಯನ್ನು ಈ ಸಾಧನ ದಾಖಲಿಸುತ್ತದೆ.

ಅನುಮಾನಾಸ್ಪದ ಧ್ವನಿ ರವಾನೆ
ಇದಕ್ಕಾಗಿಯೇ ರೂಪಿಸಿರುವ ವಿಶೇಷ ಸಾಫ್ಟ್‌ವೇರ್‌ ಎಲ್ಲ ಧ್ವನಿಮುದ್ರಣಗಳನ್ನು ವಿಶ್ಲೇಷಿಸಿ ಅನುಮಾನಸ್ಪದ ವರ್ತನೆಯ  ಪುರುಷರ ಧ್ವನಿಯನ್ನು ಕೆಲವೇ ನಿಮಿಷಗಳಲ್ಲಿ ಪೋಷಕರಿಗೆ ರವಾನಿಸುತ್ತದೆ. ಇದರಿಂದ ಮುಂದೆ ನಡೆಯಬಹುದಾದ ಲೈಂಗಿಕ ದೌರ್ಜನ್ಯವನ್ನು ಪ್ರಥಮ ಪ್ರಯತ್ನದಲ್ಲೇ ತಡೆಯಲು ಸಾಧ್ಯವಾಗಲಿದೆ. ಇದರೊಂದಿಗೆ ಆರೋಗ್ಯದ ಮೇಲೆ ನಿಗಾ ಇಡುವ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಕ್ಕಳ ಧ್ವನಿಯಲ್ಲಿ ಏರುಪೇರಾಗಿರುವುದು, ನೆಗಡಿ, ಕೆಮ್ಮು, ಸೀನು ಬಂದಿದ್ದು ಸೇರಿದಂತೆ ಹಲವಾರು ಮಾಹಿತಿಯನ್ನು ದಾಖಲಿಸುತ್ತದೆ. 

ಪೆನ್‌ಡ್ರೈವ್‌ ಗಾತ್ರದ ಈ ಸಾಧನವನ್ನು ಬಾಲಕಿಯರು ಜೇಬಿನಲ್ಲಿಟ್ಟುಕೊಂಡರೆ ಸಾಕು. ಬಾಲಕಿಯ 12 ಅಡಿ ಸುತ್ತಲಿನ ಧ್ವನಿಗಳನ್ನು ಈ ಸಾಧನ ದಾಖಲಿಸಿಕೊಳ್ಳುತ್ತದೆ. ಪ್ರತಿನಿತ್ಯ ಮಗು ಯಾವ ರೀತಿಯ ವಾತಾವರಣದಲ್ಲಿರುತ್ತದೆ ಎನ್ನುವ ಬಗ್ಗೆ ನಿಗಾವಹಿಸಲು ಪೋಷಕರಿಗೆ ಅನುಕೂಲವಾಗುತ್ತದೆ. ಇದರಿಂದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಉದಾಹರಣೆಗೆ ಪುರುಷನೊಬ್ಬ ಬಾಲಕಿಗೆ ಆಮಿಷವೊಡ್ಡಿ ತನ್ನತ್ತ ಸೆಳೆಯಲು ಪ್ರಯತ್ನಿಸುವಾಗ ಅಥವಾ ದುರುದ್ದೇಶಪೂರ್ವಕವಾಗಿ ಸ್ಪರ್ಶ ಮಾಡುವಾಗ ನಡೆಯುವ ಮಾತುಕತೆಗಳನ್ನು ದಾಖಲಿಸುವುದರಿಂದ ತಾಯಿಗೆ ತನ್ನ ಮಗಳ ಜತೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತದೆ.

ದಾವಣಗೆರೆ ಮೂಲದ ಅಂತರರಾಷ್ಟ್ರೀಯ ತಂತ್ರಜ್ಞಾನರಾದ ಡಿ.ಆರ್‌.ವಿಜಯಕುಮಾರ್‌ ಅವರು  ವಿನಯ ಗುಂಡಿ ಮತ್ತು ಹುಬ್ಬಳ್ಳಿಯ ಎನ್‌. ಸುಮಂತ ಸಹಕಾರದೊಂದಿಗೆ ಈ ವಿಶಿಷ್ಟ ಮತ್ತು ವಿಭಿನ್ನವಾದ ಸಾಧನ ರೂಪಿಸಿದ್ದಾರೆ. ‘ಇಂಟಲಿಜೆಂಟ್‌ ಡಿವೈಸ್‌ ಮತ್ತು ಡೀಪ್‌ ಲರ್ನಿಂಗ್‌ ಸಾಫ್ಟ್‌ವೇರ್’ ಹೆಸರಿನಲ್ಲಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ. 9 ತಿಂಗಳಲ್ಲಿ  ಈ ಸಾಧನ ರೂಪಿಸಲಾಗಿದೆ.

ಪುಟ್ಟ ಕ್ಯಾಮೆರಾ ಬರಲಿದೆ!
ಮುಂದಿನ ದಿನಗಳಲ್ಲಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ 30 ಸೆಕೆಂಡ್‌ಗೆ ಒಂದು ಚಿತ್ರ ತೆಗೆಯಬಹುದಾದ ಉಪಕರಣ ಅಭಿವೃದ್ಧಿಪಡಿಸಿದರೆ ಒಂದು ದಿನದಲ್ಲಿ ಸುಮಾರು 2 ಸಾವಿರ ಚಿತ್ರ ತೆಗೆಯುತ್ತದೆ. ನಂತರ ಕಂಪ್ಯೂಟರ್‌ಗೆ ಅಳವಡಿಸಿದಾಗ ವಿಶೇಷ ಸಾಫ್ಟ್‌ವೇರ್‌ ಕೇವಲ ಪುರುಷರ ಚಿತ್ರಗಳನ್ನು ಮಾತ್ರ ಸುಲಭವಾಗಿ ಒದಗಿಸುವ ಸೌಲಭ್ಯ ಹೊಂದಿರುವ ಯೋಜನೆಯನ್ನು ಈ ತಂತ್ರಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ.

ಘಾಸಿ  ಮಾಡಿದ ಘಟನೆ 
ಅಮೆರಿಕದಲ್ಲಿ 17 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಕುಮಾರ್‌ ಅವರು, ಜೈವಿಕ ತಂತ್ರಜ್ಞಾನ, ಆಪ್ಟಿಕಲ್‌ ಕಮ್ಯುನಿಕೇಷನ್‌ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ 34 ಅಮೆರಿಕ ಪೆಟೆಂಟ್‌ಗಳನ್ನು ಹೊಂದಿರುವುದು ಅವರ ಸಾಧನೆಯನ್ನು ಬಿಂಬಿಸುತ್ತದೆ.

‘ಶಾಲೆಗಳಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಗಳು ಮನಸ್ಸಿಗೆ ನೋವುಂಟು ಮಾಡಿದ್ದವು. ಆಗ ಚಿಂತನೆ ಮಾಡಿದಾಗ ಇಂತಹ ಸಾಧನ ರೂಪಿಸಲು ಸಾಧ್ಯವಾಯಿತು. ಪುರುಷರ ಧ್ವನಿಯನ್ನು ಮಾತ್ರ ಶುದ್ಧೀಕರಿಸುವ ಈ ಉಪಕರಣ ಕೆಟ್ಟ ಶಬ್ದಗಳು, ಅನುಮಾನಸ್ಪದವಾಗಿ ಮಾತನಾಡಿರುವುದು, ಮಗು ಅತ್ತಿರುವುದು, ಕೆಮ್ಮಿರುವುದು, ಸೀನು ಬಂದಿದ್ದು ಮುಂತಾದ ಚಟುವಟಿಕೆಗಳನ್ನು ದಾಖಲಿಸುತ್ತದೆ. ಇದರಿಂದ ಮಗುವಿನ ಜತೆಗಿನ ಪುರುಷನ ವರ್ತನೆಯನ್ನು ಗಮನಿಸಿ ತಡೆಯಲು ಸಾಧ್ಯ’ ಎನ್ನುತ್ತಾರೆ ವಿಜಯಕುಮಾರ್‌.

‘ದೌರ್ಜನ್ಯ ನಡೆಸಲು ಪ್ರಯತ್ನಿಸುವ ವ್ಯಕ್ತಿ ಪದೇ ಪದೇ ಬಾಲಕಿ ಜತೆ ಒಂದು ರೀತಿಯ ಸಲುಗೆ ಬೆಳೆಸಲು ಅಥವಾ ಆತ್ಮೀಯವಾಗಲು ಹಾತೊರೆಯುತ್ತಾನೆ. ಈ ಪ್ರಯತ್ನದಲ್ಲಿ ಆತನ ನಡವಳಿಕೆಗಳು ಮುಖ್ಯವಾಗುತ್ತವೆ. ಮಾತಿನ ಮೂಲಕ ನಡೆಯುವ ನಡವಳಿಕೆಯನ್ನು ಗ್ರಹಿಸುವುದೇ ಈ ಸಾಧನದ ಪ್ರಮುಖ ಅಂಶ’  ಎಂದು ಅವರು ವಿವರಿಸುತ್ತಾರೆ. ಕಂಪ್ಯೂಟರ್‌ ಅಥವಾ ಅಂಡ್ರಾಯ್ಡ್‌ ಮೊಬೈಲ್‌ಗೆ ಈ ಉಪಕರಣ ಅಳವಡಿಸಿ ಧ್ವನಿಯನ್ನು ಕೇಳಿಸಿಕೊಳ್ಳಬಹುದು. ಈ ಉಪಕರಣದಲ್ಲಿ ‘ಆನ್‌’ ಮತ್ತು ‘ಆಫ್‌’ ಮಾಡುವ ಬಟನ್‌ಗಳು ಇಲ್ಲ. 

ವಿಶೇಷ ಸಾಫ್ಟ್‌ವೇರ್‌ನಿಂದ ಮಾತ್ರ ಮಾಹಿತಿ ಪಡೆಯಲು ಸಾಧ್ಯ. ಇದನ್ನು ಸಹ ಪೋಷಕರು ಪಾಸ್‌ವರ್ಡ್‌ನಿಂದ ಮಾತ್ರ ತೆರೆಯಲು ಸಾಧ್ಯ. ಯಾರಿಗೂ ಅಳಸಿ ಹಾಕಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ ಇಲ್ಲದೆ ಇದೇ ಉಪಕರಣದಲ್ಲಿ ಸಾಫ್ಟ್‌ವೇರ್‌ ಅಳವಡಿಸುವ ಪ್ರಯತ್ನದಲ್ಲಿ ವಿಜಯಕುಮಾರ್‌ ಅವರ ತಂಡ ಸಾಗಿದೆ. ಕೈಗೆಟಕುವ ದರದಲ್ಲಿ ಈ ಉಪಕರಣ ಲಭ್ಯ.

***
"ಅಮೆರಿಕದ ಬೇಹುಗಾರಿಕೆ ಸಂಸ್ಥೆಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ಸಹ ವಿಶೇಷ ಸಾಫ್ಟ್‌ವೇರ್‌ ಬಳಸುತ್ತಿದೆ. ನೂರಾರು ಗಂಟೆಗಳ ಮಾತುಕತೆಯ ವಿವರಗಳಲ್ಲಿ ಕೇವಲ ಭದ್ರತೆ ಮತ್ತು ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದ ವಿವರಗಳನ್ನು ಮಾತ್ರ ಅದು ಹೆಕ್ಕಿ ತೆಗೆಯುತ್ತದೆ. ಇದರಿಂದ ಭಯೋತ್ಪಾದನೆ ನಿಯಂತ್ರಿಸಲು ಸಾಧ್ಯವಾಗಿದೆ.

ಇದೇ ಸೂತ್ರದ ಅಡಿಯಲ್ಲಿ ಪುರುಷರ ಧ್ವನಿಯನ್ನು ಹೆಕ್ಕಿ ತೆಗೆಯುವ ಪ್ರಯತ್ನವನ್ನು ಈ ಉಪಕರಣ ಮಾಡುತ್ತದೆ. ದೌರ್ಜನ್ಯ ನಡೆಯುವ ಸ್ಥಳಕ್ಕೆ ತಕ್ಷಣವೇ ತೆರಳಲು ಯಾರಿಗೂ ಸಾಧ್ಯವಿಲ್ಲ. ಆದರೆ, ದೌರ್ಜನ್ಯ ನಡೆಯುವ ಕೆಲವು ದಿನಗಳ ಮುನ್ನ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತವೆ. ಮಗು ಸಹ ಪೋಷಕರಿಗೂ ಈ ರೀತಿಯ ವಿಷಯಗಳನ್ನು ಬಹಿರಂಗಪಡಿಸದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೋವು ಅನುಭವಿಸುತ್ತವೆ. ಈ ಚಟುವಟಿಕೆಗಳನ್ನು ಗಮನಿಸಿದರೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ದೌರ್ಜನ್ಯ ತಡೆಯಲು ಸಾಧ್ಯ".

ಮಾಹಿತಿಗೆ: 9945074619 ಅಥವಾ ವೆಬ್‌ಸೈಟ್‌ www.safehalo.in ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT