ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು, ಹಳ್ಳಿ ಕಾಣಿಸುವ ಬಣ್ಣ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಕಲಾಪ

ಪದ್ಯವೆಂದರೆ ಹೇಗಿರಬೇಕು ಎಂದು ಯಾರಾದರೂ ಕೇಳಿದರೆ ಒಮ್ಮೆಲೇ ಉತ್ತರಿಸುವುದು ಕಷ್ಟ. ಪದ್ಯ ಪದ್ಯದ ಹಾಗಿರಬೇಕು ಅಷ್ಟೆ. ಅದು ಭಾವಕ್ಕೆ ನಿಲುಕುವಂತಿರಬೇಕು. ಆಗ ಮಾತ್ರ ಹಿತವೆನಿಸುತ್ತದೆ. ಚಿತ್ರಕಲೆಯೂ ಹಾಗೇಯೆ. ಕಲೆಯ ಪ್ರಕಾರ ಯಾವುದೇ ಇರಬಹುದು. ಅದು ಮನಮುಟ್ಟುವಂತಿರಬೇಕು.

ಖ್ಯಾತ ಕಲಾವಿದರಾದ ಗಿನಿ ಸಿಂಗ್, ಬಶೀರ್ ಅಹಮದ್, ಮಂಜುಳಾ ಟಿ.ತುಕಡಿ ಹಾಗೂ ಗೋಪಾಲ್ ಟಿ.ದೇವರೆಡ್ಡಿ ಅವರ ಕಲಾಕೃತಿಗಳಲ್ಲಿ ಹೆಣ್ಣಿನ ಭಾವನೆಗಳು, ಹಳ್ಳಿಯ ಜೀವನ ಹಾಗೂ ಪ್ರಕೃತಿಯ ರಮ್ಯ ಚಿತ್ರಣ ಸುಂದರವಾಗಿ ಮೈದಳೆದಿವೆ. ಹಾಗಾಗಿಯೇ ಇವು ನೋಟಕ್ಕೆ ಮಾತ್ರವಲ್ಲ ಭಾವಕ್ಕೂ ನಿಲುಕುವುದರಿಂದ ಆಪ್ತವೆನಿಸುತ್ತವೆ.

ಕಲಾವಿದ ಬಶೀರ್ ಅವರ ಕಲಾಕೃತಿಗಳಲ್ಲಿ ಹೆಣ್ಣಿನ ವಿವಿಧ ಮುಖಗಳು ಅನಾವರಣಗೊಂಡಿದೆ. ಸ್ತ್ರೀ-ಪುರುಷ ಸಮಾನತೆ, ಹೆಣ್ಣಿನ ಆಸೆ ಆಕಾಂಕ್ಷೆ, ಕನಸುಗಳು ಕುಂಚದಲ್ಲಿ ನವಿರಾಗಿ ಮೂಡಿವೆ. ಹೆಣ್ಣಿನ ವ್ಯಕ್ತಿತ್ವಕ್ಕೆ ಮೀನಿನ ಗುಣವನ್ನು ಹೋಲಿಕೆಯಾಗಿಟ್ಟುಕೊಂಡು ಚಿತ್ರ ರಚಿಸಿರುವುದು ಇವರ ಕಲೆಗೆ ಗಟ್ಟಿತನ ತಂದುಕೊಟ್ಟಿದೆ. ಮೀನಿನಂತೆ ಹೆಣ್ಣು ಕೂಡ ತುಂಬಾ ತೀಕ್ಷ್ಣ ವ್ಯಕ್ತಿತ್ವದವಳು. ನೀರಿನಲ್ಲಿ ಮೀನಿನಂತೆ ಈಜುವ, ಆಕಾಶದಲ್ಲಿ ಹಕ್ಕಿಯಂತೆ ಹಾರುವ ಕನಸಿನವಳು. ಆಧುನಿಕ ಮಹಿಳೆ ಗಂಡಿನಷ್ಟೇ ಸರಿಸಮನಾಗಿ ಬದುಕುವ ಛಾತಿ ಉಳ್ಳವಳು ಎಂಬುದನ್ನು ಇವರ ಕಲಾಕೃತಿಗಳು ಸಾರುತ್ತವೆ.

ಕಲಾವಿದೆ ಮಂಜುಳಾ ಅವರ ಕಲಾಕೃತಿಗಳಲ್ಲಿ ಹಳ್ಳಿ ಜೀವನದ ಸೊಗಡಿದೆ. ಇವರ ಕುಂಚದಲ್ಲಿ ಹಳ್ಳಿಗರ ಬದುಕು, ಭಾವನೆ, ಸಂಸ್ಕೃತಿ ಎಲ್ಲವೂ ಸುಂದರವಾಗಿ ಮೂಡಿದೆ. ಇವರ ಎಲ್ಲ ಕಲಾಕೃತಿಯಲ್ಲಿ ಚಿಟ್ಟೆಯನ್ನು ಕಾಣಬಹುದು. ಚಿಟ್ಟೆಯನ್ನು ಪ್ರಗತಿಯ ಸಂಕೇತವಾಗಿ ಬಳಸಿಕೊಂಡಿದ್ದಾರೆ. ಇವರ ಮಮತೆ ಎಂಬ ಕಲಾಕೃತಿ ಆಕರ್ಷಕವಾಗಿದೆ. ತಾಯಿಯಂತೆ ತಂದೆ ಕೂಡ ವಾತ್ಸಲ್ಯಹೃದಯಿ. ತಾಯಿಯ ಅನುಪಸ್ಥಿತಿಯಲ್ಲಿ ತಂದೆ ಮಗುವಿನ ಲಾಲನೆ  ಪಾಲನೆ ಮಾಡಬಲ್ಲ. ಅಪ್ಪ ಕೂಡ ಅಂತಃಕರಣವುಳ್ಳವನು.

ಅವನೊಳಗೂ ಒಂದು ತಾಯಿ ಮನಸ್ಸು ಇದೆ ಎಂಬುದನ್ನು ಕಲಾಕೃತಿ ಸಾರುತ್ತದೆ.
ಖ್ಯಾತ ಕಲಾವಿದೆ ಗಿನಿ ಸಿಂಗ್ ಅವರ ಕಲಾಕೃತಿಗಳು ಹೆಣ್ಣಿನ ಮನಸ್ಸಿಗೆ ಸಂಬಂಧಿಸಿದವು. ಒಂಟಿ ಮಹಿಳೆಯ ಒಳಮನಸ್ಸಿನಲ್ಲಿ ಸ್ಫುರಿಸುವ ಎಲ್ಲ ಬಗೆಯ ಭಾವನೆಗಳು ಇಲ್ಲಿ ಬಣ್ಣದ ಹೊದಿಕೆ ಹೊದ್ದು ಅನಾವರಣಗೊಂಡಿವೆ. ಕಲಾವಿದ ಗೋಪಾಲ್ ಅವರ ಕಲಾಕೃತಿಗಳು ನಿಸರ್ಗಕ್ಕೆ ಸಂಬಂಧಿಸಿದವು.
 
ಕರ್ನಾಟಕದ ಶಿಲ್ಪಕಲಾ ವೈಭವ ಇವರ ಕುಂಚದಲ್ಲಿ ಝರಿಯಾಗಿ ಹರಿದಿದೆ. ಈ ಅಪರೂಪದ ಕಲಾಕೃತಿಗಳು ಶನಿವಾರದವರೆಗೆ ಪ್ರದರ್ಶನಗೊಳ್ಳಲಿವೆ.  ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ ಮಿನಿಸ್ಟರ್ 13, ಕನ್ನಿಂಗ್‌ಹ್ಯಾಮ್ ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT