ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ನಾಪತ್ತೆ: ಪತ್ತೆಯಾಗದ ಪ್ರಕರಣಗಳೇ ಹೆಚ್ಚು

Last Updated 2 ಡಿಸೆಂಬರ್ 2013, 8:18 IST
ಅಕ್ಷರ ಗಾತ್ರ

ಮಂಗಳೂರು: ನಾಪತ್ತೆಯಾಗಿದ್ದಾರೆ, ಕಾಣೆಯಾಗಿದ್ದಾರೆ... ಎಂಬ ಶೀರ್ಷಿಕೆಯ ಸುದ್ದಿಗಳು ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಅದು ಸಾಮಾನ್ಯ ಸಂಗತಿ ಅಲ್ಲ. ಅನೇಕ ಬಾರಿ ನಾಪತ್ತೆ ಎಂಬ ಸುದ್ದಿಗಳು ಗಮನಕ್ಕೂ ಬರುವುದಿಲ್ಲ. ಬಂದರೂ ಅವುಗಳ ಕಡೆಗೆ ಅಲಕ್ಷ್ಯವೇ ಹೆಚ್ಚು. ನಾಪತ್ತೆಯಾದವರ ಬಗ್ಗೆ, ಅಂತಹ ಪ್ರಕರಣಗಳ ಬಗ್ಗೆ ಹಗುರವಾಗಿ ಮಾತನಾಡುವವರೇ ಹೆಚ್ಚು.

ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಕಳೆದ ಮಂಗಳವಾರ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅವರು ಮಂಡಿಸಿದ ವರದಿಯ ಅಂಶಗಳು ಒಂದು ಕ್ಷಣ ಎಲ್ಲರನ್ನೂ ಚಕಿತರನ್ನಾಗಿಸುವಂತೆ ಮಾಡಿದೆ.

ಸಮಿತಿ ಮಂಡಿಸಿದ ವರದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಒಟ್ಟು ೩೩೫ ಹೆಣ್ಣು ಮಕ್ಕಳು ಕಾಣೆ­ಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಸರ್ಕಾರಕ್ಕೆ ಸೂಚಿಸಿರುವುದು ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಮೂರು ವರ್ಷದ ಅವಧಿಯಲ್ಲಿ ಕಾಣೆಯಾದ, ಕೊಲೆಯಾದ, ಆತ್ಮಹತ್ಯೆ ಮಾಡಿಕೊಂಡ, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳ ಎಲ್ಲ  ಪ್ರಕರಣಗಳನ್ನು ತನಿಖೆಗೆ ಒಪ್ಪಿಸಬೇಕು ಎಂದು ಸಮಿತಿ ಸರ್ಕಾರವನ್ನು ಸಮಿತಿ ಒತ್ತಾಯಿಸಿದೆ. ಈ ಸಂಖ್ಯೆಯಲ್ಲಿ ಯುವತಿಯರು ಕಾಣೆಯಾಗಿರುವುದಕ್ಕೆ ಇರುವ ಕಾರಣದ ಬಗ್ಗೆಯೂ ತನಿಖೆ ನಡೆಸಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ವಿಧಾನ ಮಂಡಲದ ಸಮಿತಿ ಕಳೆದ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಪತ್ತೆ ಆಗದ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪ ಆಗಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಪೊಲೀಸರು ಈ ಬಗ್ಗೆ ಬೇಜವಾಬ್ದಾರಿ ತೋರಿದ್ದಾರೆ. ಕರಾವಳಿ ಜಿಲ್ಲೆಯಲ್ಲಿಯೇ ಇಷ್ಟು ಪ್ರಕರಣಗಳು ಪತ್ತೆ ಆಗದೆ ಇರುವುದು ಪೊಲೀಸರಿಗೆ ಅವಮಾನ. ಇದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ಆದಷ್ಟು ಬೇಗ ಇವುಗಳ ತನಿಖೆ ಆಗಬೇಕು ಎಂದು ಶಕುಂತಳಾ ಶೆಟ್ಟಿ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.

ಹೆಣ್ಣುಮಕ್ಕಳು ನಾಪತ್ತೆ ಆದ ಕೂಡಲೇ ಆಕೆ ಯಾರ ಜತೆಗಾದರೂ ಓಡಿ ಹೋಗಿರಬಹುದು. ಯಾರನ್ನಾದರೂ ಪ್ರೀತಿಸುತ್ತಿರಬಹುದು. ಆತನ ಜತೆ ನಾಪತ್ತೆಯಾಗಿರಬಹುದು ಎಂಬ ಬೇಜವಾಬ್ದಾರಿಯ ಮಾತುಗಳನ್ನು ಆಡುತ್ತಾರೆ. ಹುಡುಗರ ಜತೆಗೆ ಓಡಿ ಹೋಗಿದ್ದರೆ ಹುಡುಗರೂ ನಾಪತ್ತೆಯಾಗಬೇಕಲ್ಲ. ಅಂತಹ ಪ್ರಕರಣಗಳೂ ಗಂಭೀರವಾದುದು. ಜಿಲ್ಲೆಯಲ್ಲಿ ನಡೆದ ಅತ್ಯಾಚಾರ, ಕೊಲೆ, ಆತ್ಮಹತ್ಯೆ ಪ್ರಕರಣಗಳು ನಾಪತ್ತೆಯಾದ 335 ಮಂದಿಯಲ್ಲಿ ಸೇರಿರಬಹುದು ಎಂದು ಅವರು ವಿವರಿಸಿದರು.

2009ರ ಅಕ್ಟೋಬರ್‌ನಲ್ಲಿ ಪತ್ತೆಯಾದ ಸಯನೈಡ್‌ ಮೋಹನ್‌ ಕುಮಾರ್‌ ಪ್ರಕರಣದಲ್ಲಿ ಮೃತಪಟ್ಟ 20 ಮಹಿಳೆಯರ ಕೊಲೆ ಪ್ರಕರಣವೂ ಇರಬಹುದು ಎಂದು ಅವರು ವಿಶ್ಲೇಷಿಸಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಂತನು ಸಿನ್ಹ, ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ವಾಸ್ತವಾಂಶಗಳ ಬಗ್ಗೆ ಮತ್ತು ತನಿಖೆ ಮಾಡಬೇಕಾದ ಬಗ್ಗೆಯೂ ಕೂಲಂಕಷವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಲಘುವಾಗಿ ಪರಿಗಣಿಸದಿರಿ: ಮೋಹನ್‌ ಕುಮಾರ್‌ ಬಂಧನ ಆದ ಸಂದರ್ಭದಲ್ಲಿ ಮಂಗಳೂರಿಗೆ ಬಂದಿದ್ದ ಆಗಿನ ಪೊಲೀಸ್‌ ಮಹಾನಿರ್ದೇಶಕ ಅಜಯ್‌ ಕುಮಾರ್ ಸಿಂಗ್‌ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣವನ್ನು ಲಘುವಾಗಿ ಪರಿಗಣಿಸದಂತೆ ಸೂಚಿಸಿದ್ದರು. ಆದರೆ ಪೊಲೀಸ್‌ ಇಲಾಖೆ ನಾಪತ್ತೆ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿಲ್ಲ. ಅವುಗಳನ್ನು ಸಮಗ್ರವಾಗಿ ತನಿಖೆ ಮಾಡಿದರೆ ಸತ್ಯಾಂಶ ಹೊರಬರುವುದರಲ್ಲಿ ಅನು­ಮಾನ ಇಲ್ಲ ಎಂಬ ಮಾತುಗಳೂ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಸರಣಿ ಕೊಲೆ ಪ್ರಕರಣದಲ್ಲಿ ಮೃತಪಟ್ಟ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೆಲವು ಪ್ರಕರಣಗಳ ದೂರು ಕೂಡ ದಾಖಲಾಗಿತ್ತು. ಮೋಹನ್‌ ಕುಮಾರ್‌ ಒಬ್ಬನೇ ಅಷ್ಟು ಮಂದಿಯನ್ನು ಕೊಲೆ ಮಾಡಿದ್ದ ಎಂಬ ವಿಚಾರ ಬೆಳಕಿಗೆ ಬಂದಾಗ ಮಾತ್ರ ಎಲ್ಲರಲ್ಲೂ ಅಚ್ಚರಿ ಕಾದಿತ್ತು.

ಒಟ್ಟಿನಲ್ಲಿ ನಾಪತ್ತೆ ಪ್ರಕರಣ ದಾಖಲಾದ ಸಂದರ್ಭದಲ್ಲಿ ಪ್ರೀತಿಸುತ್ತಿದ್ದವನ ಜತೆ ಓಡಿ ಹೋಗಿರಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ಬಳಿಕ ಅವರು ನೆಮ್ಮದಿಯಿಂದ ಜೀವನ ನಡೆಸುತ್ತಿರಲೂ ಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಮಾನವ ಕಳ್ಳ ಸಾಗಣೆಗೂ ಮಹಿಳೆಯರು ಬಲಿಯಾಗುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಗಂಭೀರವಾದ ವಿಚಾರವಾಗಿದ್ದು, ಪೊಲೀಸರು ಪತ್ತೆಗೆ ಶ್ರಮಿಸಬೇಕಾದ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT