ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರ ಮಡಿಲು ಸೇರಿದ ಕಂದಮ್ಮಗಳು

Last Updated 14 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ತುಮಕೂರು: ಕಳೆದ ವಾರ ದಾರಿ ತಪ್ಪಿ ಆಟೊ ಚಾಲಕರೊಬ್ಬರ ಮಾಹಿತಿಯಿಂದ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದ ಮೂವರು ಪುಟಾಣಿಗಳು ಸೋಮವಾರ ಹೆತ್ತವರ ಮಡಿಲು ಸೇರಿದವು.

ಶ್ರೀರಾಜ್ ಚಿತ್ರಮಂದಿರದ ಬಳಿ ಅಳುತ್ತಾ ನಿಂತಿದ್ದ ಈ ಪುಟಾಣಿಗಳನ್ನು ಆಟೊ ಚಾಲಕರೊಬ್ಬರು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ದಾರಿ ತಪ್ಪಿದ ಪುಟಾಣಿಗಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.

ಪತ್ರಿಕೆಗಳಲ್ಲಿ ಮಕ್ಕಳ ಚಿತ್ರಕಂಡ ಮಕ್ಕಳ ಕಲ್ಯಾಣ ಸಮಿತಿಯನ್ನು ಪೋಷಕರು ಸಂಪರ್ಕಿಸಿದ್ದರು. ಗುರುತು ಪತ್ತೆ ಹಚ್ಚುವಿಕೆ ಪ್ರಕ್ರಿಯೆ ನಡೆಸದೆ ಮಕ್ಕಳನ್ನು ಹಸ್ತಾಂತರಿಸಲು ಸಾಧ್ಯವಿಲ್ಲದ ಕಾರಣ ಸೋಮವಾರ ಪುಟಾಣಿಗಳಿಂದ ಹೆತ್ತವರ ಗುರುತು ಪತ್ತೆ ಪ್ರಕ್ರಿಯೆ ನಡೆಯಿತು.

ತಮ್ಮ ತಂದೆ-ತಾಯಿ ಕಾಣುತ್ತಿದ್ದಂತೆ ಪುಟಾಣಿಗಳು ಓಡಿ ಅವರನ್ನು ಅಪ್ಪಿಕೊಂಡವು. ಹಲವು ಸುತ್ತಿನ ಪ್ರಕ್ರಿಯೆಯಲ್ಲೂ ಹೆತ್ತವರನ್ನು ಪುಟಾಣಿಗಳು ಪತ್ತೆ ಹಚ್ಚಿದ್ದರಿಂದ ಬಂದವರಿಗೆ ಮಕ್ಕಳನ್ನು ಹಸ್ತಾಂತರಿಸಲಾಯಿತು.

ಪತ್ತೆಯಾದ ಮೂವರು ಪುಟಾಣಿಗಳಲ್ಲಿ ಭೀಮವ್ವ (4), ನೀಲಾ (3) ಮೂಲತಃ ಯಾದಗಿರಿ ಜಿಲ್ಲೆಯ ರ‌್ಯಾನಗೊಡೆ ಗ್ರಾಮದ ಕಲ್ಲೇಶಪ್ಪ, ಎಲ್ಲಮ್ಮ ಅವರ ಮಕ್ಕಳು. ನಂದಿತಾ (3) ಇದೇ ಗ್ರಾಮದ ಯಂಕಪ್ಪ ಅವರ ಮಗಳು. ಇವರು ಕಟ್ಟಡ ಕಾರ್ಮಿಕರಾಗಿದ್ದು, ಈ ಎರಡು ಕುಟುಂಬಗಳು ನಗರದ ಸಾಬರಪಾಳ್ಯದಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿವೆ. ಅಮ್ಮ, ಅಪ್ಪ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಅವರನ್ನು ಹುಡುಕುತ್ತಾ ಮನೆಯಿಂದ ದೂರ ಬಂದ ಈ ಪುಟಾಣಿಗಳು ದಾರಿ ತಪ್ಪಿಸಿಕೊಂಡಿದ್ದವು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ.ರಾಜ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT