ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತೂರಿನಲ್ಲಿಹಳ್ಳಿ ಹಬ್ಬ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

2009 ನೇ ಡಿಸೆಂಬರ್ 27 ಕಾಫಿ ಬೆಳೆಗಾರರ ಸಮುದಾಯದಲ್ಲಿ ಒಂದು ಅವಿಸ್ಮರಣೀಯ ದಿನ. ಚಿಕ್ಕಮಗಳೂರು ಜಿಲ್ಲೆಯ ದೇವವೃಂದದ `ಕೃಷಿಕ ಪತ್ರಿಕೆ~ ಆಯೋಜಿಸಿದ್ದ `ಉತ್ತಮ ಕಾಫಿ ಬೆಳೆಗಾರ~ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ `ಹಳ್ಳಿ ಹಬ್ಬ~ವನ್ನು ಸಂಘಟಿಸಲಾಗಿತ್ತು.
 
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು  ಹಬ್ಬದ ಮುಖ್ಯ ಉದ್ದೇಶ. ಹಬ್ಬಕ್ಕೆ ಬರುವಂತೆ ನೀಡಿದ್ದ ಆಮಂತ್ರಣಕ್ಕೆ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ಸ್ಪಂದಿಸಿದ್ದರು.

 ಮೂಡಿಗೆರೆ ತಾಲ್ಲೂಕಿನ ಪುಟ್ಟ ಹಳ್ಳಿ ದೇವವೃಂದದಲ್ಲಿ ಕಾಫಿ ಸಮುದಾಯದ ಪ್ರಥಮ ಪ್ರಶಸ್ತಿ ಸಮಾರಂಭ ಯಶಸ್ವಿಯಾದಾಗ ಹಳ್ಳಿಯಲ್ಲಿ ಇಂಥ ಕಾರ್ಯಕ್ರಮ ಮಾಡಬಹುದೇ ಎಂದೇ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.

ಕಾಫಿ ಬೆಳೆಗಾರರು ಹಾಗೂ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ  ಅವುಗಳಿಗೆ ಪರ್ಯಾಯ ಕ್ರಮಗಳನ್ನು ಹುಡುಕುವ ಕೆಲಸ ಈ ಹಳ್ಳಿಹಬ್ಬದ ವೇದಿಕೆಯಿಂದ ಪ್ರಾರಂಭವಾಯಿತು. ನಂತರದ ಎರಡು ವರ್ಷಗಳಲ್ಲಿ ಕಾಫಿ ಮತು ಭತ್ತ ಬೇಸಾಯದಲ್ಲಿ ನೂತನ ತಂತ್ರಜ್ಞಾನಗಳನ್ನು ಪರಿಚಯಿಸಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೃಷಿಕ ಪತ್ರಿಕೆ ಸಾಕಷ್ಟು ಕೆಲಸಗಳನ್ನು ಮಾಡಿದೆ.

ಮುನ್ನೂರು ವರ್ಷಗಳ ಇತಿಹಾಸವಿರುವ ಸಾವಿರಾರು ಕೋಟಿ ವ್ಯವಹಾರ ನಡೆಸುವ ಭಾರತೀಯ ಕಾಫಿ ಉದ್ಯಮದಲ್ಲಿ ಬೆಳೆಗಾರರನ್ನು ಬಿಟ್ಟು ಉಳಿದವರನ್ನು ಗುರುತಿಸುವ ಕೆಲಸ ಆಗುತ್ತಿದೆ. ಆದರೆ ಕಾಫಿ ಉದ್ಯಮದ ಮೂಲ ವ್ಯಕ್ತಿ ಬೆಳೆಗಾರ. ಅಂತಹ ಬೆಳೆಗಾರನ ಸ್ವಾಭಿಮಾನಕ್ಕೆ ಮನ್ನಣೆ ಇಲ್ಲದನ್ನು ಗಮನಿಸಿದ   ಪತ್ರಿಕೆ ಈಗ ಎರಡನೇ ವರ್ಷದ ಹಳ್ಳಿ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಸಂಘಟಿಸಲು ಮುಂದಾಗಿದೆ.

ನವೆಂಬರ್ 11ರಂದು  ಎರಡನೇ ರಾಜ್ಯ ಮಟ್ಟದ ಉತ್ತಮ ಕಾಫಿ ಬೆಳೆಗಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಒಳಗೊಂಡ ಹಳ್ಳಿಹಬ್ಬ ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ತಪ್ಪಲಿನ ಹೆತ್ತೂರು ಗ್ರಾಮದಲ್ಲಿ ನಡೆಯಲಿದೆ. ಸುಂದರ ಹಸಿರು ಪರಿಸರದ ನಡುವೆ ಇಪ್ಪತ್ತು ಎಕರೆಯ ಹಸಿರು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಾವಿರಾರು ಬೆಳೆಗಾರರು ಬರುವ ನಿರೀಕ್ಷೆ ಇದೆ.

ಅಂದು ಬೆಳಿಗ್ಗೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು ಕಾಫಿ ಬೇಸಾಯದಲ್ಲಿ ಸರಳೀಕರಣ, ಯಾಂತ್ರೀಕರಣ ಮತ್ತು ಜಾಗತೀಕರಣ ಎಂಬ ವಿಷಯಗಳ ಬಗ್ಗೆ ಪ್ರತಿಭಾವಂತ ಬೆಳೆಗಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಸರಳೀಕರಣ ವಿಷಯದಲ್ಲಿ ಆಯ್ದ ಬೆಳೆಗಾರರು ತಮ್ಮ ಕಾಫಿ ಬೇಸಾಯದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಯಾಂತ್ರೀಕರಣ ಕುರಿತು ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ರಘುರಾಮುಲು ಮಾತನಾಡುತ್ತಾರೆ. ಕಾಫಿ ಮಂಡಳಿಯ ಸಬ್ಸಿಡಿ ಯೋಜನೆಗೆ ಸೇರಿರುವ ಹಲವಾರು ಕಂಪನಿಗಳ ಯಂತ್ರೋಪಕರಣಗಳ  ಪ್ರದರ್ಶನ ಮತ್ತು ಮಾರಾಟವಿದೆ. ತಮಿಳುನಾಡಿನ ಕಾಫಿ ಬೆಳೆಗಾರರಾದ ರೇಗಿಸ್ ಗುಸ್ತಾವೇ ಅವರು ತಮ್ಮ ಕಾಫಿ ಬೇಸಾಯವನ್ನು ಸಂಪೂರ್ಣ ಯಾಂತ್ರೀಕರಣಕ್ಕೆ ಒಳಪಡಿಸಿದ್ದಾರೆ. ಈ ಕುರಿತು ಅವರು ತಮ ಅನುಭವಗಳನ್ನು ರೈತರೊಂದಿಗೆ ಹಂಚಿಕೊಳ್ಳಲಿದ್ದಾರೆ. 

 ಜಾಗತೀಕರಣ ಸಂದರ್ಭದಲ್ಲಿ ಭಾರತೀಯ ಕಾಫಿ ಉದ್ಯಮ ತನ್ನ ವಿಶೇಷಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಹಾಗೂ ಜಾಗತಿಕ ತಾಪಮಾನದ ವಿಷಯದಲ್ಲಿ ಅಂತರರಾಷ್ಟ್ರೀಯ ಗಮನಸೆಳೆದ ಪುಷ್ಪನಾಥ ಕೃಷ್ಣಮೂರ್ತಿ ಅವರು ವಿಷಯ ಮಂಡಿಸಲಿದ್ದಾರೆ. ಕೃಷಿಕ ಪತ್ರಿಕೆಯ ಸಂಪಾದಕ ಮಂಡಳಿ ಮತ್ತು ಮಾಧ್ಯಮ ಅತಿಥಿಗಳೊಂದಿಗೆ ಬೆಳೆಗಾರರು ಸಂವಾದ ನಡೆಸಲಿದ್ದಾರೆ.

ವಸ್ತು ಪ್ರದರ್ಶನ ಮಳಿಗೆಗಳಲ್ಲಿ ನರ್ಸರಿ ಬುಟ್ಟಿ ತುಂಬಿಸುವಲ್ಲಿ ನೂತನ ತಾಂತ್ರಿಕತೆ, ಕಾಳು ಮೆಣಸು ಕಸಿ ಕಟ್ಟುವುದು, ಮೆಣಸು ಬಳ್ಳಿ ಕಟ್ಟುವ ನೂತನ ವಿಧಾನ, ಮರ ಹತ್ತುವ ಸುಲಭ ಸಾಧನಗಳು, ಬೋರ್ಡೋ ದ್ರಾವಣ ತಯಾರಿಕೆ, ಶಿರಸಿ ಭಾಗದ ರೈತರೇ
ಸಂಶೋಧಿಸಿರುವ 20 ಸಾವಿರ ರೂ.ಮೌಲ್ಯದ ನೂತನ ರೀತಿಯ ನಾಟಿ ಯಂತ್ರ ಸೇರಿದಂತೆ ಬೇಸಾಯದಲ್ಲಿ ಬಳಕೆಯಾಗುವ ಹಲವಾರು ಉಪಕರಣಗಳ ಪ್ರಾತ್ಯಕ್ಷಿಕೆಗಳಿರುತ್ತವೆ.

ಹಳೆಯ ಕಾಲದ ಬೇಸಾಯ ಪರಿಕರಗಳ ಪ್ರದರ್ಶನ ಮತ್ತು ಮರೆಯಾಗುತ್ತಿರುವ ಹಳೆಯ ಮಾದರಿಯ ಭತ್ತ ಒಕ್ಕಲಾಟದ ನೇರ ಪ್ರಾತ್ಯಕ್ಷಿಕೆಯೂ ಇದೆ.

ಇಳಿ ಸಂಜೆಯಲ್ಲಿ ಉತ್ತಮ ಕಾಫಿ ಬೆಳೆಗಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ. ರೋಬಾಸ್ಟ ಮತ್ತುಅರೇಬಿಕಾ ಕಾಫಿ ಬೇಸಾಯದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ  ಬೆಳೆಗಾರರನ್ನು ಸನ್ಮಾನಿಸಲಾಗುವುದು. ಸಮಾರಂಭದಲ್ಲಿ  ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಲೆ ತಂಡದವರು ಪ್ರದರ್ಶನ ನೀಡಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಸಂಯೋಜಕ ದಿನೇಶ್ ದೇವವೃಂದ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 82770 62933

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT