ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತೂರು: ಆನೆಗಳ ವಿರುದ್ಧ ಏಗೋರು ಯಾರು?

Last Updated 8 ಜುಲೈ 2013, 8:41 IST
ಅಕ್ಷರ ಗಾತ್ರ

ಸಕಲೇಶಪುರ: ಹೆತ್ತೂರು, ಯಸಳೂರು ಹೋಬಳಿಗಳಷ್ಟು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ಮತ್ತೊಂದು ಹೋಬಳಿ ಜಿಲ್ಲೆಯಲ್ಲಿ ಇಲ್ಲ ಎಂಬುದಕ್ಕೆ ಅಲ್ಲಿನ ಸಮಸ್ಯೆಗಳೇ ಜೀವಂತ ಸಾಕ್ಷಿ.

ಈ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ರಸ್ತೆ, ಕುಡಿಯುವ ನೀರು, ಸಾರಿಗೆ, ಶಿಕ್ಷಣ ಈ ಎಲ್ಲಾ ಮೂಲ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, ಕಾಡಾನೆಗಳ ದಾಳಿಗೆ ಒಬ್ಬರ ಹಿಂದೆ ಒಬ್ಬರು ಸಾಯುತ್ತಲೇ ಇದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕಾಡಾನೆಗಳ ಪಾಲಾಗುತ್ತಿದೆ. ದಶಕದ ಹಿಂದೆ ಸಮೃದ್ಧವಾಗಿ ಭತ್ತ, ಏಲಕ್ಕಿ, ಕಾಫಿ, ಬಾಳೆ, ಹಸಿರು ಮೆಣಸಿನಕಾಯಿ ಬೆಳೆದು ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಕುಟುಂಬಗಳು ಇಂದು ಅಂಗಡಿಯಿಂದ ಅಕ್ಕಿಯನ್ನು ಕೊಂಡು ತಿನ್ನುವ ಕಷ್ಟದ ಸ್ಥಿತಿಗೆ ಬಂದಿವೆ.

ಸಹನೆಯ ಕಟ್ಟೆ ಒಡೆಯಿತು: ಎಲ್ಲಾ ನೋವು ಸಹಿಸಿಕೊಂಡಿದ್ದವರಿಗೆ ಚಿಕ್ಕಲ್ಲೂರಿನಲ್ಲಿ ಶನಿವಾರ ಕಣ್ಣೆದುರಿನಲ್ಲೇ ರೈತ ಲಕ್ಷ್ಮಣಗೌಡ ಅವರನ್ನು ಕಾಡಾನೆ ಕೊಂದು ಹಾಕಿದ ಘಟನೆ ರೊಚ್ಚಿಗೇಳಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಜನರು ಧಿಕ್ಕಾರ ಕೂಗಿದ್ದಾರೆ. ಅವರನ್ನು ತಡೆದು ನಿಲ್ಲಿಸಿ, ಮೂರು ದಶಕಗಳಿಂದ ರಾಜಕೀಯ ಶಕ್ತಿ ಕೊಟ್ಟ ನಮಗೆ ನಿಮ್ಮ ಕೊಡುಗೆ ಶೂನ್ಯ ಎಂದು ಆರೋಪಿಸಿದ್ದಾರೆ.

ಸಾವಿನ ಮನೆ: ಒಂದೇ ಒಂದು ರಸ್ತೆ ನೆಟ್ಟಗಿಲ್ಲ. ವಾಹನಗಳನ್ನು ಓಡಿಸಲು ಕಣ್ಣೀರು ಬರಿಸುವಂತಹ ಗುಂಡಿಬಿದ್ದ ರಸ್ತೆಗಳು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಈ ಭಾಗಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಒಂದು ದಿನವೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ದಾರಿ ಮಧ್ಯೆ ಕೆಟ್ಟು ನಿಲ್ಲುತ್ತವೆ.  ಸೂರ್ಯ ಮುಳುಗುವುದೇ ತಡ, ಮನೆಯ ಅಂಗಳ, ಹಿತ್ತಲಿಗೆ ಕಾಡಾನೆಗಳು ಬಂದು ನಿಲ್ಲುತ್ತವೆ.

ರಸ್ತೆಗಳಲ್ಲಿ ಹೋಗುವ ವಾಹನಗಳ ಮೇಲೆ ದಾಳಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ, ಕಾಫಿ ತೋಟಗಳಲ್ಲಿ ಬಂಡೆ ಕಲ್ಲುಗಳಂತೆ ಅಲುಗಾಡದೆ ನಿಂತು, ಒಮ್ಮೆಲೆ ದಾಳಿ ಮಾಡುತ್ತವೆ. ಸತತ 12 ವರ್ಷಗಳಿಂದ ನಿತ್ಯ ಇಂತಹ ಸಮಸ್ಯೆಯಿಂದ ನಮ್ಮ ಗ್ರಾಮಗಳು ಸಾವಿನ ಮನೆಗಳಾಗಿವೆ ಎಂದು ಯಡಕೇರಿ ಗ್ರಾಮದ ಕೆ.ಬಿ. ಗಂಗಾಧರ್ ನೋವಿನಿಂದ `ಪ್ರಜಾವಾಣಿ'ಗೆ ಹೇಳುತ್ತಾರೆ.

ಯಸಳೂರು ಹಾಗೂ ಹೆತ್ತೂರು ಹೋಬಳಿ ವ್ಯಾಪ್ತಿಯ ಐಗೂರು, ಚಿಕ್ಕಲ್ಲೂರು, ದೊಡ್ಡಕಲ್ಲೂರು, ಚಿಕ್ಕಂದೂರು, ಮಲಗಳ್ಳಿ, ಸರಗಳ್ಳಿ, ಕೊತ್ನಹಳ್ಳಿ, ಕುಂಬ್ರಹಳ್ಳಿ, ಮಾಗಲು, ಯಡಕೇರಿ, ಹೆನ್ನಲಿ, ಯಸಳೂರು, ಚಂಗಡಿಹಳ್ಳಿ, ಹೆತ್ತೂರು, ಹಳ್ಳಿಗದ್ದೆ, ದೇವರಬನ, ಕುಂಬಾರಗೆರೆ, ಅತ್ತಿಗನಹಳ್ಳಿ, ಮತ್ತೂರು, ಮರಡೀಕೆರೆ, ಸಂಕ್ಲಾಪುರ, ಮಾವಿನೂರು, ಹಡ್ಲುಗದ್ದೆ, ಸೇರಿದಂತೆ ಈ ಹೋಬಳಿ ವ್ಯಾಪ್ತಿಯಲ್ಲಿ ಸರಿ ಸುಮಾರು 60 ಗ್ರಾಮಗಳು ಕಾಡಾನೆ ಸಮಸ್ಯೆಯಿಂದ ಬದುಕು ಕಳೆದುಕೊಂಡಿವೆ.

ಸ್ಥಳಾಂತರ ಮಾಡಿ: `ಯಾವ ಭಯವೂ ಇಲ್ಲದೆ ನಿಸರ್ಗದ ಸೆರಗಿನ ಸುಂದರವಾದ ನಮ್ಮಗಳ ಬದುಕನ್ನು ಕಾಡಾನೆಗಳು ಸರ್ವನಾಶ ಮಾಡಿವೆ. ಸಾವನ್ನು ಬೆನ್ನ ಹಿಂದೆ ಇಟ್ಟುಕೊಂಡು, ಭಯದ ನೆರಳಿನಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ. ನಮಗೂ ಬದುಕುವ ಆಸೆ ಇದೆ, ಮಕ್ಕಳನ್ನು ಬೆಳೆಸಿ ಅವರಿಗೊಂದು ಭವಿಷ್ಯ ರೂಪಿಸಬೇಕು. ದಯವಿಟ್ಟು ಕಾಡಾನೆಗಳನ್ನು ಸ್ಥಳಾಂತರ ಮಾಡಿ, ಸಾಧ್ಯವಾಗದೆ ಹೋದರೆ ಸೂಕ್ತ ಪರಿಹಾರ ನೀಡಿ ನಮ್ಮ ಕುಟುಂಬಗಳನ್ನೇ ಸ್ಥಳಾಂತರ ಮಾಡಿ, ಬದುಕು ತೀರಾ ಕಷ್ಟವಾಗಿದೆ' ಎಂದು ಕೊತ್ನಹಳ್ಳಿ ಗ್ರಾಮದ ಶೈಲ ತಮ್ಮಣ್ಣಗೌಡ  ಕಣ್ಣೀರಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT