ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ: 2ನೇ ಹಂತದ ಕಾಮಗಾರಿ ಜೂ.30ಕ್ಕೆ ಪೂರ್ಣ

Last Updated 12 ಜೂನ್ 2011, 9:40 IST
ಅಕ್ಷರ ಗಾತ್ರ

ವಿರಾಜಪೇಟೆ: ಕೊಡಗು ಮಾಕುಟ್ಟ ಕೇರಳ ಅಂತರರಾಜ್ಯ ಹೆದ್ದಾರಿಯ ಎರಡನೇ ಹಂತದ ಕಾಮಗಾರಿ ಜೂನ್ 30ಕ್ಕೆ ಪೂರ್ಣಗೊಳ್ಳಲಿದೆ. ನಂತರ ಹೆದ್ದಾರಿ ಹೈಟೆಕ್ ರಸ್ತೆಯಲ್ಲಿ ಎರಡು ರಾಜ್ಯಗಳ ವಾಹನಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಮುಕ್ತವಾಗಿ ಸಂಚರಿಸಬಹುದಾಗಿದೆ.

ವಿರಾಜಪೇಟೆ ಬಳಿಯ ಪೆರುಂಬಾಡಿಯಿಂದ ಮಾಕುಟ್ಟದ ಕಾಕೆತೋಡು ದೇವಾಲಯದವರೆಗೆ ಎರಡು ವರ್ಷದ ಅವಧಿಯಲ್ಲಿ 14.5ಕಿ.ಮೀ ಹೈಟೆಕ್ ರಸ್ತೆ ನಿರ್ಮಿಸಿ 2010ರ ಏಪ್ರಿಲ್‌ನಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಉಳಿದ 1.5ಕಿ.ಮೀ ರಸ್ತೆ ನಿರ್ಮಾಣದ ಕಾಮಗಾರಿಗೆ 2011ರ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು. ಈಗ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ರಸ್ತೆ ಬದಿಯ ರಕ್ಷಣಾ ತಡೆ ಗೋಡೆಯ ಕಾಮಗಾರಿ ಮುಂದುವರೆದಿದ್ದು ಇನ್ನು 20ದಿನಗಳಲ್ಲಿ ಈ ಕಾರ್ಯ ಮುಗಿಯಲಿದೆ. ಮಳೆಯ ನಡುವೆಯೂ ರಕ್ಷಣಾ ತಡೆ ಗೋಡೆಯ ಕಾಮಗಾರಿ ಭರದಿಂದ ಸಾಗಿದೆ.

ಪೆರುಂಬಾಡಿಯಿಂದ ಮಾಕುಟ್ಟದ ಕೂಟುಪೊಳೆ ಸೇತುವೆಯ ತನಕ 75 ಕಾಂಕ್ರೀಟ್ ಮೋರಿಗಳು, 8 ದೊಡ್ಡ ಮೋರಿಗಳನ್ನು ರಕ್ಷಣಾ ತಡೆ ಗೋಡೆಯೊಂದಿಗೆ ನಿರ್ಮಿಸಲಾಗಿದೆ. ಸುಮಾರು 16 ಕಿಮೀ ವರೆಗಿನ ರಸ್ತೆಯಲ್ಲಿ ಆಳವಾದ ಹಾಗೂ ಅಪಾಯ ಕಂಡುಬರುವ ಆಯ್ದ ಭಾಗಗಳಲ್ಲಿ ಸುಮಾರು 2.5ಕಿ.ಮೀ ಅಂತರದಲ್ಲಿ ಕಬ್ಬಿಣದ ರಕ್ಷಣಾ ತಡೆಗೋಡೆ (ಮೆಟಲ್ ಬೀಮ್ ಕ್ರಾಸ್) ಹಾಕಲಾಗಿದೆ. ಇದಕ್ಕಾಗಿ 3000 ವೈಜ್ಞಾನಿಕವಾಗಿ ಸಿದ್ಧಪಡಿಸಿದ ಕಾಂಕ್ರೀಟ್ ಕಂಬಗಳನ್ನು ಬಳಸಲಾಗಿದೆ.
 
ವಾಹನಗಳು ಈ ರಸ್ತೆಯಲ್ಲಿ ವೇಗವಾಗಿ ಚಲಿಸಿ ಅಪಾಯದ ಬದಿಗೆ ಹೋದರೂ ಕಬ್ಬಿಣದ ತಡೆಗೋಡೆ ತಡೆಯಲಿದೆ. ಈಗ ಪೂರ್ಣಗೊಂಡಿರುವ ಹೈಟೆಕ್ ರಸ್ತೆಗೆ ಎಲ್ಲ ವೆಚ್ಚ ಸೇರಿ ರೂ 28ಕೋಟಿ ತಗಲಿದೆ. 16ಕಿಮೀ ರಸ್ತೆಯ ಪೈಕಿ 450 ಮೀಟರ್‌ಗಳಷ್ಟು ಉದ್ದದ ಕಾಂಕ್ರೀಟ್ ರಸ್ತೆಯನ್ನು  ಆಯ್ದ ತಿರುವು ಭಾಗಗಳಲ್ಲಿ ನಿರ್ಮಿಸಲಾಗಿದೆ.

ಗಡಿ ಭಾಗದಲ್ಲಿ ರಸ್ತೆ ಆರಂಭಗೊಂಡಂದಿನಿಂದ ರಸ್ತೆ ಕಾಮಗಾರಿ ಸ್ಥಳಕ್ಕೆ ರಾಜ್ಯದ ಮುಖ್ಯ ಇಂಜಿನಿಯರ್ ಮೃತ್ಯಂಜಯ ಸ್ವಾಮಿ ಎರಡು ಬಾರಿ

ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಗುಣಮಟ್ಟ ಪರಿಶೀಲನೆಗಾಗಿ ವಿರಾಜಪೇಟೆಯಲ್ಲಿಯೇ ಗುಣಮಟ್ಟ ನಿಯಂತ್ರಣ ಪ್ರಾಯೋಗಾಲಯವನ್ನು ಸ್ಥಾಪಿಸಿ ಈಗ ಇದು ಖಾಯಂ ಆಗಿ ವಿರಾಜಪೇಟೆ ಲೋಕೋಪಯೋಗಿ ಇಲಾಖೆಗೆ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕಾಮಗಾರಿ ಗುಣಮಟ್ಟ ನಿಯಂತ್ರಣದ ಮುಖ್ಯ ಅಧೀಕ್ಷಕ ವಿಜಯಕುಮಾರ್ ಚೌಡಣ್ಣನವರ್ ಮಾಕುಟ್ಟ ರಸ್ತೆಗೆ ಈಚೆಗೆ ಭೇಟಿ ನೀಡಿ ಪರಿಶೀಸಿಲಿಸಿ ಇಲಾಖೆಯ ಮುಖ್ಯ ಎಂಜಿನಿಯರ್‌ಗೆ ವರದಿ ಮಾಡಿದ್ದಾರೆ.

ಗುಣಮಟ್ಟ ನಿಯಂತ್ರಣದ ಸಹಾಯಕ ಅಭಿಯಂತರ ವೆಂಕಟರಾವ್ ಬಾಗಲ್ವಾಡಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಕಾರ್ಯ ನಿರ್ವಹಿಡುತ್ತಿದ್ದಾರೆ. ವಿರಾಜಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಧರ್ಮರಾಜ್ ಹಾಗೂ ಎಂಜಿನಿಯರ್ ರಂಗಸ್ವಾಮಿ ಕಾಮಗಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ರಸ್ತೆ ಸುರಕ್ಷತೆಗೆ ನಿರ್ದೇಶನ: ಕೊಡಗು ಕೇರಳ ಮಾಕುಟ್ಟದ ಗಡಿ ಭಾಗಕ್ಕೆ ಈಚೆಗೆ ಭೇಟಿ ನೀಡಿದ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ರಸ್ತೆ ಕಾಮಗಾರಿಯನ್ನು ಖುದ್ದು ವೀಕ್ಷಿಸಿದ ನಂತರ ಮಾತನಾಡಿದ ಅವರು ಭಾರೀ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂತರಾಜ್ಯ ಹೈಟೆಕ್ ರಸ್ತೆ ಸುರಕ್ಷತೆ ಬಗ್ಗೆ ಅಧಿಕಾರಿಗಳು ವಿವಿಧ ಕ್ರಮಗಳನ್ನು ಅನುಸರಿಸಬೇಕಾಗಿದೆ. ರಸ್ತೆ ಕಾಮಗಾರಿ ತೃಪ್ತಿ ತಂದಿದೆ ಆದರೂ ರಸ್ತೆ ಹಾನಿ ಆಗದಂತೆ ಅದನ್ನು ನಿರಂತರವಾಗಿ ಕಾಪಾಡುವುದು ಅಧಿಕಾರಿಗಳ ಕರ್ತವ್ಯ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT