ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪಕ್ಕವೇ ಮರಳು ಗಣಿಗಾರಿಕೆ

ಕೃಷಿ ಜಮೀನಿನಲ್ಲಿ ಹೆಚ್ಚುತ್ತಿರುವ ಮರಳ ರಾಶಿ
Last Updated 26 ಏಪ್ರಿಲ್ 2013, 9:50 IST
ಅಕ್ಷರ ಗಾತ್ರ

ಕೋಲಾರ: ವಿಧಾನಸಭೆ ಚುನಾವಣೆಯ ಜವಾಬ್ದಾರಿ ನಿರ್ವಹಣೆಯಲ್ಲಿ ಬಹುತೇಕ ಅಧಿಕಾರಿಗಳು ಬಿಡುವಿಲ್ಲದೆ ದುಡಿಯುತ್ತಿರುವ ವೇಳೆಯಲ್ಲಿಯೇ ಜಿಲ್ಲೆಯ ಮುಳಬಾಗಲಿನ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಕೃಷಿ ಜಮೀನುಗಳಲ್ಲಿ ಮರಳು ತೆಗೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಸಮರ್ಪಕವಾಗಿ ಮಳೆ ಇಲ್ಲದೆ ನೀರು ಮತ್ತು ಮೇವಿನ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿರುವ ತಾಲ್ಲೂಕಿನ ರೈತ ಸಮುದಾಯದ ಪೈಕಿ ಹೆದ್ದಾರಿ ಪಕ್ಕದಲ್ಲಿರುವ ರೈತರಲ್ಲಿ ಬಹಳಷ್ಟು ಮಂದಿ ತಮ್ಮ ಜಮೀನಿನಲ್ಲಿ ಮರಳನ್ನು ತೆಗೆಯುತ್ತಿದ್ದಾರೆ.

ಮುಳಬಾಗಲು ಹೊರವಲಯದಲ್ಲಿ ಲೋಕೋಪಯೋಗಿ ಇಲಾಖೆ ಸ್ಥಾಪಿಸಿರುವ ಮರಳು ಸಾಗಣೆ ಚೆಕ್‌ಪೋಸ್ಟ್ ದಾಟಿ ಮುಂದಕ್ಕೆ ಹೋಗುತ್ತಿದ್ದಂತೆ ರಸ್ತೆಯ ಎರಡೂ ಬದಿಯಲ್ಲಿ ರಾಶಿ ಹಾಕಿದ ಮರಳು ಉದ್ದಕ್ಕೂ ಕಂಡುಬರುತ್ತಿದೆ.

ರಸ್ತೆಯ ಅಂಚಿನ ಜಮೀನಿನ ಒಂದು ಭಾಗದಲ್ಲಿ ಮೇವು ಬೆಳೆದಿದ್ದರೆ ಮತ್ತೊಂದು ಭಾಗದಲ್ಲಿ ಮರಳ ರಾಶಿ ಹಾಕಿರುವುದು ಗುರುವಾರ ಕಂಡು ಬಂತು. ಹೆದ್ದಾರಿ ಪಕ್ಕದ ಜಮೀನಿನ ಒಳಭಾಗಗಳಲ್ಲಿ ಬೃಹತ್ ಯಂತ್ರವನ್ನು ಬಳಸಿ ಮರಳು ತೆಗೆಯುವ ದೃಶ್ಯಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ, ಕೃಷಿ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಕೋರಿ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ಹೈಕೋರ್ಟ್‌ನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಮೊಕದ್ದಮೆ ಹೂಡಿದೆ. ಆ ನಂತರ, ಮರಳು ಸಾಗಣೆಯನ್ನು ತಡೆಯುವಂತೆ ಹೈಕೋರ್ಟ್ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆ ಬಳಿಕವೂ ಕೃಷಿ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಲೇ ಇದೆ.

ಅಕ್ರಮ ಮರಳು ಗಣಿಗಾರಿಕೆ ಪರಿಸ್ಥಿತಿ ಕುರಿತು ಪರಿಶೀಲಿಸುವ ಸಲುವಾಗಿ `ಪ್ರಜಾವಾಣಿ' ಪ್ರತಿನಿಧಿ ಹೆದ್ದಾರಿಯಲ್ಲಿ ಸಂಚರಿಸಿದಾಗ ಜಮೀನುಗಳಲ್ಲಿ ಮರಳ ರಾಶಿ ಉದ್ದಕ್ಕೂ ಕಂಡು ಬಂತು. ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಮಾತ್ರ ಮರಳು ಗಣಿಗಾರಿಕೆ ದೃಶ್ಯಗಳಿಲ್ಲ. ಕಾಮಗಾರಿ ನಡೆಯದ ಸ್ಥಳದಲ್ಲಿರುವ ಜಮೀನುಗಳ ಬಳಿ ಹಲವೆಡೆ ಕೃಷಿ ಜಮೀನುಗಳಲ್ಲಿ ಮರಳ ರಾಶಿ ಕಂಡುಬರುವುದು ಸಾಮಾನ್ಯ ಎಂಬಂತೆ ಆಗಿದೆ.

ಬೆಳೆ ತೆಗೆದಿರುವ ರೈತರು ತಮ್ಮ ಜಮೀನಿನ ಬಹಳಷ್ಟು ಭಾಗದಲ್ಲಿ ಮರಳು ತೆಗೆಯುವುದಕ್ಕೆ ಅವಕಾಶ ನೀಡಿರುವ ಪರಿಣಾಮವಾಗಿ ಬೆಳೆಗಳ ಪಕ್ಕದಲ್ಲೇ ಮರಳ ರಾಶಿಯೂ ಏಳುತ್ತಿದೆ.

ದೂರು:
ಕಳೆದ ಅಕ್ಟೋಬರ್‌ನಲ್ಲಿ ಇದೇ ತಾಲ್ಲೂಕಿನ ನಂಗಲಿ ಗ್ರಾಮದ ತಮ್ಮ ಪಕ್ಕದ ಜಮೀನನ್ನು ಮರಳು ಗಣಿಗಾರಿಕೆಗೆ ಮಾರಿದ್ದು ಮತ್ತು ಗಣಿಗಾರಿಕೆಯ ಲಕ್ಷಣಗಳು ಗೋಚರಿಸುತ್ತಿದ್ದಂತೆಯೇ ರೈಲ್ವೆ ಇಲಾಖೆಯ ನಿವೃತ್ತ ತಾಂತ್ರಿಕ ಅಧಿಕಾರಿ ಬಿ.ಎನ್.ಗೋಪಾಲಕೃಷ್ಣಸ್ವಾಮಿ ಅದೇ ಗ್ರಾಮದ ಮಂಡಲ್ ಪಂಚಾಯತಿ ಮಾಜಿ ಪ್ರಧಾನ ಕೃಷ್ಣಪ್ಪ ಅವರೊಡನೆ ಸೇರಿ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಕ್ರಮಕೈಗೊಂಡ ಪರಿಣಾಮ ಮರಳು ಗಣಿಗಾರಿಕೆಗೆ ಕೃಷಿ ಜಮೀನು ಬಲಿಯಾಗುವುದು ತಪ್ಪಿತ್ತು.

ತಾಲ್ಲೂಕಿನ ಕೃಷಿ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಈಗಲೂ ನಡೆಯುತ್ತಿರುವ ಬಗ್ಗೆ ಗೋಪಾಲಕೃಷ್ಣಸ್ವಾಮಿ ವಿಷಾದ ವ್ಯಕ್ತಪಡಿಸುತ್ತಾರೆ.
ಅನ್ನ ಕೊಡುವ ಭೂಮಿಯ ಒಡಲನ್ನು ಹಣದ ಆಸೆಗಾಗಿ ಬಗೆದರೆ ನಮ್ಮ ರೈತರು ಮತ್ತೆ ಮಣ್ಣನ್ನೇ ತಿನ್ನಬೇಕಾಗುತ್ತದೆ. ಜಗತ್ತಿಗೇ ಅನ್ನ ಕೊಡುವ ಉಳುವಾ ಯೋಗಿಗಳು ಹೊಲವನ್ನು ಉತ್ತಲು, ಬಿತ್ತಲು, ಬೆಳೆ ತೆಗೆಯಲು ಬಳಸಬೇಕೇ ಹೊರತು ಮರಳು ತೆಗೆಯಲು ಅಲ್ಲ ಎಂಬುದು ಅವರ ಸ್ಪಷ್ಟ ನುಡಿ.

ತುರ್ತು ಕ್ರಮ: ಡಿಸಿ ಭರವಸೆ
ಇಡೀ ಜಿಲ್ಲಾಡಳಿತವೇ ವಿಧಾನಸಭೆ ಚುನಾವಣೆ ಕರ್ತವ್ಯದಲ್ಲಿ ನಿರತವಾಗಿದೆ. ಈ ಸನ್ನಿವೇಶವನ್ನು ಮರಳು ಗಣಿಗಾರಿಕೆ ಮಾಡುವವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್.

ಕೃಷಿ ಜಮೀನಿನಲ್ಲಿ ಮರಳುಗಣಿಗಾರಿಕೆ ನಡೆಯುತ್ತಿರುವುದರ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು, ಹಗಲು-ರಾತ್ರಿ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮರಳುಗಳ್ಳರು ಇದನ್ನು ಒಳ್ಳೆಯ ಅವಕಾಶ ಮಾಡಿಕೊಂಡಿದ್ದಾರೆ. ಆದರೆ ಅವರನ್ನು ಕೂಡಲೇ ನಿಯಂತ್ರಿಸಲಾಗುವುದು. ಮರಳು ತೆಗೆಯುವ ಜಮೀನುಗಳ ಮೇಲೆ ದಾಳಿ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಮುಳಬಾಗಲು ತಹಶೀಲ್ದಾರರಿಗೆ ಮತ್ತು ಇತರೆ ಅಧಿಕಾರಿಗಳಿಗೆ ಕೂಡಲೇ ಸೂಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT