ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪ್ರಯಾಣ ಕಷ್ಟ ಕಷ್ಟ...

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮತ್ತೆ ಗುಂಡಿಗಳ ದರ್ಶನ ಆರಂಭವಾಗಿದೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 17, 206, 63 ಹಾದು ಹೋಗಿದ್ದು ಒಟ್ಟು 324 ಕಿ.ಮೀ ಉದ್ದವಿದೆ. ಈ ರಸ್ತೆಗಳು ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದಷ್ಟೇ ಮರುಡಾಂಬರೀಕರಣ ಮಾಡಲಾಗಿತ್ತು. ಈಗ ಅವು ಮತ್ತೆ ಬಾಯ್ತೆರೆದು ನಿಂತಿವೆ. ಈ ಮೂರೂ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಭಾರಿ ಪ್ರಯಾಸದಾಯಕವಾಗಿದೆ.

ರಾಷ್ಟ್ರೀಯ ಹೆದ್ದಾರಿ -63ರಲ್ಲಿ ಮಾಸ್ತಿಕಟ್ಟೆ, ಸುಂಕಸಾಳ, ಹೆಬ್ಬುಳ ಮತ್ತು ಅರಬೈಲ ಘಟ್ಟದ ಕೆಲವೆಡೆಗಳಲ್ಲಿ ಡಾಂಬರು ಕಿತ್ತು ಹೋಗಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಿರಂತವಾಗಿ ಮಳೆ ಸುರಿದಿದ್ದರಿಂದ ಗುಂಡಿಗಳು ಇಡೀ ರಸ್ತೆಯನ್ನು ವ್ಯಾಪಿಸಿವೆ.

ರಾಷ್ಟ್ರೀಯ ಹೆದ್ದಾರಿ-17 ಪಣಜಿ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯಲ್ಲಿ ರಾಜ್ಯದ ಗಡಿ ಮಾಜಾಳಿ (ಅಬಕಾರಿ ತನಿಖಾ ಠಾಣೆ)ಯಿಂದ ಕಾರವಾರ ವಾಣಿಜ್ಯ ಬಂದರುವರೆಗೆ ಡಾಂಬರು ಕಿತ್ತು ಗುಂಡಿಗಳು ಬಿದ್ದಿದ್ದು ಗುಂಡಿ ತಪ್ಪಿಸಲು ವಾಹನಗಳ ಚಾಲಕರು ಸರ್ಕಸ್ ಮಾಡಬೇಕಿದೆ.

ಅಂಕೋಲಾದಿಂದ ಭಟ್ಕಳ ಗಡಿವರೆಗೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದ ಈ ರಸ್ತೆಯನ್ನು ಮೇ ತಿಂಗಳಲ್ಲಷ್ಟೇ ದುರಸ್ತಿ ಮಾಡಲಾಗಿತ್ತು. ಮಿತಿಗಿಂತ ಹೆಚ್ಚು ಭಾರದ ಮ್ಯಾಂಗನೀಸ್ ಅದಿರು ತುಂಬಿದ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದರು.

ಆದರೆ, ಒಂದು ವರ್ಷದಿಂದ ಅದಿರು ಲಾರಿಗಳ ಸಂಚಾರ ಬಂದ್ ಆಗಿದ್ದರೂ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ ಅಪ್ಸರಕೊಂಡ (ಹೊನ್ನಾವರ) ತಿರುವಿನವರೆಗೆ ರಸ್ತೆಯಲ್ಲಿ ಸಿಕ್ಕಾಪಟ್ಟೆ ಗುಂಡಿಗಳು ಬಿದ್ದಿವೆ. ಈ ಗುಂಡಿಗಳನ್ನು ತಪ್ಪಿಸಲು ವಾಹನಗಳು ವಿರುದ್ಧ ಬದಿಯಲ್ಲಿ ಚಲಿಸುವುದರಿಂದ ಆಗಾಗ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ.

~ರಸ್ತೆಯ ದುಃಸ್ಥಿತಿಯಿಂದ  ಪ್ರಯಾಣಿಕರಷ್ಟೇ ಅಲ್ಲ ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಮ್ಯಾಕ್ಸಿಕ್ಯಾಬ್ ಪದೇಪದೇ ಕೆಟ್ಟು ನಿಲ್ಲುತ್ತಿವೆ. ಎಂಜಿನ್‌ನಲ್ಲಿ ಪದೇಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಗದಿತ ವೇಳೆಯೊಳಗೆ ನಿಗದಿತ ಸ್ಥಳ ತಲುಪುವ ಧಾವಂತದಿಂದ  ಗುಂಡಿಗಳನ್ನು ಲೆಕ್ಕಿಸದೆ ವಾಹನ ಓಡಿಸುವ ಅನಿವಾರ್ಯತೆ ಇದೆ. ಒಮ್ಮಮ್ಮೆ ದಿನದ ದುಡಿಮೆಯೆಲ್ಲ ವಾಹನ ರಿಪೇರಿಗೇ ಹೋಗುತ್ತದೆ~ ಎನ್ನುತ್ತಾರೆ ಮ್ಯಾಕ್ಸಿಕ್ಯಾಬ್ ಮಾಲೀಕರು.

ಹೊನ್ನಾವರ-ಕುಮಟಾ- ಅಂಕೋಲಾ ಮಧ್ಯೆಯೂ ಹೆದ್ದಾರಿ ತೀವ್ರ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ 50, 100 ಮೀಟರ್ ಉದ್ದ ಡಾಂಬರು ಕಿತ್ತು ಹೋಗಿದ್ದು ಬರೀ ಜಲ್ಲಿ  ಕಾಣಿಸುತ್ತಿವೆ. ಇದರ ಮೇಲೆ ಭಾರಿ ವಾಹನಗಳು ಹೋದಾಗ ದೂಳು ಎದ್ದು  ವಾತಾವರಣವೆಲ್ಲ ಕಲುಷಿತಗೊಳ್ಳುತ್ತಿದೆ.

ಅರಬೈಲ ಘಟ್ಟ-ಮಾಸ್ತಿಕಟ್ಟೆ-ಸುಂಕಸಾಳವರೆಗೆ ಒಟ್ಟು 31 ಕಿ.ಮೀ ರಸ್ತೆ ಮರು ಡಾಂಬರೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ಉಪವಿಭಾಗವು 18 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು  ಸಿದ್ಧಪಡಿಸಿ ಕೇಂದ್ರ ಸಾರಿಗೆ ಇಲಾಖೆ ಕಳುಹಿಸಿದ್ದೆ. ಅನುಮೋದನೆ ಇನ್ನೂ ಸಿಕ್ಕಿಲ್ಲ.

~ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವ ಬಗ್ಗೆ ದೂರುಗಳು ಬರುತ್ತಿವೆ. ತುರ್ತು ದುರಸ್ತಿ ಕೈಗೊಳ್ಳಲಾಗುತ್ತಿದೆ. ಮಣ್ಣು ಹಾಕಿ ಗುಂಡಿ ಮುಚ್ಚಿದರೆ ಮಳೆ ಬಂದಾಗ ನೀರಿನೊಂದಿಗೆ ಹರಿದು ಹೋಗುತ್ತದೆ. ಮಳೆ ಇಳಿಮುಖವಾದ ನಂತರ ದುರಸ್ತಿ ಕೈಗೊಳ್ಳಲಾಗುವುದು~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ~ಪ್ರಜಾವಾಣಿ~ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT