ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಮೇಲೊಂದು ಸಂತೆ ಮಾಡಿ...

Last Updated 2 ಅಕ್ಟೋಬರ್ 2011, 14:50 IST
ಅಕ್ಷರ ಗಾತ್ರ

ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆಯುತ್ತಿರುವ ವಾರದ ಸಂತೆ ಅತ್ಯಂತ ಪುರಾತನವಾದುದು. ಸುತ್ತಲಿನ ನೂರಾರು ಹಳ್ಳಿಗಳಿಗೆ ಸಂಪರ್ಕಿಸುವ ಕೇಂದ್ರಸ್ಥಾನವಾಗಿರುವ ಗ್ರಾಮದಲ್ಲಿ ಅಂದಿನ ಗ್ರಾ.ಪಂ. ಚೇರ‌್ಮನರಾಗಿದ್ದ ಸಾಲಂಕಿಮಠದ ಚನ್ನಬಸಯ್ಯ ಎಂಬುವರು 1931ರಲ್ಲಿ ಸಂತೆಯನ್ನು ಆರಂಭಿಸಿದರು. ಸಂತೆ ಆರಂಭವಾಗಿ ಮುಕ್ಕಾಲು ಶತಮಾನ ಗತಿಸಿದರು, ಇಂದಿಗೂ ಶಾಶ್ವತ ನೆಲೆ, ಸಮರ್ಪಕ ಮೂಲಸೌಕರ್ಯ ಇಲ್ಲದೆ ಸಂತೆ ನಲುಗುತ್ತಿದೆ.

`ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆ ಎಂಥಯ್ಯ...~ಎಂಬ ದಾರ್ಶನಿಕರ ವಚನವನ್ನು ಸ್ವಲ್ಪ ಬದಲಾಯಿಸಿ `ಹೆದ್ದಾರಿಯ ಮೇಲೊಂದು ಸಂತೆಯ ಮಾಡಿ... ಸಾವು-ನೋವುಗಳಿಗಂಜಿದೊಡೆ ಎಂಥಯ್ಯ~ ಎನ್ನುವಂತಾಗಿದೆ ಸಂತೆಯಲ್ಲಿನ ಕೊಡು-ಕೊಳ್ಳುವವರ ಸ್ಥಿತಿ.

ಅರಸೀಕೆರೆಯ ಮೂಲಕ ಹಾದು ಹೋಗಿರುವ ಹಡಗಲಿ-ಮಂಡ್ಯ ರಾಜ್ಯ ಹೆದ್ದಾರಿ (ಎಸ್‌ಎಚ್-47) ಹಾಗೂ ಕಸವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಸಂತೆ ವಾರದ ಶುಕ್ರವಾರ ನಡೆಯುತ್ತಿದೆ. ಆರಂಭದಿಂದಲೂ ಕೋಲಶಾಂತೇಶ್ವರ ಮಠದ ದ್ವಾರಬಾಗಿಲ ಮುಂದೆ ನಡೆಯುತ್ತಿದ್ದ ಸಂತೆ, ಮಳೆಗಾಲ ವಿಪರೀತವಾಗಿ ಸಂತೆ ಮೈದಾನ ಕೆಸರುಮಯವಾಗಿ ಮಾರ್ಪಡಾಗುತ್ತಿತ್ತು. ಅಜ್ಜಿಕರಿಯಪ್ಪರ ಭರಮಪ್ಪ ಅವರ ಆಡಳಿತ ಅವಧಿಯಲ್ಲಿ ಕೋಲಶಾಂತೇಶ್ವರ ಮಠದ ಮುಂದಿನ ವಾರದ ಸಂತೆಯನ್ನು ಊರ ಹೊರವಲಯದ ಹರಪನಹಳ್ಳಿ ರಸ್ತೆಯಲ್ಲಿದ್ದ ಜೋಡು ಆಲದಮರದ ಕೆಳಗೆ ಸ್ಥಳಾಂತರಿಸಲಾಯಿತು.

ಆ ಪ್ರದೇಶದಲ್ಲಿನ ಸಂತೆ ಕೇವಲ ವ್ಯಾಪಾರಸ್ಥರಿಗೆ ಮಾತ್ರವಲ್ಲ, ಕೊಳ್ಳುವವರಿಗೂ ದೂರ ಎನಿಸಿತು. ಹಾಗಾಗಿ, ಪುನಃ ಸಂತೆಯನ್ನು ಸ್ವಲ್ಪ ಕಾಲ ಅದೇ ಹಳೆಯ ಕೋಲಶಾಂತೇಶ್ವರ ಮಠದ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
 
ನಂತರ, ಊರ ಮುಂದಿನ ಕೆರೆಯ ಕೋಡಿಯ ಸಮೀಪದಲ್ಲಿನ ಕುಸ್ತಿ ಮಾವಿನಮರದ ಕೆಳಗೆ ಎರಡು ಬಾರಿ ಸಂತೆಯನ್ನು ನಡೆಸಲಾಗಿದೆ. ಆ ಪ್ರದೇಶವೂ ಸಂತೆಗೆ ಸೂಕ್ತವಲ್ಲ ಎಂದು ಕಂಡಬಂದ ಹಿನ್ನೆಲೆಯಲ್ಲಿ ಸಂತೆ ಅದೇ ಹಳೇಯ ಸ್ಥಳಕ್ಕೆ ಸ್ಥಳಾಂತರಗೊಂಡಿತು.

ಮಠದ ಜೀರ್ಣೋದ್ಧಾರ ಹಾಗೂ ಪಕ್ಕದಲ್ಲಿ ಪ್ರೌಢಶಾಲೆಯೂ ಆರಂಭಗೊಂಡ ಬಳಿಕ ಸಂತೆಯನ್ನು ಶಾಲೆ ಬದಿಯ ಖಾಲಿ ನಿವೇಶನಕ್ಕೆ ಸ್ಥಳಾಂತರಿಸಲಾಯಿತು. ಈಗ ಆ ಜಾಗವೂ ಸಹ ಕೃಷಿ ಇಲಾಖೆಯ  `ರೈತಸಂಪರ್ಕ ಕೇಂದ್ರ~  ಕಟ್ಟಡಕ್ಕೆ ವರ್ಗವಾಗಿರುವುದರಿಂದ ಸಂತೆ ಮತ್ತೆ ಬೀದಿಗೆ ಬಿದ್ದಿದೆ!

ವಾರದ ಶುಕ್ರವಾರ ಸಂತೆ ಆರಂಭವಾಗುತ್ತಿದ್ದಂತಿಯೇ ಹೆದ್ದಾರಿಯ ಮೇಲಿನ ಸಂಚಾರ ಅಸ್ತವಸ್ತ್ಯಗೊಳ್ಳುತ್ತಿದೆ. ಜತೆಗೆ, ವಾಹನಗಳ ಸಂಚಾರದಿಂದ ಕೊಡು-ಕೊಳ್ಳುವವರು ಜೀವಭಯದಿಂದಲೇ ಸಂತೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಯುವಕರಾದ ಹಾದಿಮನಿ ನಾಗರಾಜ್, ಗುಡಿಹಳ್ಳಿ ಹಾಲೇಶ್ ಹಾಗೂ ಟಿ. ರಂಗಪ್ಪ.

 ಪ್ರತಿವರ್ಷ ಸಂತೆಯಲ್ಲಿ ವಹಿವಾಟು ನಡೆಸುವ ತರಕಾರಿ ಮಾರುವವರಿಂದ ಹಿಡಿದು, ದಿನಸಿ ವ್ಯಾಪಾರಸ್ಥರತನಕ; ಬಟ್ಟೆ ವ್ಯಾಪಾರಿಯಿಂದ ಹಿಡಿದು, ಬುಟ್ಟೆ-ಪೊರಕೆ ಮಾರಾಟಗಾರರತನಕ, ಸಮಸ್ತ ವ್ಯಾಪಾರಿಗಳಿಂದ ಪ್ರತಿವಾರ ನೆಲ ಬಾಡಿಗೆ ರೂಪದಲ್ಲಿ  ಗ್ರಾಮ ಪಂಚಾಯತ್ ಸುಂಕ ವಸೂಲಿ ಮಾಡುತ್ತಿದೆ.
ವ್ಯಾಪಾರಸ್ಥರಿಂದ ಕರ ವಸೂಲಿ ಮಾಡಲು ಪ್ರತಿವರ್ಷ ಪಂಚಾಯತ್ ಲಕ್ಷಾಂತರ ರೂಗಳಿಗೆ ಹರಾಜು ಹಾಕುತ್ತಿದೆ.
 
ಸಂತೆಯ ವಹಿವಾಟಿಗೆ ಸಂಬಂಧಿಸಿದಂತೆ ಸುಂಕ ವಿಧಿಸಿ, ಪಂಚಾಯತ್ ಕೇವಲ ಹಣ ಬಾಚಿಕೊಳ್ಳುತ್ತಿದೆ ಹೊರತು, ಸಂತೆಯಲ್ಲಿನ ವ್ಯಾಪಾರಸ್ಥರಿಗಾಗಲಿ, ಕೊಳ್ಳುವವರಿಗಾಗಿ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸುತ್ತಾರೆ ಯುವಕರಾದ ಕಬ್ಬಳ್ಳಿ ಬಸವರಾಜ್, ಭೋವಿ ರಮೇಶ್.

ಸಂತೆಯ ಸುಂಕದ ರೂಪದಲ್ಲಿ ಆದಾಯದ ಮೇಲೆ ಕಣ್ಣಿಟ್ಟಿರುವ ಪಂಚಾಯತ್, ಗ್ರಾಮೀಣ ಜನರ ಪಾಲಿನ `ಬಿಗ್ ಬಜಾರ್~ಎಂದು ಕರೆಸಿಕೊಳ್ಳುತ್ತಿರುವ ಸಂತೆಗೆ ಶಾಶ್ವತ ನೆಲೆ ಹಾಗೂ ಮೂಲಸೌಕರ್ಯ ಒದಗಿಸಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT