ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ವಿಸ್ತರಣೆಗೆ ಬೆಂಬಲಿಸಿ ಸಹಿ ಸಂಗ್ರಹ

Last Updated 13 ಜುಲೈ 2012, 8:40 IST
ಅಕ್ಷರ ಗಾತ್ರ

ಸಕಲೇಶಪುರ: ಪಟ್ಟಣದ ಬಿ.ಎಂ. ರಸ್ತೆ ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರ ಬೆಂಬಲಿಸಿ, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ 15 ಸಾವಿರ ಮಂದಿ ಒಂದೇ ದಿನದಲ್ಲಿ ಸಹಿ ಮಾಡಿರುವ ಐತಿಹಾಸಿಕ ಘಟನೆ ಗುರುವಾರ ಪಟ್ಟಣದಲ್ಲಿ ನಡೆಯಿತು.

ಕಿಷ್ಕಿಂಧೆಯಾಗಿರುವ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು, ಸದಾ ಟ್ರ್ಯಾಫಿಕ್ ಜಾಮ್, ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ, ಆದರೆ ಸದರಿ ರಸ್ತೆಯ ಕೆಲವು ಕಟ್ಟಡ ಮಾಲೀಕರು ರಸ್ತೆ ವಿಸ್ತರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬೆಂಬಲವಾಗಿ ಹೆದ್ದಾರಿ ವಿಸ್ತರಣಾ ಸಮಿತಿ ಸಹಿ ಅಭಿಯಾನ ಆರಂಭಿಸಿದೆ.

ಸಕಲೇಶ್ವರಸ್ವಾಮಿ ದೇವಸ್ಥಾನ ಮುಂಭಾಗ ಬೆಳಿಗ್ಗೆ ಮಾಜಿ ಪುರಸಭಾ ಅಧ್ಯಕ್ಷ ಎಸ್.ಡಿ.ಆದರ್ಶ ಜ್ಯೋತಿ ಬೆಳಗಿಸುವುದ ಮೂಲಕ ಸಹಿ ಅಭಿಯಾನಕ್ಕೆ ಚಾಲನೆ ನೀಡಿದರು.

ಹೆದ್ದಾರಿ ವಿಸ್ತರಣೆಗೆ ತಮ್ಮಗಳ ಬೆಂಬಲವಿದೆ, ಯಾವುದೇ ಹೋರಾಟಕ್ಕೂ ಕೈಜೋಡಿಸುವುದಾಗಿ ರೈತರು, ಮಹಿಳೆಯರು ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲಿ ಬಂದು ಸಹಿ ಮಾಡುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ಬರೋಬರಿ ಸಹಿ ಮಾಡಿದವರ ಸಂಖ್ಯೆ 15 ಸಾವಿರ ದಾಟಿತ್ತು. ಒಟ್ಟು ಒಂದು ಲಕ್ಷ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳು, ಹಾಗೂ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಸುಪ್ರದೀಪ್ತ ಯಜಮಾನ್ ಸುದ್ದಿಗಾರರಿಗೆ ಹೇಳಿದರು.

ಹಳೆ ಬಸ್ಸು ಬಸ್ಸು ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಿತಿ ಸದಸ್ಯ ಸ.ಬ.ಭಾಸ್ಕರ್ ಮಾತನಾಡಿ, ಪ್ರತಿ ಕ್ಷಣವೂ ಜೀವ ಕೈಯಲ್ಲಿ ಇಟ್ಟುಕೊಂಡು ಬಿ.ಎಂ.ರಸ್ತೆಯಲ್ಲಿ ನಡೆದಾಡಬೇಕು. ಇದುವರೆಗೂ ಹತ್ತಾರು ಮಂದಿ ಪ್ರಾಣ ಕಳೆದುಕೊಂಡು ಹಲವು ಮನೆಗಳು ಬೀದಿಗೆ ಬಂದಿವೆ. ರಸ್ತೆ ವಿಸ್ತರಣೆ ಆಗಬೇಕು ಎಂಬ ಬೇಡಿಕೆ ಇಡೀ ತಾಲ್ಲೂಕಿನ ಎಲ್ಲರ ಬೇಡಿಕೆ ಆಗಿದ್ದು, ಬಿ.ಎಂ. ರಸ್ತೆಯ ಕೆಲವು ಕಟ್ಟಡ ಮಾಲಿಕರು ತೀವ್ರವಾಗಿ ವಿರೋಧ ಮಾಡುತ್ತಿರುವ ಕ್ರಮ ಸರಿಯಲ್ಲ. ನಿತ್ಯ ಸಾವು ನೋವುಗಳನ್ನು ನೋಡಿಕೊಂಡು ತಮ್ಮ ಸ್ವಾರ್ಥದ ವ್ಯಾಪಾರ ಮನೋಭಾವನೆ ಬದಲಿಸಿ ರಸ್ತೆ ವಿಸ್ತರಣೆಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪುರಸಭಾ ಮಾಜಿ ಅಧ್ಯಕ್ಷ ಎಸ್.ಡಿ.ಆದರ್ಶ ಮಾತನಾಡಿ, ರಸ್ತೆ ವಿಸ್ತರಣೆ ಮಾಡುವುದರಿಂದ ಬೇರೆ ಯವರಿಗಿಂತಲೂ ಆ ರಸ್ತೆಯ ಅಂಗಡಿ ಮಾಲೀಕರಿಗೆ ಹೆಚ್ಚು ಅನುಕೂಲ ಆಗುತ್ತದೆ. ಅಂಗಡಿಯ ಮುಂದೆ ವಿಶಾಲವಾದ ರಸ್ತೆ, ಸುವ್ಯವಸ್ಥಿತವಾದ ಫುಟ್‌ಪಾತ್, ವಾಹನಗಳ ಪಾರ್ಕಿಂಗ್ ವ್ಯವಸ್ಥೆಗಳಿಂತ ವ್ಯಾಪಾರ ವಹಿವಾಟು ಹಿಂದಿಗಿಂತಲೂ ಹೆಚ್ಚಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬೇರೆಯವರಿಗಿಂತ ಕಟ್ಟಡ ಮಾಲಿಕರು     ಹೆಚ್ಚು ಬೆಂಬಲ ನೀಡುವುದು ಅಗತ್ಯವಾಗಿದೆ ಎಂದರು.

ಬೈಕ್ ರ‌್ಯಾಲಿ: ಹೆದ್ದಾರಿ ವಿಸ್ತರಣೆಗೆ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಜು.13 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಬೃಹತ್ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT