ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಸಂಚಾರಕ್ಕೆ 15 ಗಂಟೆ ಅಡ್ಡಿ

ನೆಲ್ಯಾಡಿ ಬಳಿ ಟ್ಯಾಂಕರ್ ಪಲ್ಟಿ; ಅನಿಲ ಸೋರಿಕೆ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತದ ಕರಾಳ ನೆನಪು ಮರೆಯಾಗುವುದಕ್ಕೆ ಮೊದಲೇ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಮೀಪ ಮಣ್ಣಗುಂಡಿ ಬಳಿ ತಿರುವಿನಲ್ಲಿ ಶನಿವಾರ ಬೆಳಿಗ್ಗೆ ಮತ್ತೊಂದು ಬುಲೆಟ್ ಟ್ಯಾಂಕರ್ ಉರುಳಿ ಬಿದ್ದಿದೆ. ಅನಿಲ ಸೋರಿಕೆಯೂ ಆರಂಭವಾಗಿದ್ದು, ಸಂಭಾವ್ಯ ಅಪಾಯ ತಪ್ಪಿಸಲು 15 ಗಂಟೆಗೂ ಹೆಚ್ಚು ಸಮಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಎಚ್‌ಪಿ ಕಂಪೆನಿಗೆ ಸೇರಿದ ಈ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ಸಾಗುತ್ತಿತ್ತು. ಬೆಂಗಳೂರು ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ಬಸ್ಸೊಂದು ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಟ್ಯಾಂಕರ್‌ಗೆ ಡಿಕ್ಕಿಯಾಗುವ ರೀತಿಯಲ್ಲಿ ಬಂತು. ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಚಾಲಕ ವಾಹನವನ್ನು ರಸ್ತೆ ಬದಿಗೆ ಇಳಿಸಿದಾಗ ಅದು ನಿಯಂತ್ರಣ ಕಳೆದುಕೊಂಡು ಕಮರಿಗೆ ಉರುಳಿಬಿತ್ತು.

ಟ್ಯಾಂಕರ್ ಚಾಲಕ ಶಂಕರ್ ಮತ್ತು ಕ್ಲೀನರ್ ವರದರಾಜು ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉರುಳಿ ಬಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಆರಂಭವಾಗುತ್ತಿದ್ದಂತೆಯೇ ಅಪಾಯದ ಕರೆಗಂಟೆ ಮೊಳಗಿತು. ಹೀಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳನ್ನು ಗೋಳಿತೊಟ್ಟು ಹಾಗೂ ಕಡಬ ರಸ್ತೆಯಾಗಿ ಸಾಗಲು ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳನ್ನು ಗುಂಡ್ಯ ಮತ್ತು ಪೆರಿಯಶಾಂತಿ ಮೂಲಕ ಸಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು.

ಬಳಿಕ ಮಂಗಳೂರಿನಿಂದ ತುರ್ತು ನಿಯಂತ್ರಣಾ ಘಟಕ ಮತ್ತು ಗ್ಯಾಸ್ ಸ್ಥಳಾಂತರಕ್ಕೆ  ಬೇಕಾದ ಬೇರೆ ಟ್ಯಾಂಕರ್ ತರಿಸಿ ಸ್ಥಳಾಂತರ ಕಾರ್ಯ ಆರಂಭಿಸಲಾಯಿತು. ಶನಿವಾರ ಮಧ್ಯರಾತ್ರಿವರೆಗೂ ಈ ಕಾರ್ಯ ಮುಂದುವರಿಯಲಿದೆ. ಅಲ್ಲಿಯವರೆಗೂ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ತಡೆ ಒಡ್ಡಲಾಗಿದೆ.

ಅಧಿಕಾರಿಗಳಿಗೆ ತರಾಟೆ: ಈಚೆಗೆ ಪೆರ್ನೆಯಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ದುರಂತದ ಬಳಿಕ ಹೆದ್ದಾರಿಯಲ್ಲಿ ಸಂಭವಿಸುವ ಗ್ಯಾಸ್ ಟ್ಯಾಂಕರ್‌ಗಳ ನಿರ್ವಹಣೆಗಾಗಿ ತುರ್ತು ಸಂಚಾರಿ ಘಟಕ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗುತ್ತಿದ್ದರೂ ಇಂತಹ ಸಂದರ್ಭಗಳಲ್ಲಿ ಮಂಗಳೂರಿನಿಂದ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಬೇಕಾದ ರಕ್ಷಣಾ ಅಧಿಕಾರಿ ಸ್ಥಳಕ್ಕೆ ಮೂರು ಗಂಟೆ ತಡವಾಗಿ ಆಗಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಜಿ.ಪಂ. ಸದಸ್ಯ ಬಾಲಕೃಷ್ಣ ಬಾಣಜಾಲು, ಸ್ಥಳೀಯರಾದ ಲೋಕೇಶ್, ಕೆ.ಇ. ಅಬೂಬಕ್ಕರ್ ಮೊದಲಾದರವರು ಟ್ಯಾಂಕರ್ ಬಿದ್ದ ಸ್ಥಳಕ್ಕೆ ಧಾವಿಸಿ ಸೋರಿಕೆಯಾಗುತ್ತಿರುವುದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಮುಂದಾದರು. ತಡವಾಗಿ ಬಂದ ಎಂಆರ್‌ಪಿಎಲ್‌ನ ರಕ್ಷಣಾ ಅಧಿಕಾರಿಯನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT