ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಸಮಸ್ಯೆ ನಿವಾರಣೆಗೆ ರೂ. 150 ಕೋಟಿ ಪ್ಯಾಕೇಜ್‌

ಸಚಿವ ಸಾರ್ವೆ ಸತ್ಯನಾರಾಯಣ ಭರವಸೆ
Last Updated 30 ಸೆಪ್ಟೆಂಬರ್ 2013, 5:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿತ್ರದುರ್ಗ-ದಾವಣಗೆರೆ ನಡುವಿನ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಇಲ್ಲಿನ ಅನೇಕ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದ್ದು, ಈ ಸಮಸ್ಯೆಗಳ ನಿವಾರಣೆಗಾಗಿ ರೂ ೧೫೦ ಕೋಟಿ ವಿಶೇಷ ಪ್ಯಾಕೇಜ್‌ ಅನ್ನು ನೀಡುವುದಾಗಿ ಕೇಂದ್ರ ಭೂ ಸಾರಿಗೆ ರಾಜ್ಯ ಸಚಿವ ಸಾರ್ವೆ ಸತ್ಯನಾರಾಯಣ ಭರವಸೆ ನೀಡಿದರು.

ನಗರಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರದುರ್ಗ–ದಾವಣಗೆರೆ ಮಧ್ಯೆ ಕೆಲ ರಾಷ್ಟ್ರೀಯ ಹೆದ್ದಾರಿ ೪ರ ಹಳ್ಳಿಗಳಲ್ಲಿ ಹೆದ್ದಾರಿ ತಪಾಸಣೆ ಮತ್ತು ಪರಿಶೀಲನಾ ಕಾರ್ಯ ನಡೆಸಿ, ಅವರು ಮಾತನಾಡಿದರು.

ಇಲ್ಲಿನ ಹೆದ್ದಾರಿ ಸಮೀಪದ ಮಾರ್ಗಗಳಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಜನರ ಜೀವಕ್ಕೆ ಹಾನಿ ಉಂಟಾಗುತ್ತಿದೆ. ಇಲ್ಲಿನ ಸಮಸ್ಯೆಗಳ ತೀವ್ರತೆ ಗಮನಕ್ಕೆ ಬಂದಿರುವುದನ್ನು ಪರಿಗಣಿಸಿ ಪ್ಯಾಕೇಜ್ ನೀಡಲಾಗುವುದು ಎಂದು ಹೇಳಿದರು.

ಇಲ್ಲಿನ ಜನಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವರ್ಗದ ಅಧಿಕಾರಿಗಳ ಜತೆ ದೆಹಲಿಯಲ್ಲಿ ಸಭೆ ನಡೆಸಿ, ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನಗರದ ಕೆಳಗೋಟೆಯ ಸಿ.ಕೆ.ಪುರ ತಿರುವಿನ ಬಳಿ ಇರುವ ಸಮಸ್ಯೆಯ ಬಗ್ಗೆ ಮಾತನಾಡಿ, ಇಲ್ಲಿ ಮೇಲ್ಸೆತುವೆಯ ಅಗತ್ಯತೆ ಇದೆ. ಚಳ್ಳಕೆರೆ ಟೋಲ್‌ಗೇಟ್ ವೃತ್ತದಿಂದ  ಎಂ.ಕೆ.ಹಟ್ಟಿವರೆಗೂ ಮೇಲ್ಸೆತುವೆ ನಿರ್ಮಾಣ ಮಾಡಿದರೆ ನಗರದ ಹಲವು ಸಮಸ್ಯೆ ಬಗೆಹರಿಯಲಿವೆ. ಎಂದು ಹೇಳಿದರಲ್ಲದೇ ಮನವರಿಕೆ ಮಾಡಿಕೊಡುವ ಮೂಲಕ ಕೇಂದ್ರ ಸಚಿವರನ್ನು ಒಪ್ಪಿಸಿದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಸಿಇಒ ನಾರಾಯಣಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷ ಕಾಂತರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

ಅಧಿಕಾರಿಗಳಿಗೆ ನಾಗರಿಕರಿಂದ ತರಾಟೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ನಾಗರಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ಹಲವಾರು ಸಮಸ್ಯೆಗಳನ್ನು ಕೇಂದ್ರ ಸಚಿವರ ಗಮನಕ್ಕೆ ತರುತ್ತಿರುವ ಸಂದರ್ಭದಲ್ಲಿ ಮಾತಿನ ಮಧ್ಯೆ ಅಡ್ಡ ಪಡಿಸಲು ಮುಂದಾದ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳನ್ನು ನಾಗರಿಕರು ತೀವ್ರ ತರಾಟೆಗೆ ತೆಗೆದುಕೊಂಡು, ನಿಮ್ಮ ಕಾರ್ಯ ವೈಖರಿಯಿಂದಾಗಿ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು ಜನ, ಜಾನುವಾರುಗಳ ಪ್ರಾಣಕ್ಕೆ ಹಾನಿ ಉಂಟಾಗುತ್ತಿದೆ. ಇಲ್ಲಿನ ಜನರು ದಿನನಿತ್ಯ ಅನುಭವಿಸುತ್ತಿರುವ ಸಾವು, ನೋವುಗಳು ನಿಮಗೆ ಅರ್ಥವಾಗುವುದಿಲ್ಲ. ಹೆದ್ದಾರಿ ಸಚಿವರಿಗೆ ತಪ್ಪು ಮಾಹಿತಿ ನೀಡಿ ಕೆಲಸಗಳಿಗೆ ಅಡ್ಡಿ ಮಾಡಬೇಡಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.

ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಸೂಕ್ತ ರೀತಿಯ ಸರ್ವೀಸ್ ರಸ್ತೆ, ಸರ್ವೀಸ್ ರಸ್ತೆಗೆ ಹೊಂದಿಕೊಂಡಂತೆ ಪಾದಚರಿ ರಸ್ತೆ ನಿರ್ಮಾಣ ಹಾಗೂ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಮಾಡಲು ಕೇಂದ್ರ ಸಚಿವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT