ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾರ್ ಕಲಾಸಂಪತ್ತು ಉಳಿಸಿ ಬೆಳೆಸುವ ಕೆಲಸ ಆಗಲಿ

Last Updated 17 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಉಡುಪಿ: `ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಕೆಲವೇ ಕೆಲವು ಕಲಾವಿದರಲ್ಲಿ ಕೆ.ಕೆ.ಹೆಬ್ಬಾರ್ ಕೂಡಾ ಒಬ್ಬರು. ಅಂಥ ಮೇರು ಕಲಾವಿದರ ಸಂಸ್ಮರಣೆ ಹಾಗೂ ಅವರಂತಹ ಕಲಾವಿದರನ್ನು ಗುರುತಿಸಿ ಅವರ ಕಲಾಸಂಪತ್ತನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ~ ಎಂದು 3ನೇ ಹಣಕಾಸು ಆಯೋಗದ ಶಿಫಾರಸು ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ.ಕೊಡ್ಗಿ ಇಲ್ಲಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯಿತಿ ಹಾಗೂ ಕೆ.ಕೆ.ಹೆಬ್ಬಾರ್ ಜನ್ಮಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಶುಕ್ರವಾರ ಎಂ.ಜಿ.ಎಂ ಕಾಲೇಜಿನಲ್ಲಿ ಆಯೋಜಿಸಿದ್ದ `ಕೆ.ಕೆ.ಹೆಬ್ಬಾರ್-100~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಹೆಬ್ಬಾರ್ ಅವರು ಉಡುಪಿ ಕಟ್ಟಿಂಗೇರಿಯಲ್ಲಿ ಹುಟ್ಟಿದವರು. ನಂತರದಲ್ಲಿ ಕೆಲವರ್ಷ ಇಲ್ಲಿ ಕಲಾಶಿಕ್ಷಕರಾಗಿ ಬಳಿಕ ಜೀವನದ ಬಹುಭಾಗವನ್ನು ಮುಂಬೈನಲ್ಲಿ ಕಳೆದರು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಎತ್ತರಕ್ಕೆ ಬೆಳೆದರು. ಅವರು ಕೃತಿಗಳ ಮೂಲಕವೇ ಹೆಚ್ಚು ಪರಿಚಿತರು~ ಎಂದರು.

ಹೆಬ್ಬಾರರ ಚಿತ್ರಗಳನ್ನು ಒಳಗೊಂಡ ಕೃತಿಯನ್ನು ಎ.ಜಿ.ಕೊಡ್ಗಿ ಬಿಡುಗಡೆ ಮಾಡಿದರು.
ಕಲಾವಿದ ಪೀಟರ್ ಲೂಯಿಸ್ ಚಿತ್ರವೊಂದನ್ನು ಬಿಡಿಸಿ ಕಲಾವಿದರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
`ಯಾವುದೇ ಕಲಾವಿದ ತನ್ನ ಊರು, ಪರಿಸರ, ಅಲ್ಲಿನ ಸಂಸ್ಕೃತಿ, ಜಾನಪದ ಮರೆತು ಕಲಾಕೃತಿ ರಚಿಸುವುದು ಸರಿಯಲ್ಲ. ಈ ಮಾತನ್ನೇ ಹೆಬ್ಬಾರ್ ಅವರೂ ಹೇಳುತ್ತಿದ್ದರು~ ಎಂದರು.

`ಚಿತ್ರಕಲೆಗೆ ಯಾವುದೇ ಭಾಷೆ ಬೇಕಿಲ್ಲ. ಕಲೆಯೇ ಒಂದು ಮಾಧ್ಯಮ. ಹೀಗಾಗಿ ಅದನ್ನು ಮತ್ತೆ ಅಕ್ಷರಗಳಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ. ಇದು ಆಕರ್ಷಣೀಯವಾಗಬೇಕು ಎಂದೇನೂ ಇಲ್ಲ. ಅರ್ಥವಾಗದೆಯೂ ಇರಬಹುದು. ಇದು ಕಲಾವಿದನ ಆತ್ಮೀಯ ಭಾವನೆ, ಅಂತರಂಗದ ಅಭಿವ್ಯಕ್ತಿ~ ಎಂದು ವಿಶ್ಲೇಷಿಸಿದರು.

ಕೆ.ಕೆ.ಹೆಬ್ಬಾರ್ ಅವರ ಪುತ್ರಿ ರೇಖಾ ಹೆಬ್ಬಾರ್ ರಾವ್ ಮಾತನಾಡಿ, `ತಂದೆ ಹುಟ್ಟಿದ್ದು ಕಟ್ಟಿಂಗೇರಿಯಾದರೂ ಬಳಿಕ ಮುಂಬೈನಲ್ಲಿಯೇ ನೆಲೆನಿಂತರು. ಆದರೂ ಹುಟ್ಟೂರನ್ನು ಯಾವತ್ತೂ ಮರೆಯಲಿಲ್ಲ. ಕಲಾಕೃತಿಗಳನ್ನು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಬಹಳಷ್ಟು ಯುವ ಕಲಾವಿದರಿಗೆ ಅವರು ನೆರವಾದರು. ಅವರ ನೆನಪಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನಾರ್ಹ~ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಕಲೆ,ಸಾಹಿತ್ಯ, ನಾಟಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ವಿಶೇಷತೆ ತೋರ್ಪಡಿಸಲು ಕಲಾವಿದ ಹುಟ್ಟಿ ಬೆಳೆದ ಪರಿಸರವನ್ನು ಮಣ್ಣಿನವಾಸನೆಯನ್ನು ತೋರ್ಪಡಿಸಿದಾಗ ಮಾತ್ರವೇ ವಿಶೇಷತೆ ಲಭ್ಯವಾಗುತ್ತದೆ. ಅದಕ್ಕೆ ಕೋಟ ಶಿವರಾಮ ಕಾರಂತರು, ಕಲಾವಿದ ಹೆಬ್ಬಾರ್ ಮುಂತಾದ ಮಹನೀಯರೇ ನಿದರ್ಶನ~ ಎಂದರು.

ಇದೇ ಸಂದರ್ಭದಲ್ಲಿ ಅವಿಭಜಿತ ದ.ಕ.ಜಿಲ್ಲೆಯ ಕಲಾವಿದರಿಂದ ಕಲಾಶಿಬಿರ. ಹೆಬ್ಬಾರರ ಕುರಿತು ವಿಚಾರಗೋಷ್ಠಿ, ಕಲಾಪ್ರದರ್ಶನ ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಸಹಾಯಕ ನಿರ್ದೇಶಕ ಎಚ್.ಎಚ್.ಶಿವರುದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಹೇರಂಜೆ ಕೃಷ್ಣಭಟ್, ಕಲಾವಿದ ರಮೇಶ್ ರಾವ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT