ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬೆಟ್ಟು ಒತ್ತಿಸಿ, ಜಮೀನು ದೋಚಿದ ಶಿಕ್ಷಕ

Last Updated 20 ಸೆಪ್ಟೆಂಬರ್ 2011, 8:00 IST
ಅಕ್ಷರ ಗಾತ್ರ

ಗಜೇಂದ್ರಗಡ: ಒಡಹುಟ್ಟಿದ ಅನಕ್ಷರಸ್ಥ ಸೋದರನಿಗೆ ಸಹಾಯ ಮಾಡುವ ನೆಪದಲ್ಲಿ ಮಾನಸಿಕ ಅಸ್ವಸ್ಥೆಯಂತಿರುವ ಸಹೋದರನ ಪತ್ನಿಯಿಂದ ಮೋಸದಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಆಕೆಯ ಹೆಸರಿನಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಜಮೀನನ್ನು ಶಿಕ್ಷಕನೊಬ್ಬ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಎಸೆಗಿರುವ ಘಟನೆಯೊಂದು ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ವಂಚನೆಗೆ ಒಳಗಾದ ಮಹಿಳೆ ಇಲ್ಲಿನ ರೇಣವ್ವ ಅಂದಪ್ಪ ರಾಮಶೆಟ್ಟಿ ಆಗಿದ್ದಾರೆ. ಮೋಸದಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಜಮೀನು ದೋಚಿರುವ ವ್ಯಕ್ತಿ ಸಂಗಪ್ಪ ಕಳಕಪ್ಪ ರಾಮಶೆಟ್ಟಿ ಎನ್ನಲಾಗಿದೆ. ಇವರು ಸದ್ಯ ಯಲಬುರ್ಗಾ ತಾಲ್ಲೂಕಿನ ಕಡಬಲಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ.

ಮೂಲತಃ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಅಂದಪ್ಪ,  ಪಟ್ಟಣದ ರೇಣವ್ವ ಆದಪ್ಪ ತಟ್ಟಿತಲಿ ಎನ್ನುವವರನ್ನು ಮದುವೆಯಾಗಿ ಆಕೆಯ ತವರು ಮನೆಯವರು ಕೊಟ್ಟ 2.15 ಎಕರೆ ತೋಟದಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು.

ಪತಿ ಪತ್ನಿ ಇಬ್ಬರು ಅನಕ್ಷರಸ್ಥರಾಗಿದ್ದರಿಂದ ಮನೆಯ ಜವಬ್ದಾರಿಯನ್ನು ಅಂದಪ್ಪನ ಸಹೋದರ ಶಿಕ್ಷಕ ಸಂಗಪ್ಪ ನಿರ್ವಹಿಸುತ್ತ ಬಂದಿದ್ದರು. 18 ವರ್ಷಗಳಿಂದ ಅವರದ್ದೇ ಜಮೀನಿನಲ್ಲಿ ಈ ದಂಪತಿ ಅಕ್ಷರಶಃ ಜೀತದಾಳುಗಳಂತೆ ದುಡಿಯುತ್ತಿದ್ದರೆ, ತೋಟದಿಂದ ಬಂದ ಆದಾಯವೆಲ್ಲ ಸಹೋದರನ ಪಾಲಾಗುತ್ತಿತ್ತು.

ಈ ಮಧ್ಯ ಜಮೀನಿಗೆ ಸಂಬಂಧಿಸಿದಂತೆ ರೇಣವ್ವ ಮತ್ತು ನೆರೆಯ ವ್ಯಕ್ತಿಯೊಬ್ಬರಿಗೆ ತಕರಾರು ಬಂದು ಕೋರ್ಟ್ ಮೆಟ್ಟಿಲೇರಿತ್ತು. ಆ ಸಮಯದಲ್ಲಿ ಕೋರ್ಟಿಗೆ ಕರೆದುಕೊಂಡು ಹೋಗಿ ಬರುತ್ತಿದ್ದ.

ಇತ್ತೀಚಿನ ಮೂರ‌್ನಾಲ್ಕು ವರ್ಷಗಳಲ್ಲಿ ಪಟ್ಟಣದಲ್ಲಿ ಭೂಮಿಯ ಬೆಲೆ ಗಗನಕ್ಕೆ ಮುಟ್ಟಿದ್ದು, ರೇಣವ್ವಳ ತೋಟ ಇರುವ ಕುಷ್ಟಗಿ ರಸ್ತೆಯಲ್ಲಿ ಎಕರೆಗೆ 40ರಿಂದ 50ಲಕ್ಷ ರೂಪಾಯಿ ಬೆಲೆ ಬಂದಿದೆ. ಇದರಿಂದ ದುರಾಸೆಗೆ ಬಿದ್ದ ಶಿಕ್ಷಕ 2010ರಲ್ಲಿ ಸಮಯ ನೋಡಿಕೊಂಡು ಮಾನಸಿಕವಾಗಿ ಅಸ್ವಸ್ಥೆಯಂತಿರುವ ರೇಣವ್ವಳನ್ನು ಸ್ಥಳೀಯ ಉಪನೋಂದಣಿ ಕಚೇರಿಗೆ ಕರೆದುಕೊಂಡು ಹೋಗಿ ಹೆಬ್ಬೆಟ್ಟು ಒತ್ತಿಸಿಕೊಂಡು 30ಗುಂಟೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ.

ಘಟನೆ ನಡೆದು ಕೆಲ ತಿಂಗಳ ವರೆಗೆ ಅನಕ್ಷರಸ್ಥ ದಂಪತಿಗಳಿಗೆ ಈ ವಿಷಯವೇ ಗೊತ್ತಿಲ್ಲ. ಆಕಸ್ಮಿಕವಾಗಿ ಪಹಣಿ ಪತ್ರವನ್ನು ಅಕ್ಕಪಕ್ಕದವರು ನೋಡಿದಾಗಿ ಜಮೀನು ಮಾರಾಟವಾಗಿರುವ ವಿಷಯ ತಿಳಿದು ಪತಿ ಹೌಹಾರಿ ಹೋಗಿದ್ದಾರೆ.

ತಕ್ಷಣವೇ ಹಿರಿಯರನ್ನು ಕೂಡಿಸಿ ಶಿಕ್ಷಕನಿಗೆ ಬುದ್ದಿ ಹೇಳಿ ಜಮೀನು ಬಿಟ್ಟುಕೊಡುವಂತೆ ಹೇಳಿಸಿದ್ದಾರೆ. ಆಗೆಲ್ಲ ತಲೆ ಅಲ್ಲಾಡಿಸಿದ ಶಿಕ್ಷಕರು ನಂತರದಲ್ಲಿ ಜಮೀನು ಬಿಟ್ಟುಕೊಡಲು ಸುತಾರಾಂ ಒಪ್ಪಿಲ್ಲ. ಇದರಿಂದ ಸಿಟ್ಟಿಗೆದ್ದ ಪುರಸಭೆ ಸದಸ್ಯ ಪ್ರಭು ಚವಡಿ, ಶಿವರುದ್ರಪ್ಪ ಸಂಕನೂರ ಸೇರಿದಂತೆ ಕೆಲ ಹಿರಿಯರು ಸೇರಿಕೊಂಡು ದಂಪತಿಗಳ ಮೂಲಕ ಶಿಕ್ಷಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪಿ.ಎಸ್.ಐ. ವೀರರೆಡ್ಡಿ ಅವರು ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಯಲಬುರ್ಗಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಎಫ್.ಐ.ಆರ್. ಪ್ರತಿ ಕೊಟ್ಟಿದ್ದರೂ ಶಿಕ್ಷಣಾಧಿಕಾರಿಗಳು ಶಿಕ್ಷಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ನಮಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಅಂದಪ್ಪ ರಾಮಶೆಟ್ಟಿ ಪೊಲೀಸ್ ಠಾಣೆ, ಪರಿಚಯದ ಜನರಲ್ಲಿ ಪರಿಪರಿಯಾಗಿ ಬೇಡುತ್ತ ಕಣ್ಣೀರು ಸುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT