ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಾಯಿನ್ ವಶ- ಇಬ್ಬರ ಬಂಧನ

Last Updated 20 ಏಪ್ರಿಲ್ 2013, 13:07 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರದ ಹೊರವಲಯದಲ್ಲಿರುವ ಹೋಟೆಲ್‌ವೊಂದರ ಮೇಲೆ ಗುರುವಾರ ದಾಳಿ ನಡೆಸಿರುವ ಉಡುಪಿಯ ಅಬಕಾರಿ ಇಲಾಖೆಯ ಸಿಬ್ಬಂದಿ ಹೆರಾಯಿನ್ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಕುಂದಾಪುರದ ಸುಧೀರ್ ಹೆಗ್ಡೆ ಖಾರ್ವಿಕೇರಿ (29) ಮತ್ತು ಭಟ್ಕಳದ ಶಿರಾಲಿಯ ದಿವಾಕರ ನಾರಾಯಣ್ ದೇವಾಡಿಗ (39) ಬಂಧಿತ ಆರೋಪಿಗಳು.

`ಹೋಟೆಲ್ ಕೊಠಡಿಯೊಂದರಲ್ಲಿ ಸುಧೀರ್ ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ. ಮದ್ಯವರ್ತಿಯಾಗಿ ಕೆಲಸ ಮಾಡುವ ನಾರಾಯಣ್ ಅದನ್ನು ಖರೀದಿಸಲು ಬಂದಿದ್ದ. ವಶಪಡಿಸಿಕೊಂಡಿರುವ ಹೆರಾಯಿನ್‌ನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಒಂದು ಕೋಟಿ ರೂಪಾಯಿ' ಎಂದು ಉಡುಪಿ ಜಿಲ್ಲೆಯ ಉಪ ಅಬಕಾರಿ ಆಯುಕ್ತ ಜಾರ್ಜ್ ಪಿಂಟೊ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಜಿಲ್ಲೆಯ ಐರೋಡಿ ಗ್ರಾಮದ ಜಾನ್ಸನ್ ಮೆಲ್ವನ್ ಲೂಯಿಸ್ ಎಂಬಾತ ಸುಧೀರ್‌ಗೆ ಒಂದು ಕೆ.ಜಿ ಹೆರಾಯಿನ್ ಪೂರೈಕೆ ಮಾಡಿದ್ದ. ಸುಧೀರ್ ಅದನ್ನು ನಾರಾಯಣ್‌ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ. ಪ್ರಕರಣದ ಪ್ರಮುಖ ಆರೋಪಿ ಮೆಲ್ವಿನ್ ತಲೆಮರೆಸಿಕೊಂಡಿದ್ದಾನೆ ಎಂದು  ಮಾಹಿತಿ ನೀಡಿದರು.

`ಹೆರಾಯಿನ್ ಮಾರಾಟ ಜಾಲ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಸಿಕ್ಕಿತ್ತು. ಆದ್ದರಿಂದ ಕುಂದಾಪುರ ಉಪ ವಿಭಾಗದ ಉಪ ಅಧೀಕ್ಷಕಿ ಶುಭದಾ ಮತ್ತು ನಾರಾಯಣ ಮಣಿಯಾಣಿ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡವನ್ನು ರಚಿಸಲಾಗಿತ್ತು. ಹಲವು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಈ ತಂಡ ಹೆರಾಯಿನ್ ಜಾಲ ಭೇದಿಸುವಲ್ಲಿ ಯಶಸ್ವಿಯಾಗಿದೆ. ಕುಂದಾಪುರವನ್ನು ಕೇಂದ್ರೀಕರಿಸಿಕೊಂಡು ಮಣಿಪಾಲ, ಗೋಕರ್ಣ ಮತ್ತು ಗೋವಾಕ್ಕೆ ಆರೋಪಿಗಳು ಹೆರಾಯಿನ್ ಸರಬರಾಜು ಮಾಡುತ್ತಿದ್ದರು' ಎಂದರು.

ಅಬಕಾರಿ ಇಲಾಖೆಯ ತಂಡ ಇಷ್ಟೊಂದು ದೊಡ್ಡ ಮೊತ್ತದ ಹೆರಾಯಿನ್ ವಶಪಡಿಸಿಕೊಂಡಿರುವುದು ಇದೇ ಮೊದಲು. ವಶಪಡಿಸಿಕೊಂಡ ಹೆರಾಯಿನ್ ಅನ್ನು ಮಾದಕ ವಸ್ತು ಪರಿಶೀಲನಾ ಕಿಟ್ ಮೂಲಕ ಪರಿಶೀಲಿಸಲಾಗಿದೆ. ಇದು ಶುದ್ಧ ಹೆರಾಯಿನ್ ಎಂದು ಖಚಿತವಾಗಿದೆ ಎಂದು ಜಾರ್ಜ್ ಪಿಂಟೊ ಹೇಳಿದರು.

ಆರೋಪಿಗಳ ಹಿನ್ನೆಲೆಯ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಲೆಮರೆಸಿಕೊಂಡಿರುವ ಆರೋಪಿ ಇನ್ನೂ 5 ಕೆ.ಜಿ. ಹೆರಾಯಿನ್ ಪೂರೈಸುವುದಾಗಿ ಹೇಳಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು, ಮಂಗಳೂರು ಉಪ ವಿಭಾಗದ ಜಂಟಿ ಆಯುಕ್ತರಾದ ಕೆ.ಸಿ. ಹರಿದಾಸ್ ಅವರ ಮಾರ್ಗದರ್ಶನದಲ್ಲಿ ಮತ್ತು ಜಾರ್ಜ್ ಪಿಂಟೊ ಅವರ ನೇತೃತ್ವದಲ್ಲಿ ಶುಭದಾ ಸಿ ನಾಯಕ್, ಶಂಕರ ಹೆಮ್ಮಾಡಿ, ಎ. ಸುಧಾಕರ, ರವಿರಾಜ್ ಅಣ್ಣಿಗೇರಿ, ಕೆ. ಶಂಕರ, ಹನುಮಂತ ಕುರಿ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT