ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Last Updated 11 ಅಕ್ಟೋಬರ್ 2011, 6:10 IST
ಅಕ್ಷರ ಗಾತ್ರ

ಆಲಮೇಲ: ಗುಂದಗಿ ಗ್ರಾಮಕ್ಕೆ ಕಳೆದ 15ದಿನಗಳಿಂದ ಸಮರ್ಪಕ ವಿದ್ಯುತ್ ಇಲ್ಲದೆ ಗ್ರಾಮ ಕತ್ತಲಲ್ಲಿ ಕಳೆಯುವಂತೆ ಮಾಡಿದ ಇಲ್ಲಿನ ಹೆಸ್ಕಾಂ ಕಚೇರಿಯ ಕಾರ್ಯವೈಖರಿಯನ್ನು ಖಂಡಿಸಿ ಗುಂದಗಿ ಗ್ರಾಮದ ನೂರಾರು ಜನರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.

`ಗುಂದಗಿ ಗ್ರಾಮಕ್ಕೆ ನಿತ್ಯ ಕೇವಲ ಎರಡು ತಾಸು ವಿದ್ಯುತ್ ನೀಡಿ ನಮ್ಮನ್ನು ಇಡೀ ದಿನ ಕತ್ತಲಲ್ಲಿ ಕಳೆಯುವಂತೆ ಮಾಡಲಾಗಿದೆ. ನಮ್ಮ ಊರಿನ ಜನರು ಪಕ್ಕದ ಹಳ್ಳಿಗಳಿಗೆ ಹೋಗಿ ಹಿಟ್ಟು ಬೀಸಿಕೊಂಡು ಬರುವುದು ಸೇರಿದಂತೆ ಹತ್ತಾರು ಸಂಕಷ್ಟಗಳನ್ನು ಎದುರಿಸಿ ಬೇಸತ್ತು ಇಂದು ಈ ಹೋರಾಟಕ್ಕೆ ಇಳಿಯಬೇಕಾಯಿತು~ ಎಂದು ಗ್ರಾಮದ ಹಿರಿಯ ಐ.ಎಸ್.ಬಿರಾದಾರ ಹೇಳಿದರು.

ಇಲ್ಲಿನ ಸಿಬ್ಬಂದಿ ಸರಿಯಾಗಿ ನಮ್ಮ ಗ್ರಾಮಕ್ಕೆ ವಿದ್ಯುತ್ ನೀಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ನಿತ್ಯ 2 ಗಂಟೆಯಷ್ಟೂ ವಿದ್ಯುತ್ ನೀಡಿಲ್ಲ ಎಂದು ದೂರಿದರು. ಇದಕ್ಕೆ ಇಲ್ಲಿನ ಶಾಖಾಧಿಕಾರಿಯೇ ಹೊಣೆ, ಅವರು ಉದ್ದೇಶ ಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಿದ್ದಾರೆ ಎಂದರು.

110 ಕೆವಿ ಕಾಮಾಗಾರಿ ಮುಗಿದಿದ್ದರೂ, ಅದನ್ನು ಬಳಸಿಕೊಳ್ಳದೇ ಇಲ್ಲಿನ ಸಿಬ್ಬಂದಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಉದ್ಘಾಟನೆ ಮಾಡಿಯೇ ಕಾರ‌್ಯಾರಂಭ ಮಾಡುವ ಉದ್ದೇಶ ಸರಿಯಲ್ಲ ಎಂದು ಪರೋಕ್ಷವಾಗಿ ಶಾಸಕರನ್ನು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ಅಧಿಕಾರಿ ಡಿ.ಎಸ್.ಗುಡ್ಡಳ್ಳಿ, ಈ ಕುರಿತು ನಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗುವುದು. ಯಾವುದೇ ಕಾರಣಕ್ಕೂ ವೈಯಕ್ತಿಕ ಉದ್ದೇಶಕ್ಕೆ ವಿದ್ಯುತ್ ಕಡಿತ ಮಾಡಿಲ್ಲ ಎಂದ ಅವರು. ವಿದ್ಯುತ್ ಸಮಸ್ಯೆಯನ್ನು ಅರಿತು ಇಲಾಖೆಯೊಂದಿಗೆ ಸ್ಪಂದಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

ನೂರಾರು ರೈತರು ಬೆಳಿಗ್ಗೆಯೇ ಕಚೇರಿಗೆ ಆಗಮಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಬೀಗ ಜಡಿದು ಕಚೇರಿಯ ಮುಂದೆ ಧರಣಿ ಕುಳಿತುಬಿಟ್ಟರು. ಇಲ್ಲಿನ ರೈತರ ಕೂಗು ನಮ್ಮ ಶಾಸಕರನ್ನು, ಅಧಿಕಾರಿಗಳನ್ನು ಕೇಳಿಸುತ್ತಿಲ್ಲ ಎಂದು ಧರಣಿಕಾರರು ಕೂಗಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತ್ದ್ದಿದದ್ದು ಕಂಡು ಬಂತು.

ಧರಣಿಯಲ್ಲಿ ಗುಂದಗಿ ಮತ್ತು ಅಲಹಳ್ಳಿ ಗ್ರಾಮದ ಐ.ಎಸ್.ಬಿರಾದಾರ, ನಿಂಗಪ್ಪಗೌಡ ಪಾಟೀಲ, ರುದ್ರಪ್ಪ ಬಳಗುಂಪಿ, ಶ್ರೀಶೈಲ ಬಿರಾದಾರ, ಮಲ್ಲು ಬರಗುಡಿ, ನಾಗರಾಜ ಕರ್ಜಗಿ, ದಾದಾಗೌಡ ಪಾಟೀಲ, ಗಂಗಾಧರ ಆಳೂರ, ಶಿವಪ್ಪ ಪಡಶೆಟ್ಟಿ, ಜಟ್ಟೇಪ್ಪ ಪೂಜಾರಿ, ನಂದು ಬಿರಾದಾರ ಮುಂತಾದ ನೂರಾರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT