ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾಮಾಲಿನಿ ರಾಜ್ಯ ಪ್ರವೇಶ

Last Updated 21 ಫೆಬ್ರುವರಿ 2011, 17:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಾಮಾಲಿನಿ ಸೋಮವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿಗೆ ಬಹುಮತ ಇರುವುದರಿಂದ ಇವರ ಆಯ್ಕೆ ಬಹುತೇಕ ಖಚಿತ. ಆದರೂ ಇವರ ಆಯ್ಕೆಗೆ ಅಡ್ಡಗಾಲು ಹಾಕಲು ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಸೋಮವಾರ ಮೊದಲಿಗೆ ಡಿಯೋಲ್ ಹೇಮಾಮಾಲಿನಿ ಧರ್ಮೇಂದ್ರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಇತರ ಮುಖಂಡರು ಹಾಜರಿದ್ದರು.

ಇವರ ನಂತರ ಸಾಹಿತಿ ಮರುಳಸಿದ್ದಪ್ಪ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಇತರರು ಹಾಜರಿದ್ದರು. ವಿಧಾನಸಭೆ ಕಾರ್ಯದರ್ಶಿ ಎಸ್.ಬಿ.ಪಾಟೀಲ್ ನಾಮಪತ್ರ ಸ್ವೀಕರಿಸಿದರು.ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ 106 ಮಂದಿ ಶಾಸಕರ ಬಲ ಇದೆ.

ಇದರಲ್ಲಿ ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್ ಕೂಡ ಸೇರಿದ್ದಾರೆ. ಉಳಿದಂತೆ ಪ್ರತಿಪಕ್ಷವಾದ ಕಾಂಗ್ರೆಸ್ 71 ಮತ್ತು ಜೆಡಿಎಸ್‌ನ 27 ಮಂದಿ ಅಂದರೆ ಒಟ್ಟು 98 ಮಂದಿ ಶಾಸಕರ ಬೆಂಬಲ ಮರುಳಸಿದ್ದಪ್ಪ ಅವರಿಗೆ ಇದೆ. ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. 16 ಮಂದಿ ಶಾಸಕರು ಅನರ್ಹರಾಗಿದ್ದು, ಒಟ್ಟು 19 ಸ್ಥಾನಗಳು ಖಾಲಿ ಇವೆ.

ಬಿಜೆಪಿಯ 11 ಮಂದಿ ಶಾಸಕರ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದು, ಅದರ ತೀರ್ಪು ಹೊರಬಂದರೆ ತಮಗೆ ಅನುಕೂಲ ಆಗಬಹುದು ಎನ್ನುವುದು ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್‌ನ ಲೆಕ್ಕಾಚಾರ. ಆದರೆ, ಇದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ತಮಿಳುನಾಡಿನ ಡಾ.ಕೆ.ಪದ್ಮರಾಜನ್ ಮತ್ತು ಶಿವಮೊಗ್ಗದ ಡಿ.ಟಿ.ಆರ್.ಹರಿಶ್ಚಂದ್ರಗೌಡ ಕೂಡ ನಾಮಪತ್ರ ಸಲ್ಲಿಸಿದ್ದು, ಇವರ ನಾಮಪತ್ರಗಳಲ್ಲಿ ಸೂಚಕರ (ಶಾಸಕರು) ಸಹಿ ಹಾಕಿಸಿಲ್ಲ. ಹೀಗಾಗಿ ಈ ಎರಡೂ ನಾಮಪತ್ರಗಳು ತಿರಸ್ಕೃತವಾಗುವ ಸಾಧ್ಯತೆ ಇದೆ. ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ. ಮಾ.3ಕ್ಕೆ ಚುನಾವಣೆ ನಡೆಯಲಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT