ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆಯಲ್ಲಿ ಬಿರುಕು: ನೀರು ಪೋಲು

Last Updated 15 ಜುಲೈ 2013, 6:21 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ವಡ್ಡರಹಳ್ಳಿ ಜಾಕ್‌ವೆಲ್ ಬಳಿ ಇರುವ ಹೇಮಾವತಿ ಎಡದಂಡೆ ನಾಲೆ ಮೇಲ್ಗಾಲುವೆಯ ಕೆಳಭಾಗದಲ್ಲಿ ಭಾನುವಾರ ಬಿರುಕು ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ನೀರು ಹಳ್ಳದಲ್ಲಿ ಹರಿಯುತ್ತಿದೆ.

ನಾಲೆಯ 72ನೇ ಕಿ.ಮೀ ಬಳಿ ಬೆಳಿಗ್ಗೆ ಮೇಲ್ಗಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ನೀರು ಹರಿಯಲಾರಂಭಿಸಿತು. ನೀರಿನ ರಭಸ ಹೆಚ್ಚಾದಂತೆ ರಂಧ್ರದ ಗಾತ್ರ ದೊಡ್ಡದಾಗುತ್ತಾ ಹೋಗುತ್ತಿದ್ದು, ಮೇಲ್ಗಾಲುವೆ ಕೆಳಗೆ ಹಾದು ಹೋಗಿರುವ ಹಳ್ಳದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಕಲಸಿಂಧ ಕೆರೆ ಸೇರುತ್ತಿದೆ.

ಕಲಸಿಂಧ ಕೆರೆ ತುಂಬುವ ಮುನ್ಸೂಚನೆ ಕಂಡು ಬರುತ್ತಿದ್ದಂತೆ ಕೆರೆಯ ಕೋಡಿಯನ್ನು ಹಿಟಾಚಿಯಿದ ಬಗೆದು ಕಾಲುವೆಯ ಮೂಲಕ ಪಟ್ಟಣದಲ್ಲಿರುವ ಅಮಾನಿಕೆರೆಗೆ ನೀರು ಹರಿಸಲಾಗುತ್ತಿದೆ. ಮೇಲ್ಗಾಲುವೆ ಕೆಳಗೆ ಹಳ್ಳವಿರುವುದರಿಂದ ನೀರು ಪೋಲಾಗದೆ ಕೆರೆ ಸೇರುತ್ತಿದೆ. ನೀರಿನ ರಭಸ ಹೆಚ್ಚಾದಂತೆ ಅಕ್ಕಪಕ್ಕದ ಹೊಲ, ಗದ್ದೆಗೆ ಹರಿದು ಉದ್ದು, ಅಲಸಂದೆ ಬೆಳೆ ಹಾಳಾಗಿದೆ.

ಕಲಸಿಂದ ಕೆರೆಯ ಪಕ್ಕದಲ್ಲಿ ರಸ್ತೆ ಮೇಲೆ ನಾಲ್ಕು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಗ್ರಾಮಕ್ಕೆ ತೆರಳಲು ಜನರು ಪರದಾಡುವಂತಾಗಿದೆ. ಇದರಿಂದ ಪಟ್ಟಣದಿಂದ ಕಲ್ಕೆರೆ ಮಾರ್ಗವಾಗಿ ಕಲಸಿಂಧಕ್ಕೆ ಬರಬೇಕು ಅಥವಾ ಬ್ಯಾಲದಕೆರೆ ಮೂಲಕ ಗ್ರಾಮಕ್ಕೆ ಬರಬೇಕಿದೆ.

ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಲೆಕ್ಕಿಸದೇ ಸಾಗಿದ ವಾಹನವೊಂದು ಸ್ವಲ್ಪ ದೂರ ಕ್ರಮಿಸಿ ನೀರಿನಲ್ಲಿ ಸಿಲುಕಿಕೊಂಡಿತು. ವಾಹನದಲ್ಲಿದ್ದವರು ಇಳಿದು ಬಂದರು. ಕೊನೆಗೆ ಗ್ರಾಮಸ್ಥರು ವಾಹನಕ್ಕೆ ಹಗ್ಗಕಟ್ಟಿ ಎಳೆದು ದಡ ಸೇರಿಸಿದರು.

ಸ್ಥಳಕ್ಕೆ ತಹಶೀಲ್ದಾರ್ ಪಿ.ಜಿ. ನಟರಾಜ್, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಪದ್ಮನಾಬ್, ಕಾರ್ಯಪಾಲಕ ಎಂಜಿನಿಯರ್ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.

`ಮುಂಜಾಗ್ರತಾ ಕ್ರಮವಾಗಿ ನಾಲೆಯ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದ ಅಧಿಕಾರಿಗಳಿಗೆ ದೂರವಾಣಿ ಮಾಡಿ ನಾಲೆಗೆ ಹರಿಸುವ ನೀರು ಸ್ಥಗಿತಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ನಾಲೆಯಲ್ಲಿ ನೀರು ಸ್ಥಗಿತವಾದ ನಂತರ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಹೇಮಾವತಿ ನಾಲೆಗೆ 2600 ಕ್ಯೂಸೆಕ್ ನೀರು ಹರಿಸಲಾಗಿತ್ತು' ಎಂದು ಅಧೀಕ್ಷಕ ಪದ್ಮನಾಬ್ ತಿಳಿಸಿದರು.

`ನೀರಾವರಿ ಇಲಾಖೆಗೆ ವರದಿ'
ವಡ್ಡರಹಳ್ಳಿ ಜಾಕ್‌ವೆಲ್ ಬಳಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆಯ ಮೇಲ್ಗಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ನೀರು ಹೊಲ, ಗದ್ದೆಗಳಿಗೆ ಹರಿದಿರುವುದರಿಂದ ಎಷ್ಟು ಪ್ರಮಾಣದಲ್ಲಿ ಬೆಳೆಗೆ ಹಾನಿಯಾಗಿದೆ ಎಂಬುದನ್ನು ಸೋಮವಾರ ಅಂದಾಜಿಸಲಾಗುವುದು ಎಂದು ತಹಶೀಲ್ದಾರ್ ಪಿ.ಜಿ. ನಟರಾಜ್ ಹೇಳಿದರು.

ಹೇಮಾವತಿ ಎಡದಂಡೆನಾಲೆ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು.

ನೀರಿನ ಹರಿವಿನ ಪ್ರಮಾಣವನ್ನು ಗ್ರಾಮಲೆಕ್ಕಿಗರಿಂದ ವಿಡಿಯೋ ಮಾಡಿಸಲಾಗಿದೆ. ನೀರಿನ ಪ್ರಮಾಣ ಕಡಿಮೆಯಾದ ನಂತರ ಗ್ರಾಮಲೆಕ್ಕಿಗ, ಕಂದಾಯ ನಿರೀಕ್ಷಕರನ್ನು ಆ ಪ್ರದೇಶಕ್ಕೆ ಕಳುಹಿಸಿ ಬೆಳೆ ನಷ್ಟದ ಬಗ್ಗೆ ಅಂದಾಜು ಮಾಡಿ ನೀರಾವರಿ ಇಲಾಖೆ ವರದಿ ನೀಡಲಾಗುವುದು ಎಂದರು.

ಘಟನಾ ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ, ಗುಲಸಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್. ರಾಮಸ್ವಾಮಿ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT