ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನೀರಿಗೆ ಒತ್ತಾಯಿಸಿ ಧರಣಿ

Last Updated 4 ನವೆಂಬರ್ 2011, 8:45 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ವಿವಿಧ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಿಂಗಪ್ಪ ಹೋಬಳಿಯ ರೈತರೊಂದಿಗೆ ಬೆಳ್ಳಾವಿಯಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

ಬೆಳ್ಳಾವಿ ಹೋಬಳಿಯ ಸೋರೆಕುಂಟೆ, ದೊಡ್ಡವೀರನಹಳ್ಳಿ, ದೊಡ್ಡೇರಿ, ಟಿ.ಗೊಲ್ಲಹಳ್ಳಿ, ಹರಿವಾಣಪುರ, ಬಳ್ಳಾಪುರ, ಕನ್ನೇನಹಳ್ಳಿ, ನೆಲಹಾಳ, ಚನ್ನೇನಹಳ್ಳಿ, ಕೋರಾ ಹೋಬಳಿಯ ಬ್ರಹ್ಮಸಂದ್ರ, ಕೆಸ್ತೂರು ಸೇರಿದಂತೆ ಇತರ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೆರಿಲ್ಲ ಎಂದು ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬೂರು- ಗೂಳೂರು ಹೋಬಳಿ ಏತ ನೀರಾವರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೊಂದು ತಿಂಗಳಲ್ಲಿ ಬೆಳ್ಳಾವಿ ಮತ್ತು ಕೋರಾ ಹೋಬಳಿಯ ಕೆರೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ಹೇಳಿಕೆ ನೀಡಿ ಐದು ತಿಂಗಳಾದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿದರು.


ಮಧುಗಿರಿಗೆ ನೀರು ಸರಬರಾಜು ಮಾಡುವ ಮಾರ್ಗದಲ್ಲಿರುವ ಕರ್ಲುಪಾಳ್ಯ ಸಮೀಪ ರೈತರು ಪ್ರತಿಭಟಿಸಿದಾಗ ಬೆಳ್ಳಾವಿ ಕೆರೆಗೆ ನೀರು ಬಿಟ್ಟು, ನಂತರ ರಾಜಕೀಯ ದುರುದ್ದೇಶದಿಂದ ನಿಲ್ಲಿಸಲಾಯಿತು. ಈ ಪ್ರದೇಶದ ರೈತರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ಕುಡಿಯುವ ನೀರಿಗೂ ಪ್ರತಿದಿನ ಪರದಾಟ ತಪ್ಪುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಾತು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.


ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ ಮಾತನಾಡಿ, ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಲ್ಲ ಕೆರೆಗಳಿಗೆ ನೀರು ಹರಿಸಿ ಗ್ರಾಮಗಳಿಗೆ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.


ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಿಜಯ್‌ಕುಮಾರ್, ಮುಖಂಡರಾದ ಕೆಂಪನರಸಯ್ಯ,   ಟಿ.ಆರ್.ನಾಗರಾಜ್, ಎಚ್.ಮಲ್ಲಿಕಾರ್ಜುನ್, ರಂಗನಾಥ್, ಸೋರೆಕುಂಟೆ ಕೃಷ್ಣಮೂರ್ತಿ, ತಾಹೀರಾಬಾನು, ರಾಣಿ ಚಂದ್ರಶೇಖರ್, ಬಿ.ಸಿ.ಉಮೇಶ್, ಧರ್ಮಪಾಲ್, ದೊಡ್ಡೇರಿ ಶಿವಣ್ಣ, ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕುಡಿಯುವ ನೀರು ಖಾಸಗೀಕರಣಕ್ಕೆ ವಿರೋಧ

ತುಮಕೂರು: ಕರ್ನಾಟಕ ಸ್ಲಂ ಜನಾಂದೋಲನ ಮತ್ತು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕುಡಿಯುವ ನೀರು ಸರಬರಾಜು ಖಾಸಗೀಕರಣ ಪ್ರಕ್ರಿಯೆಯನ್ನು ವಿರೋಧಿಸಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಆಹಾರ ಇಲಾಖೆ ಉಪ ನಿರ್ದೇಶಕ ಹೊಂಬಾಳೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ, ದೇಶದಲ್ಲಿರುವ ಬಡವರಿಗೆ ಸಿಗುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸಲು ಶ್ರೀಮಂತರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.


ಸರ್ಕಾರ ವಿಶ್ವಬ್ಯಾಂಕ್‌ನಿಂದ ಪಡೆದಿರುವ ಸಾಲಕ್ಕೆ ಪ್ರತಿದಿನ ರೂ. 600 ಕೋಟಿ ಬಡ್ಡಿ ತೆರಬೇಕಾಗಿದೆ. ಹೀಗಾಗಿ ಬಡವರ ಕಲ್ಯಾಣಕ್ಕಾಗಿ ಜಾರಿಯಾಗಿದ್ದ ಸಬ್ಸಿಡಿಗಳು ಕಡಿತಗೊಳ್ಳುತ್ತಿವೆ. ಪಡಿತರ ಚೀಟಿಗೆ ನೇರ ಸಬ್ಸಿಡಿ, ಕುಡಿಯುವ ನೀರಿನ ಖಾಸಗೀಕರಣ ಹಾಗೂ ಆಧಾರ್ ಕಾರ್ಡ್ ವ್ಯವಸ್ಥೆಯಿಂದ ಬಡವರ ಬದುಕು ಮತ್ತಷ್ಟು ಸಂಕಷ್ಟಕ್ಕೀಡಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಹಗರಣಗಳು ಬೆಳಕಿಗೆ ಬರುತ್ತಿವೆ. ಸಚಿವರು- ಶಾಸಕರು ಸಾಲುಸಾಲಾಗಿ ಜೈಲು ಸೇರುತ್ತಿದ್ದಾರೆ. ಇಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಕನ್ನಡ ಗಂಗಾ ಯೋಜನೆಯಡಿ ಕುಡಿಯುವ ನೀರಿಗೆ ಮೀಟರ್ ಅಳವಡಿಸಲಾಗುತ್ತಿದೆ. ಸಂಸತ್ ಒಪ್ಪದಿದ್ದರೂ ಆಧಾರ್  ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ ಎಂದು ದೂರಿದರು.


ಮನವಿ ಸ್ವೀಕರಿಸಿ ಮಾತನಾಡಿದ ಆಹಾರ ಇಲಾಖೆ ಉಪ ನಿರ್ದೇಶಕ ಹೊಂಬಾಳೇಗೌಡ, ನ್ಯಾಯಬೆಲೆ ಅಂಗಡಿಗಳು ಸರ್ಕಾರಿ ರಜೆ ಹಾಗೂ ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲಿಯೂ ಕಾರ್ಯನಿರ್ವಹಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳುವುದು, ಮಾರುಕಟ್ಟೆ ದಿನಸಿಗಳನ್ನು ಒತ್ತಾಯ ಪೂರ್ವಕವಾಗಿ ಪಡಿತರ ದಾರರಿಗೆ ವಿತರಿಸುವುದು ಕಂಡು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಎನ್.ಕೆ.ಸುಬ್ರಹ್ಮಣ್ಯ, ಜಯಕುಮಾರ್, ಸೈಯದ್ ಅಲ್ತಾಫ್, ಶೆಟ್ಟಳ್ಳಯ್ಯ, ದರ್ಶನ್, ಲಕ್ಷ್ಮಿಪತಿ, ಸಿದ್ದಪ್ಪ, ಗೌರಮ್ಮ, ಅಟೇಕರ್, ರಾಜಣ್ಣ, ಕೆಂಪೇಗೌಡ, ಶಾಹೀನಾ ಉಪಸ್ಥಿತರಿದ್ದರು.

ಎಂಇಎಸ್ ವಿರುದ್ಧ ಕ್ರಮಕ್ಕೆ ಆಗ್ರಹ
ತುಮಕೂರು: ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡಿಗರು ಹಾಗೂ ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ಟೌನ್‌ಹಾಲ್ ವೃತ್ತದಲ್ಲಿ ಬೆಳಗಾವಿ ಮೇಯರ್ ಮಂದ ಬಾಳೆಕುಂದ್ರಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.


ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ವಿಷ್ಣುವರ್ಧನ್, ಬೆಳಗಾವಿ ಮೇಯರ್ ಮಂದ ಬಾಳೆಕುಂದ್ರಿ ಹಾಗೂ ಉಪ ಮೇಯರ್ ರೇಖಾ ಕಿಲ್ಲೇಕರ ಅವರು ರಾಜ್ಯ ಸರ್ಕಾರದ ಎಲ್ಲ ಸವಲತ್ತು ಪಡೆದು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಮರಾಠಿ ಬಳಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿರುವ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಂಇಎಸ್ ಮುಖಂಡರನ್ನು ಬಂಧಿಸಬೇಕು. ಬೆಳಗಾವಿ ಮಹಾನಗರ ಪಾಲಿಕೆಯನ್ನು ತಕ್ಷಣ ವಿಸರ್ಜಿಸಬೇಕು ಎಂದು ಆಗ್ರಹಿಸಿದರು. ಕರವೇ ಪ್ರಧಾನ ಕಾರ್ಯದರ್ಶಿ ರಘುರಾಮ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT