ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಮಡಿಲಿನಲ್ಲಿ ಅಕ್ಷರ ಜಾತ್ರೆಗೆ ಸಿದ್ಧತೆ

Last Updated 17 ಡಿಸೆಂಬರ್ 2013, 7:52 IST
ಅಕ್ಷರ ಗಾತ್ರ

ಮೂಡಿಗೆರೆ: ಕಾಫಿಯ ಕಂಪಿನ ತವರು ಮನೆಯಾಗಿ, ಪ್ರಾಕೃತಿಕ ರಮ್ಯ ತಾಣದ ಹೆಗ್ಗುರುತಾಗಿ, ಕರುನಾಡಿನಲ್ಲಿ ಮೈಚಾಚಿ ಕೊಂಡಿರುವ ಹೇಮಾ ವತಿಯ ಉಗಮ ಸ್ಥಾನವಾದ ಬಾಳೂರು ಹೋಬಳಿಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಸುತ್ತಮುತ್ತಲೂ ಕಾಫಿ ತೋಟಗಳಿಂದ ಕಂಗೊಳಿ ಸುತ್ತಿರುವ ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಇದೇ 20ರಂದು ನಡೆಯುವ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮದ ಲಕ್ಷ್ಮಣರಾವ್‌ ಗುರ್ಜರ್‌ ಪ್ರೌಢಶಾಲಾ ಆವರಣ ಸರ್ವಲಂಕಾರ ಭೂಷಿತವಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಸಕಲ ಸಿದ್ಧತೆ ಗೊಳಿಸಿ ಅಕ್ಷರ ಜಾತ್ರೆಯ ಸವಿಗಾಗಿ ಎದುರು ನೋಡುತ್ತಿದ್ದಾರೆ. ಸುಮಾರು 40 ಕಂದಾಯ ಗ್ರಾಮಗಳನ್ನು ಹೊಂದಿ ರುವ ಬಾಳೂರು ಹೋಬಳಿಯಲ್ಲಿ, ಮರ್ಕಲ್‌, ಕಲ್ಲಕ್ಕಿ, ಮಾಳಿಗನಾಡು, ಕಲ್ಮನೆಯಂತಹ ಕುಗ್ರಾಮಗಳಲ್ಲೂ ಅಕ್ಷರ ಜಾತ್ರೆಯ ಸಿದ್ಧತೆ ನಡೆದಿದೆ.

ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸಮ್ಮೇಳನಕ್ಕೆ ಗ್ರಾಮದ ಶೈಕ್ಷಣಿಕ ಹರಿಕಾರ ಎಂ.ಎಲ್‌. ಗುರ್ಜರ್‌ ಅವರನ್ನು ಸಮ್ಮೇಳನಧ್ಯಕ್ಷರಾಗಿ ಆಯ್ಕೆಗೊಳಿಸ ಲಾಗಿದ್ದು, ಸಮ್ಮೇಳನದಲ್ಲಿ ಕಲಾತಂಡಗಳ ಸಾಂಸ್ಕೃತಿಕ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮಗಳಲ್ಲದೇ ಸಾಹಿತ್ಯ ಕ್ಷೇತ್ರಕ್ಕೆ ಗ್ರಾಮೀಣ ನಂಟಿನ ಬೆಸುಗೆಯನ್ನು ಗಟ್ಟಿಯಾಗಿಸಲು ಒಂದನೇ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕು ಬರಹ ಸಾಹಿತ್ಯ’ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಸಾಹಿತಿ ತಿಪ್ಪೇರುದ್ರಪ್ಪ ಸಾಹಿತ್ಯದಲ್ಲಿ ಬೆಸಗೊಂಡಿರುವ ಗ್ರಾಮೀಣ ಸೊಗಡನ್ನು ಬಿಚ್ಚಿಡಲಿದ್ದಾರೆ.

ಕನ್ನಡ ಭಾಷೆಗೆ ಪೋಷಕವಾಗಿ ‘ಕನ್ನಡ ಭಾಷೆ ಮತ್ತು ಸಾಹಿತ್ಯದ ಸವಾಲುಗಳು’ ಎಂಬ ವಿಚಾರವಾಗಿ ಗೋಷ್ಠಿ 2 ರಲ್ಲಿ ವಿಚಾರ ವಿನಿಮಯ ನಡೆಯಲಿದ್ದು, ಶಿಕ್ಷಕ ಕುಂದೂರು ಅಶೋಕ್‌ ಸವಾಲಿನ ಇತಿಮಿತಿಗಳನ್ನು ಅರಿವು ಮಾಡಿಕೊಡಲಿದ್ದಾರೆ. ಅಲ್ಲದೇ ಸಂಜೆ ನಡೆಯುವ ಸಮಾರೋಪದಲ್ಲಿ ಸಮ್ಮೇಳನಧ್ಯಕ್ಷರ ಆಶಯ, ನಿರೀಕ್ಷೆಗಳ ಹರಿವಿನ ಜೊತೆಗೆ ಗ್ರಾಮೀಣ ಪ್ರದೇಶದ ನಾನಾ ವಲಯಗಳ ಪ್ರತಿನಿಧಿಗಳ ಸಮ್ಮಿಲನವಾಗಲಿದೆ. ಕಾಫಿ ಬೆಳೆಯ ಸುಗ್ಗಿಯ ಕಾಲದಲ್ಲಿ ಬಿಡುವಿಲ್ಲದೇ ಪ್ರಸಕ್ತ ದಿನಗಳನ್ನು ಕಳೆಯುತ್ತಿರುವ ಬಾಳೂರು ಗ್ರಾಮೀಣ ಜನತೆ, ತಮ್ಮ ಪ್ರತಿನಿತ್ಯದ ಬದುಕಿನ ಜಂಜಾಟದ ನಡುವೆಯೂ, ಮೊದಲ ಸಮ್ಮೇಳನದ ಯಶಸ್ಸಿಗಾಗಿ ಕಂಕಣತೊಟ್ಟು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT