ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರೂರು ಗ್ರಾಮ: ಕತ್ತಲೆಯಲ್ಲಿ 25 ಮನೆ

Last Updated 24 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ. ದೂರದ ಮಲೆನಾಡಿನ ಅಂಚಿನಲ್ಲಿ ಇರುವ ಚಂಗಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೇರೂರು ಗ್ರಾಮದ 25 ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಇಲ್ಲ.
ಈ ಗ್ರಾಮದಲ್ಲಿ ಒಟ್ಟು 120 ಕುಟುಂಬಗಳು ವಾಸ ಮಾಡುತ್ತಿದ್ದು, ಇವರಲ್ಲಿ ಶೇ.70ಕ್ಕೂ ಹೆಚ್ಚು ದಲಿತರಿದ್ದಾರೆ.
 
ಇತರೆ ವರ್ಗದ ಕುಟುಂಬಗಳು ಸಹ ಕೂಲಿ ನಂಬಿ ಬದುಕು ನಡೆಸುತ್ತಿವೆ. ತಾಲ್ಲೂಕಿನಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಗಳ ಪಟ್ಟಿಯಲ್ಲಿ ಈ ಗ್ರಾಮ ಮೊದಲನೆ ಸಾಲಿನಲ್ಲಿದೆ.

ಗ್ರಾಮದ ಎಲ್ಲಾ ಕುಟುಂಬಗಳಿಗೂ ಇದುವರೆಗೂ ಸ್ವಂತ ನೆಲೆ ಇಲ್ಲ. ಅಜ್ಜ ಮುತ್ತಜ್ಜ, ತಂದೆ ಕಾಲದಿಂದ ಕಿಟಕಿ ಬಾಗಿಲುಗಳೇ ಇಲ್ಲದ ಮುರುಕಲು ಮನೆಯಲ್ಲಿಯೇ ಸಂಸಾರ ನಡೆಸಲಾಗುತ್ತಿದೆ. ಆ ಮುರುಕಲು ಮನೆಗಳು ಇರುವ ಜಾಗ ಕೂಡ ಗ್ರಾಮಸ್ಥರದ್ದಲ್ಲ, ಮನೆ ಕಟ್ಟಿರುವ ಜಾಗಕ್ಕೆ ಹಕ್ಕು ಪತ್ರ ನೀಡುವಂತೆ ಕಳೆದ ಮೂರು ನಾಲ್ಕು ದಶಕಗಳಿಂದ ಸರ್ಕಾರಕ್ಕೆ ಮೇಲಿಂದ ಮೇಲೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ, ಇದುವರೆಗೂ ಹಕ್ಕು ಪತ್ರ ನೀಡಿಲ್ಲ.
 
ಗ್ರಾಮದ ಸ.ನಂ. 49ರಲ್ಲಿ 51.28 ಎಕರೆ ಭೂಮಿ ಇದ್ದು, ಸದರಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳಲು ನಿವೇಶನ ನೀಡುವಂತೆ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು 1990ರಿಂದಲೂ ಅರ್ಜಿ ಸಲ್ಲಿಸುತ್ತಿವೆ. ಆದರೆ ಇದುವರೆಗೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮದ ಮೂಲ ಭೂತ ಸೌಲಭ್ಯಗಳ ಹೋರಾಟ ಸಮಿತಿ ಮುಖಂಡ ಎಚ್.ಡಿ.ರೇಣುಕಾ `ಪ್ರಜಾವಾಣಿ~ಗೆ ಹೇಳಿದರು.

ಗ್ರಾಮದ ಮಂಜುನಾಥ್, ಹೂವಣ್ಣ, ಬಸವಯ್ಯ ಸೇರಿದಂತೆ 25 ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಸರ್ಕಾರದ ಆರ್‌ಜಿಜಿವೈ ಯೋಜನೆಯಲ್ಲಿ ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನೀಡಲಾಗಿರುವ ಅರ್ಜಿಗಳು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.

ಗ್ರಾಮದಲ್ಲಿ ವಾಹನಗಳನ್ನು ಚಾಲನೆ ಮಾಡುವುದಿರಲಿ, ಸರಿಯಾಗಿ ನಡೆದಾಡುವುದಕ್ಕೂ ಯೋಗ್ಯವಾದ ರಸ್ತೆಗಳಿಲ್ಲ. ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇಲ್ಲ, ಗ್ರಾಮದ ಹೊಟ್‌ಕೆರೆ ಸಮೀಪದ ಸುಮಾರು 30 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚಂಗಡಿಹಳ್ಳಿ ಸಮೀಪ ಇರುವ ಬೋರ್‌ವೆಲ್ ಒಂದರಿಂದ ಎರಡು ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿರುವುದರಿಂದ, ಗ್ರಾಮಕ್ಕೆ ಸಮರ್ಪಕವಾಗಿ ನೀರು ಸರಬರಾಜು ವ್ಯವಸ್ಥೆ ಇಲ್ಲ ಎನ್ನುತ್ತಾರೆ.

13ನೇ ಹಣಕಾಸು ಯೋಜನೆ ಅಡಿಯಲ್ಲಿ ಹೇರೂರು ಗ್ರಾಮಕ್ಕೆ ಕಿರು ನೀರು ಸರಬರಾಜು ಯೋಜನೆಗಾಗಿ  40 ಸಾವಿರ ರೂಪಾಯಿ ಬಿಡುಗಡೆಯಾಗಿದ್ದು, ಸದರಿ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಲಾಗಿದೆ.

ಕಳಪೆ ಕಾಮಗಾರಿ ಮಾಡಿದ್ದ ಕಾರಣಕ್ಕೆ ಗ್ರಾ.ಪಂ. ಆವರಣದಲ್ಲಿ ಪ್ರತಿಭಟನೆ ನಡೆಸಿದ್ದ ಗ್ರಾಮದ ಎಚ್.ಡಿ.ರೇಣುಕಾ, ಸತೀಶ, ಜಯಣ್ಣ, ಹೇಮಂತ್‌ಕುಮಾರ್ ವಿರುದ್ಧ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಡಿ.ಜಗದೀಶ್, ಹಾಗೂ ಸದಸ್ಯ ನಾಗನಹಳ್ಳಿ ದೇವಯ್ಯ ಇವುರಗಳು ಯಸಳೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ಹಾಕಿಸಿ ದೌರ್ಜನ್ಯ ನಡೆಸಿದರು. ಈ ಜನಪ್ರತಿನಿಧಿಗಳ ದ್ವೇಷ ರಾಜಕಾರಣ ನಡೆಸುತ್ತಾ, ಗ್ರಾಮದ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಗ್ರಾ.ಪಂ. ಮಾಜಿ ಸದಸ್ಯೆ ಪುಟ್ಟಮ್ಮ ಆರೋಪಿಸಿದರು.

ಆಶ್ರಯ ಯೋಜನೆ ಅಡಿಯಲ್ಲಿ 2009-10ನೇ ಸಾಲಿನಲ್ಲಿ ಹೂವಮ್ಮ ನಿಂಗಯ್ಯ ಇವರ ಹೆಸರಿನಲ್ಲಿ ಮನೆ ಮಂಜೂರು ಮಾಡಲಾಗಿದ್ದು, ಮನೆ ಕಟ್ಟದೆ ಆ ಹಣ ದುರುಪಯೋಗ ಆಗಿದೆ. ಹೊಟ್‌ಕೆರೆ ದುರಸ್ತಿ ಕಾಮಗಾರಿ ಮಾಡಿರುವುದಾಗಿ 49856 ರೂಪಾಯಿ ಗ್ರಾ.ಪಂ. ಹಣ ಡ್ರಾ ಮಾಡಿಕೊಂಡು ಹಣ ದುರುಪಯೋಗ ಆಗಿದೆ.
 
ಈ ಹಿಂದಿನ ಗ್ರಾ.ಪಂ. ಕಾರ್ಯದರ್ಶಿ ಶಿವಪ್ಪ ಅಭಿವೃದ್ಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸದೆ ದುರುಪಯೋಗ ಮಾಡಿದ್ದಾರೆ. ಇದೆ ವಿರುದ್ಧ ತನಿಖೆ ನಡೆಯಬೇಕು,  ಗ್ರಾಮಸ್ಥರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT