ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರೋಹಳ್ಳಿ ಕೆರೆಗೆ ಮರುಜೀವ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಎಂಬುದು ಉದ್ಯಾನಗಳ ನಗರಿ ಅಲ್ಲ; ಅದು ಕೆರೆ ಕಟ್ಟೆಗಳ ನಗರ; ತೋಟಗಳ ನಗರ. ಈ ಮಹಾನಗರದ ಒಡಲಲ್ಲಿ ಕರಗಿಹೋದ ಕೆರೆಗಳ ಕತೆಗೆ ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ.

ಕೆಲವು ದಶಕಗಳ ಹಿಂದೆಯಂತೂ ನಗರವನ್ನು ಬೆಳೆಸುವ ಅತ್ಯುತ್ಸಾಹದಲ್ಲಿ ಇದ್ದ ಕೆರೆಗಳನ್ನೆಲ್ಲಾ ಬಸಿದು ಇಲ್ಲವೇ ಒತ್ತುವರಿ ಮಾಡಿ, ಬಟಾಬಯಲು ಮಾಡಿ ಬಡಾವಣೆ ನಿರ್ಮಿಸಿ ಶ್ರೀಮಂತರಾದವರು ಒಬ್ಬಿಬ್ಬರಲ್ಲ. ರಾಜಕಾರಣಿಗಳು, ಅಧಿಕಾರಿಗಳು, ನೆಲಗಳ್ಳರು... ಹೀಗೆ ಇವರ ಸಂಖ್ಯೆ ಬೆಳೆಯುತ್ತದೆ.

ಆದರೆ, ಕ್ರಮೇಣ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಅರಿವಾಯಿತು. ಪರಿಸರ ಕಾಳಜಿ ಉಳ್ಳ ವ್ಯಕ್ತಿಗಳು, ಸಂಸ್ಥೆಗಳು ನಡೆಸಿದ ಪ್ರಚಾರದ ಪರಿಣಾಮವಾಗಿ ಸರ್ಕಾರವೂ ಎಚ್ಚೆತ್ತುಕೊಂಡಿದೆ. ರಾಜಕಾರಣಿಗಳು, ಅಧಿಕಾರಿಗಳಲ್ಲಿಯೂ ಕೆಲವರು ಸಾರ್ವಜನಿಕ ಹಿತಚಿಂತನೆಯವರಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ತಮ್ಮ ಭವಿಷ್ಯ, ತಮ್ಮ ಮಕ್ಕಳ ಆರೋಗ್ಯದ ಹಿತವೂ ಅಡಗಿದೆ ಎಂಬುದನ್ನು ಬೇಗನೆ ಅರ್ಥಮಾಡಿಕೊಂಡಿದ್ದಾರೆ.

ಇದರ ಪರಿಣಾಮವಾಗಿ ಈಗ ಕೆರೆಗಳು, ಸಾರ್ವಜನಿಕ ಉದ್ಯಾನಗಳನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾದಂತಿದೆ. ಹೂಳು ತುಂಬಿ, ಜೊಂಡು ಬೆಳೆದು ಕೊಚ್ಚೆಗುಂಡಿಗಳಂತಾಗಿದ್ದ ಕೆಲವು ಹಳೆಯ ಕೆರೆಗಳು ಈಚೆಗೆ ಅಂದಚೆಂದದ ಅಲಂಕಾರ ಮಾಡಿಕೊಂಡು ಹೊಸ ಹುಟ್ಟು ಪಡೆದಂತೆ ಲಕಲಕಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯ ಪ್ರತೀಕಗಳಾಗಿವೆ. ಮತ್ತೀಕೆರೆಯ ಜೆ ಪಿ ಉದ್ಯಾನವನ ಇದಕ್ಕೊಂದು ಉತ್ತಮ ನಿದರ್ಶನವಾಗಿದೆ.

ಎಲ್ಲಾ ಕೆರೆ ಅಂಗಳವನ್ನೂ ಉದ್ಯಾನ ಮಾಡುವುದಕ್ಕೆ ಬದಲು ಇನ್ನೂ ಜಲಮೂಲ ಇರುವಲ್ಲಿ ಅದನ್ನು ಕೆರೆಯಾಗಿಯೇ ಉಳಿಸಿಕೊಳ್ಳುವುದು ತೀರಾ ಅಗತ್ಯ. ಇದರಿಂದ ಅಂತರ್ಜಲ ಹೆಚ್ಚಾಗುವುದು, ಜಲಚರ ಪ್ರಾಣಿ ಪಕ್ಷಿಗಳ ಬದುಕಿಗೆ ದಾರಿಯಾಗುವುದಲ್ಲದೆ `ಕೆರೆ~ಗೆ ನ್ಯಾಯ ಒದಗಿಸಿದಂತೆಯೂ ಆಗುತ್ತದೆ.

ಈಗ ಮಾಗಡಿ ರಸ್ತೆಯ ಹೇರೋಹಳ್ಳಿ ಕೆರೆಗೆ ಅಂತಹ ಕಾಯಕಲ್ಪ ಆಗುತ್ತಿದೆ. ಕಳೆದ ವರ್ಷ ಈ ವಿಸ್ತಾರ ಕೆರೆಯ ನೀರು ದುರ್ವಾಸನೆ ಹೊಡೆವ ಕೊಚ್ಚೆಯ ಆವಾಸಸ್ಥಾನವಾಗಿದ್ದಿತು; ಆದರೂ, ಅದರಲ್ಲಿ ಮೀನು ಸಾಕಾಣಿಕೆ ಮಾಡಿ, ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲದ ಆ ಮೀನಿನ ಮಾರಾಟ ರಸ್ತೆ ಬದಿ ಚೆನ್ನಾಗಿಯೇ ನಡೆಯುತ್ತಿತ್ತು. ಮೀನು ತಿನ್ನಲು ಬರುತ್ತಿದ್ದ ಕೊಕ್ಕರೆಗಳಿಗೂ ಬರವಿರಲಿಲ್ಲ.

ಈಗ ಹೂಳು ತೆಗೆದು, ಜೊಂಡು ಕಿತ್ತು, ಏರಿ, ತೂಬುಗಳ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ಮಳೆಗಾಲಕ್ಕೆ ಈ ಸುತ್ತಿನ ನಿವಾಸಿಗಳಿಗೆ ತಿರುಗಾಟಕ್ಕೆ, ದೋಣಿ ವಿಹಾರಕ್ಕೆ ಸುಂದರ ತಾಣವಾಗಲಿದೆ. 34-33-0 ಎಕರೆ ವಿಸ್ತೀರ್ಣದ ಹೇರೋಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿ ಹೆಸರಿನ ಈ ಯೋಜನೆಯ ಅಂದಾಜು ವೆಚ್ಚ 5.20 ಕೋಟಿ ರೂ. ಇದರಲ್ಲಿ ಕೆರೆಯ ಏರಿ ಅಭಿವೃದ್ಧಿ, ಒಳಚರಂಡಿ ನೀರು ಶುದ್ಧೀಕರಣ ಘಟಕ, ಕೋಡಿ ಮರುನಿರ್ಮಾಣ, ಚೈನ್‌ಲಿಂಕ್ ಬೇಲಿ ನಿರ್ಮಾಣ ಇತ್ಯಾದಿ ಅಡಕಗೊಂಡಿವೆ. ಕೆಲಸ ಭರದಿಂದ ಸಾಗಿದೆ.

ಕೆಲವು ತಿಂಗಳುಗಳ ಹಿಂದೆಯೇ ಕಾಮಗಾರಿ ಪ್ರಾರಂಭ ಆಗಿರುವುದರಿಂದ, ಕೆರೆಯಲ್ಲಿ ನೀರು ಸಾಕಷ್ಟು ಇಲ್ಲ. ಹಾಗಾಗಿ, ಮೀನುಗಳಾಗಲೀ, ಅವನ್ನು ತಿನ್ನಲು ಬರುತ್ತಿದ್ದ ಕೊಕ್ಕರೆಗಳಾಗಲೀ ಕಣ್ಣಿಗೆ ಬೀಳುತ್ತಿಲ್ಲ. ಆದರೆ, ಮುಂದೆ ಅವಕ್ಕೆ ಇದು ಒಳ್ಳೇ ಆಹಾರ ವಿಹಾರ ಧಾಮವಾಗಲಿದೆ.
 
ಕೆರೆಯ ಒಂದೆಡೆ ಇರುವ ಸಣ್ಣ ನಡುಗಡ್ಡೆ ಹಾಗೂ ದೊಡ್ಡ ಮರವನ್ನು ಹಾಗೇ ಉಳಿಸಿಕೊಂಡಿರುವುದು ಕೆರೆಯ ಸೌಂದರ್ಯ, ಹಾಗೂ ಪರಿಸರ ಹಿತದೃಷ್ಟಿಯಿಂದಲೂ ಒಳ್ಳೆಯ ಕೆಲಸ. ಹೊರಗಿನಿಂದ ಬಂದ ಪಕ್ಷಿಗಳು ರಾತ್ರಿ ವೇಳೆ ಈ ಮರದ ತುಂಬಾ ಕೂರುವುದು ನೋಡಲೂ ಒಂದು ಆಕರ್ಷಣೆ. ಕೆರೆಗೆ ಮರುಜೀವ ಬೇಗ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT