ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ಸಲ್ಲಿಸಲು ಕಾರ್ಖಾನೆಗಳಿಗೆ ಸೂಚನೆ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಿಪ್ಪಗೊಂಡನಹಳ್ಳಿಯ ಅರ್ಕಾವತಿ ಜಲಾನಯನ ಪ್ರದೇಶವನ್ನು ಕಲುಷಿತಗೊಳಿಸಿದ ಆರೋಪ ಎದುರಿಸುತ್ತಿರುವ 23 ಕಾರ್ಖಾನೆಗಳಿಗೆ ಹೇಳಿಕೆ ಸಲ್ಲಿಸುವಂತೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ, `ಜಲಾನಯನ ಪ್ರದೇಶದಿಂದ ಕಾರ್ಖಾನೆಗಳನ್ನು ಸ್ಥಳಾಂತರಿಸುವ ಸಂಬಂಧ ಹೇಳಿಕೆ ಸಲ್ಲಿಸಿ~ ಎಂದು ನಿರ್ದೇಶನ ನೀಡಿತು.

ಈ ಪ್ರದೇಶದ ಜಲಮೂಲಗಳನ್ನು ಮಲಿನಗೊಳಿಸುತ್ತಿವೆ ಎಂಬ ಕಾರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 23 ಕಾರ್ಖಾನೆಗಳನ್ನು ಮುಚ್ಚಬೇಕು ಎಂದು ಆದೇಶಿಸಿತ್ತು. ಆದರೆ ಆದೇಶದ ಅನುಸಾರ ಯಾವುದೇ ಕಾರ್ಖಾನೆಯನ್ನು ಮುಚ್ಚಿಲ್ಲ, ಸ್ಥಳಾಂತರಿಸಿಯೂ ಇಲ್ಲ ಎಂಬ ಕಾರಣಕ್ಕೆ, ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಯಥಾಸ್ಥಿತಿಗೆ ಆದೇಶ
ಕನಕಪುರದ ರಾಯಸಂದ್ರದಲ್ಲಿ ಬಡಾವಣೆ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಸ್ವಾಧೀನ ಮಾಡಿಕೊಂಡಿರುವ 261 ಎಕರೆ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

261 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಇದೇ ಮಾರ್ಚ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದರು.

ಅಲ್ಲದೆ, ಪ್ರಕರಣ ಸಂಬಂಧ ಕೆಎಚ್‌ಬಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಎಚ್‌ಬಿಯ ಭೂಸ್ವಾಧೀನ ವಿಶೇಷ ಅಧಿಕಾರಿ ಮತ್ತು ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೆ ಆದೇಶಿಸಿದರು.

ಪಾಸ್ಕಲ್‌ಗೆ ಜಾಮೀನು
ಬೆಂಗಳೂರು:
ಮೂರು ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಫ್ರೆಂಚ್ ಕಾನ್ಸುಲ್ ಜನರಲ್ ಕಚೇರಿಯ ಅಧಿಕಾರಿ ಪಾಸ್ಕಲ್ ಮಜುರಿಯರ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

`ದೇಶ ಬಿಟ್ಟು ತೆರಳಬಾರದು, ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಮತ್ತು ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೀಡಬೇಕು~ ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ ಅವರು ಬುಧವಾರ ಆದೇಶದಲ್ಲಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರುಪಡಿಸಲಾದ ಸಾಂದರ್ಭಿಕ ಸಾಕ್ಷ್ಯಗಳು ಪಾಸ್ಕಲ್ ಅವರೇ ಅತ್ಯಾಚಾರ ಎಸಗಿದ್ದಾರೆ ಎಂಬುದನ್ನು ಸಾಬೀತು ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳು 17 ಪುಟಗಳ ಆದೇಶದಲ್ಲಿ ಹೇಳಿದ್ದಾರೆ.
 
ಯಾವುದೇ ಸಂದರ್ಭದಲ್ಲೂ ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನಿಸಬಾರದು. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು. ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಸಾಕ್ಷಿಗಳಾಗಿರುವ ಮನೆಯ ಅಡುಗೆ ಸಹಾಯಕ ಹಾಗೂ ಕಾರಿನ ಚಾಲಕ ಅಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪಾಸ್ಕಲ್ ಪರ ವಕೀಲ ಸಿ.ವಿ. ನಾಗೇಶ್ ವಾದಿಸಿದ್ದರು.

ಪಾಸ್ಕಲ್ ಅವರ ಮಗಳನ್ನು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ವೈದ್ಯರು ನೀಡಿರುವ ವರದಿ ಅನ್ವಯ, ಮಗುವಿನ ಮೇಲೆ ದೈಹಿಕ ಅತ್ಯಾಚಾರ ನಡೆದಿರುವುದು ನಿಜ. ಆದರೆ ಅದನ್ನು ಎಸಗಿದ್ದು ಪಾಸ್ಕಲ್ ಅಲ್ಲ. ಡಿಎನ್‌ಎ ವರದಿ ಕೂಡ ಅತ್ಯಾಚಾರ ಎಸಗಿದ್ದು ಪಾಸ್ಕಲ್ ಅವರೇ ಎಂದು ಹೇಳುವುದಿಲ್ಲ. ಪ್ರಕರಣದ ತನಿಖೆ ಮುಗಿದಿರುವ ಕಾರಣ, ಪಾಸ್ಕಲ್ ಅವರು ಜೈಲಿನಲ್ಲೇ ಇರಬೇಕಾಗಿಲ್ಲ ಎಂದು ನ್ಯಾಯಮೂತಿಗಳು ಆದೇಶದಲ್ಲಿ ಹೇಳಿದ್ದಾರೆ.

ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪಾಸ್ಕಲ್ ಪತ್ನಿ, ಕೇರಳ ಮೂಲದ ಸುಜಾ ಜೋನ್ಸ್ ನೀಡಿದ ದೂರಿನನ್ವಯ ಪಾಸ್ಕಲ್ ಅವರನ್ನು ಜೂನ್ 19ರಂದು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT