ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ-ಕ ಅಭಿವೃದ್ಧಿ ಕನಸಿಗೆ ಅಂಕಿತ

Last Updated 3 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹೈದರಾಬಾದ್-ಕರ್ನಾಟಕಕ್ಕೆ ಹೊಸ ವರ್ಷದ ಉಡುಗೋರೆ ನೀಡಿದ್ದಾರೆ. ಹಿಂದುಳಿದಿರುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ `ಸಂವಿಧಾನ ತಿದ್ದುಪಡಿ ಮಸೂದೆ' (371ಜೆ) ಗೆ ಅಂಕಿತ ಹಾಕಿದ್ದಾರೆ. ಇದರೊಂದಿಗೆ ಈ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಿದೆ.

ಪ್ರಣವ್ ಮುಖರ್ಜಿ ಸಹಿ ಬಳಿಕ ಅಸ್ತಿತ್ವಕ್ಕೆ ಬಂದಿರುವ `ಸಂವಿಧಾನ (98ನೇ ತಿದ್ದುಪಡಿ) ಮಸೂದೆ- 2012' ಅನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಹೊಸ ತಿದ್ದುಪಡಿ ಕಾಯ್ದೆ ಅನುಷ್ಠಾನ ಈಗ ರಾಜ್ಯ ಸರ್ಕಾರದ ಹೆಗಲಿಗೆ ವರ್ಗಾವಣೆಯಾಗಿದೆ. ಹೊಸ ಕಾಯ್ದೆ ಆರು ಜಿಲ್ಲೆಗಳ ಅಭಿವೃದ್ಧಿಗೆ `ಪ್ರತ್ಯೇಕ ಮಂಡಳಿ' ರಚನೆಗೆ ಅವಕಾಶ ನೀಡಿದೆ. ರಾಜ್ಯ ಸರ್ಕಾರ ರಾಜ್ಯಪಾಲರ ನೇತೃತ್ವದಲ್ಲಿ `ಅಭಿವೃದ್ಧಿ ಮಂಡಳಿ' ರಚಿಸಬೇಕು. ಒಟ್ಟಾರೆ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ಮಂಡಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಸಬೇಕು. ಮಂಡಳಿ ಕಾರ್ಯವೈಖರಿ ಸಂಬಂಧಿಸಿದ ವರದಿಯನ್ನು ಪ್ರತಿವರ್ಷ ವಿಧಾನಸಭೆಯಲ್ಲಿ ಮಂಡಿಸಬೇಕು.

ಅಲ್ಲದೆ, ಈ ಜಿಲ್ಲೆಗಳ ಜನರಿಗೆ ಶಿಕ್ಷಣ, ವೃತ್ತಿಪರ ಶಿಕ್ಷಣದಲ್ಲಿ ಸ್ಥಳೀಯ ಶಾಲಾ- ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲು ಕಾಯ್ದೆ ಅವಕಾಶ ನೀಡಿದೆ. ಸರ್ಕಾರಿ ಮತ್ತು ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಆದರೆ, ಯಾವ ಪ್ರಮಾಣದಲ್ಲಿ ಮತ್ತು ಯಾವ ದರ್ಜೆವರೆಗೆ ಮೀಸಲಾತಿ ನೀಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಬೇಕು. ಇದಕ್ಕಾಗಿ ಪ್ರತ್ಯೇಕ ನೇಮಕಾತಿ ನಿಯಮಾವಳಿ ರೂಪಿಸಬೇಕಿದೆ.

ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನ ನಿಗದಿ ಮತ್ತು ನೇಮಕಾತಿ ನಿಯಮ ರೂಪಿಸಲು ಅಗತ್ಯವಾದರೆ ಸರ್ಕಾರ `ಪರಿಣತರ ಸಮಿತಿ' ರಚಿಸಬಹುದು ಅಥವಾ ನೇರವಾಗಿ ತೀರ್ಮಾನ ಮಾಡಬಹುದು. ಕಾಯ್ದೆಯಡಿ ರೂಪಿಸಿದ ನಿಯಮಗಳನ್ನು ವಿಧಾನಮಂಡಲದಲ್ಲಿ ಮಂಡಿಸಬಹುದು ಅಥವಾ `ಅಧಿಕೃತ ಆದೇಶ'ದ ಮೂಲಕ ಜಾರಿಗೆ ಕೊಡಬಹುದಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ. ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ 371 (ಜೆ) ಮಸೂದೆಗೆ ಸರ್ವಾನುಮತದ ಅಂಗೀಕಾರ ನೀಡಿತ್ತು. ಅನಂತರ ಮಸೂದೆ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಹೋಗಿತ್ತು. ಪ್ರಣವ್ ಮುಖರ್ಜಿ ವಿಳಂಬ ಮಾಡದೆ ಕೆಲವೇ ದಿನಗಳಲ್ಲಿ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ. ಜನವರಿ ಒಂದರಂದು ಮಸೂದೆಗೆ ಸಹಿ ಹಾಕಿದ್ದಾರೆ. ಎರಡರಂದು ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಆಗ್ರಹ: ಕೇಂದ್ರ ಸರ್ಕಾರ ಈ ಭಾಗದ ಜಿಲ್ಲೆಗಳ ಜನರ ಅಪೇಕ್ಷೆಯನ್ನು ಪೂರ್ತಿಗೊಳಿಸಿದ್ದು, ರಾಜ್ಯ ಸರ್ಕಾರ ತಡ ಮಾಡದೆ `ತಿದ್ದುಪಡಿ ಕಾಯ್ದೆ'ಯನ್ನು ಜಾರಿಗೆ ತರಬೇಕು ಎಂದು ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ತಪ್ಪುಗಳನ್ನು ಹುಡುಕದೆ ಹೈದರಾಬಾದ್- ಕರ್ನಾಟಕ ಭಾಗದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕುಂಟು ನೆಪಗಳನ್ನು ಹುಡುಕಿಕೊಂಡು ರಾಜಕೀಯ ಮಾಡಬಾರದು. ಆರು ಜಿಲ್ಲೆಗಳ ಅಭಿವೃದ್ಧಿಗೆ ಕೂಡಲೇ `ಪ್ರತ್ಯೇಕ ಮಂಡಳಿ' ರಚಿಸಬೇಕು. ಮುಂಗಡ ಪತ್ರ ಮಂಡನೆ ವೇಳೆ ಹೈದರಾಬಾದ್- ಕರ್ನಾಟಕಕ್ಕೆ ಪ್ರತ್ಯೇಕ ಹಣ ಒದಗಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ತಿದ್ದುಪಡಿ ಕಾಯ್ದೆಗೆ ಅಗತ್ಯವಾದ ನಿಯಮಗಳನ್ನು ರೂಪಿಸಬೇಕೆಂದು ಕಾಯುವ ಅಗತ್ಯವಿಲ್ಲ. ಬೇಕಾದರೆ ನಿರ್ದಿಷ್ಟ ಕಾರ್ಯಸೂಚಿ ನಿಗದಿ ಮಾಡಿ ಪರಿಣತ ಸಮಿತಿ ರಚಿಸಲಿ. ಯೋಜನೆ, ಹಣಕಾಸು, ಸಿಬ್ಬಂದಿ ಸುಧಾರಣೆ ಮತ್ತು ಕಾನೂನು ಇಲಾಖೆ ಪ್ರತಿನಿಧಿಗಳು ಸಮಿತಿಯಲ್ಲಿರಲಿ. ನಿಗದಿತ ಕಾಲಮಿತಿಯಲ್ಲಿ ಸಮಿತಿಯಿಂದ ವರದಿ ಪಡೆಯಲಿ ಎಂದು ಗುಲ್ಬರ್ಗ ಲೋಕಸಭಾ ಸದಸ್ಯರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದರು.

ಪ್ರಾದೇಶಿಕ ಅಸಮಾನತೆ ಕುರಿತು ಅಧ್ಯಯನ ನಡೆಸಿದ ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ಹೈದರಾಬಾದ್- ಕರ್ನಾಟಕದ ಜಿಲ್ಲೆಗಳಿಗೆ 9 ಸಾವಿರ ಕೋಟಿ ಅನುದಾನ ಒದಗಿಸಲು ಶಿಫಾರಸು ಮಾಡಿದೆ. ಇದೀಗ ಸುಮಾರು 20 ಸಾವಿರ ಕೋಟಿ ಮುಟ್ಟಿರಬಹುದು ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ಜಿಲ್ಲೆಗಳಲ್ಲಿ ಮೂಲಸೌಲಭ್ಯ, ವೃತ್ತಿಪರ ಕಾಲೇಜು ಹಾಗೂ ವೃತ್ತಿಪರ ತರಬೇತಿ ಕೋರ್ಸ್ ಆರಂಭಿಸಬೇಕು. ನೇಮಕಾತಿ ನಿಯಮ ರೂಪಿಸುವವರೆಗೂ ಸಾಮಾನ್ಯ ಹುದ್ದೆಗಳ ನೇಮಕಾತಿ ಮುಂದೂಡಬೇಕು. ಅಗತ್ಯವಾದರೆ ತುರ್ತು ಸೇವೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿ ಎಂದು ಖರ್ಗೆ ಸಲಹೆ ಮಾಡಿದರು. ತಿದ್ದುಪಡಿ ಕಾಯ್ದೆ ಜಾರಿಗೆ ಸಹಕರಿಸಿದ ಆರು ಜಿಲ್ಲೆಗಳ ಜನ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT