ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ. ಪ್ರವಾಸೋದ್ಯಮ; ನಿರೀಕ್ಷೆ ಹಲವು

ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆಗೆ ಪ್ರವಾಸೋದ್ಯಮ ಖಾತೆ: ಚಿಗುರಿದ ಆಸೆ
Last Updated 23 ಜೂನ್ 2016, 9:46 IST
ಅಕ್ಷರ ಗಾತ್ರ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಸರ್ವಧರ್ಮಗಳ ಪ್ರಸಿದ್ಧ ಶ್ರದ್ಧಾ ಕೇಂದ್ರಗಳ ನೆಲೆವೀಡು. ಶರಣರ ಕ್ರಾಂತಿ ನಡೆದಿದ್ದು ಇದೇ ನೆಲದಲ್ಲಿ. ಐತಿಹಾಸಿಕ ಕೋಟೆ, ಕೊತ್ತಲಗಳೂ ಇಲ್ಲಿವೆ. ನೈಸರ್ಗಿಕ ಸಂಪನ್ಮೂಲಗಳಿಂದಲೂ ಈ ಭೂಮಿ ಸಂಪದ್ಭರಿತ. ಇಷ್ಟೆಲ್ಲ ಇದ್ದರೂ ಈ ಪ್ರದೇಶ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿಲ್ಲ ಎಂಬ ಕೊರಗು ಇಲ್ಲಿಯ ಜನತೆಯದ್ದು.

ಸಂಪುಟ ಪುನಾರಚನೆಯ ನಂತರ ಪ್ರವಾಸೋದ್ಯಮ ಖಾತೆ ಕಲಬುರ್ಗಿ ಜಿಲ್ಲೆಯವರಿಗೆ ದೊರೆತಿದೆ. ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾರೆ. ಈ ಭಾಗದ ಪ್ರವಾಸೋದ್ಯಮಕ್ಕೆ ಒತ್ತು ಸಿಗಬಹುದೇ ಎಂಬ ನಿರೀಕ್ಷೆಯೂ ಹೆಚ್ಚಾಗಿದೆ.

ಹಾಗೆ ನೋಡಿದರೆ ಕಲಬುರ್ಗಿ ನಗರವೇ ಒಂದು ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಬೇಕಿತ್ತು. ಇಲ್ಲಿರುವ ಶರಣಬಸವೇಶ್ವರ ದೇವಾಲಯ, ಖ್ವಾಜಾ ಬಂದಾನವಾಜ್‌ ದರ್ಗಾ, ಬುದ್ಧ ವಿಹಾರ, ಜ್ಯೋತಿರ್ಲಿಂಗಗಳ ದೇವಾ ಲಯ ಇರುವ ಪ್ರಜಾಪಿತ ಬ್ರಹ್ಮಾ ಕುಮಾರಿ ಸಂಸ್ಥೆಯ ಅಮೃತ ಸರೋವರ, ಸೇಂಟ್‌ ಮೇರಿ ಚರ್ಚ್‌, ಕೋರಂಟಿ ಹನುಮಾನ ದೇವಾಲಯ... ಕೋಟೆ ಮತ್ತಿತರ ಐತಿಹಾಸಿಕ ಸ್ಥಳಗಳಿವೆ.

ಇಲ್ಲಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡು ತ್ತಾರಾದರೂ, ಅವರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲ. ಈ ಎಲ್ಲ ತಾಣ ಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ‘ಸಿಟಿ ಪ್ಯಾಕೇಜ್‌ ಟೂರ್‌’ ಆರಂಭಿಸಲು ಇರುವ ವಿಪುಲ ಅವಕಾಶವನ್ನೂ ಸಂಬಂಧಿಸಿದ ಇಲಾಖೆಗಳು ಬಳಸಿಕೊ ಳ್ಳುತ್ತಿಲ್ಲ ಎಂಬ ದೂರು ಇದೆ.

ಜಿಲ್ಲೆಯ ಗಾಣಗಾಪುರ ದತ್ತ ದೇವಸ್ಥಾನ, ಘತ್ತರಗಿಯ ಭಾಗ್ಯವಂತಿ ದೇವಸ್ಥಾನ, ಚಂದ್ರಂಪಳ್ಳಿ ಜಲಾಶಯ, ಚಿತ್ತಾಪುರದ ದರ್ಗಾ, ಛಾಯಾಭಗವತಿ, ಸನ್ನತಿ, ಕಾಳಗಿ, ಜೇವರ್ಗಿ,  ಸೇಡಂ ಮತ್ತು ಮಳಖೇಡಗಳು ಪ್ರವಾಸಿ ತಾಣಗಳ ಪಟ್ಟಿಯಲ್ಲಿದ್ದರೂ ಸೌಲಭ್ಯ ಮರೀಚಿಕೆಯಾಗಿದೆ.

ಬೀದರ್‌ ಕೋಟೆ, ಮಹಮೂದ್‌ ಗವಾನ ಮದರಸಾ, ಚೌಬಾರಾ, ಬರೀದ್‌ಶಾಹಿ ಹಾಗೂ ಬಹಮನಿ ಸುಲ್ತಾನರ ಸ್ಮಾರಕ, ಗುರುನಾನಕ ಝೀರಾ, ನರಸಿಂಹ ಝರಣಿ, ಪಾಪ ನಾಶ ಮಂದಿರ, ಜಲಸಂಗಿ ದೇವಾಲಯ ಹಾಗೂ ರಾಯಚೂರು ಕೋಟೆ, ಮಲಿಯಾಬಾದ್‌, ಕುರುವಪುರ–ನಾರದಗಡ್ಡೆ, ದೇವದುರ್ಗದ ದೊರೆಗಳ ದರ್ಬಾರ, ಜಲದುರ್ಗ ಕೋಟೆ, ಪಂಚಮುಖಿ, ಕೊಪ್ಪರದ ಉಗ್ರ ನರಸಿಂಹ, ಅಂಬಾಮಠ, ಜಾಲಹಳ್ಳಿ, ಹಟ್ಟಿಚಿನ್ನದಗಣಿ, ಮಸ್ಕಿ, ಕವಿತಾಳ.

ಕೊಪ್ಪಳದಲ್ಲಿಯ ನಿಸರ್ಗ ನಿರ್ಮಿತ ಶಿಲೆಗಳ ಸಾಲು, ಗವಿಮಠ, ಕೋಟೆ, ಮಲೆಮಲ್ಲೇಶ್ವರ ಬೆಟ್ಟ, ಆನೆಗೊಂದಿ, ಅಂಜನಾದ್ರಿ ಬೆಟ್ಟ, ಹನುಮಸಾಗರ ಕಪಿಲ ತೀರ್ಥ, ಕರಿಸಿದ್ದೇಶ್ವರ ದೇವಾಲಯ, ಕುಷ್ಟಗಿ ತಾಲ್ಲೂಕಿನ ಪುರ ಸೋಮೇಶ್ವರ ದೇವಾಲಯ, ಕೋಟಿ ಲಿಂಗಗಳ ತಾಣ, ಕನಕಗಿರಿ, ಹುಲಿಗೆಮ್ಮ ದೇವಸ್ಥಾನ, ಇಟಗಿ ದೇವಾಲಯ ಯಾದಗಿರಿ ಜಿಲ್ಲೆಯ  ಸ್ಲೀಪಿಂಗ್‌ ಬುದ್ಧ, ಗೋಗಿ, ಸುರಪುರ ತಾಲ್ಲೂಕಿನ ರಾಜನಕೊಳ್ಳೂರು,

ದೇವರ ದಾಸಿಮ ಯ್ಯನ ಮುದನೂರು, ಸುರಪುರದ ವೇಣುಗೋಪಾಲಸ್ವಾಮಿ ದೇವಾಲಯ, ತಿಂಥಣಿ, ನಾರಾಯಣಪುರ ಜಲಾಶಯ, ವಾಗಣಗೇರಾ ಕೋಟೆ... ಹೀಗೆ ಪ್ರವಾಸಿ ತಾಣಗಳ ಪಟ್ಟಿ ಬಹುದೊಡ್ಡದು.

‘ಹಂಪಿ, ಆನೆಗೊಂದಿ, ಬೀದರ್‌ಗಳನ್ನು ಹೊರತು ಪಡಿಸಿದರೆ ಉಳಿದೆಡೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಅಷ್ಟಾಗಿ ಆಗುತ್ತಿಲ್ಲ’ ಎಂಬುದು ಪ್ರವಾಸಿ ಪ್ರಿಯರ ಅಳಲು.

ನಿರಾಸೆ: ರಾಜ್ಯ ಸರ್ಕಾರದ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2015–2020’ ಈ ಭಾಗಕ್ಕೆ  ಅಷ್ಟೇನು ಆಶಾದಾಯಕ ವಾಗಿಲ್ಲ ಎಂಬ ಅಸಮಧಾನವೂ ಇದೆ. ನಗರ ಪ್ರವಾಸೋದ್ಯಮ ಅಭಿವೃದ್ಧಿಗೆ ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಮತ್ತು ತುಮಕೂರುಗಳನ್ನು ಮಾತ್ರ ಗುರುತಿಸಲಾಗಿದೆ.

ಪ್ರವಾಸಿ ಗರನ್ನು ಸೆಳೆಯಲು ಈ ನಗರಗಳಲ್ಲಿ ಮನ ರಂಜನಾ ಉದ್ಯಾನ, ಗಾಲ್ಫ್‌ ಕೋರ್ಟ್‌, ವಸ್ತುಸಂಗ್ರಹಾಲಯ, ಗ್ಯಾಲರಿ, ಆರ್ಟ್‌ ಅಂಡ್‌ ಕ್ರಾಫ್ಟ್‌ ವಿಲೇಜ್‌ಗಳನ್ನು ಸ್ಥಾಪಿಸುವುದಾಗಿ ಈ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಗರ ಪ್ರವಾಸೋದ್ಯಮ ಅಭಿವೃದ್ಧಿ ಪಟ್ಟಿಯಲ್ಲಿ ಹೈ.ಕ.ದ ನಗರಗಳು ಬಿಟ್ಟುಹೋಗಿವೆ.

ಹೈ.ಕ. ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳು

*ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸೋದ್ಯಮ ಅಭಿವೃದ್ಧಿ

*ಹೊಸಪೇಟೆ–ಕೊಪ್ಪಳ–ಯಾದಗಿರಿ–ಕಲಬುರ್ಗಿ–ಬೀದರ್‌–ರಾಯಚೂರು ಪ್ರವಾಸಿ ಸರ್ಕ್ಯೂಟ್‌ ಅಭಿವೃದ್ಧಿ

*ನಗರ ಪ್ರದೇಶದಲ್ಲಿ ಅರ್ಧ ದಿನ, ಜಿಲ್ಲೆಯಲ್ಲಿ ಒಂದು ದಿನ ಹಾಗೂ ಈ ಸರ್ಕ್ಯೂಟ್‌ಗಳಲ್ಲಿ 2/3 ದಿನಗಳ ಪ್ಯಾಕೇಜ್‌ ಟೂರ್‌ ವ್ಯವಸ್ಥೆ

*ಜಲಾಶಯಗಳ ಹಿನ್ನೀರಿನ ಹತ್ತಿರ ವಾಟರ್‌ ಅಮ್ಯೂಜ್‌ಮೆಂಟ್‌ ಪಾರ್ಕ್‌ ಸ್ಥಾಪನೆ

*ದೊಡ್ಡ ದೊಡ್ಡ ಕೆರೆಗಳಲ್ಲಿ ಬೋಟಿಂಗ್‌ ಆರಂಭ

*ಶಹಾಪುರದ ‘ಸ್ಲೀಪಿಂಗ್‌ ಬುದ್ಧ’ ಸ್ಥಳದಲ್ಲಿ ‘ಬುದ್ಧಿಸ್ಟ್‌ ಥೀಮ್‌ ಪಾರ್ಕ್‌’ ಸ್ಥಾಪನೆ

*ಕಲಬುರ್ಗಿ,  ಬೀದರ್‌, ರಾಯಚೂರು, ಯಾದಗಿರಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ಹೋಟೆಲ್‌, ರೆಸಾರ್ಟ್‌ ಆರಂಭ

*ಚಿಂಚೋಳಿ ಸುತ್ತ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ

*ಚಂದ್ರಂಪಳ್ಳಿ ಜಲಾಶಯದ ಹತ್ತಿರ ಜಂಗಲ್‌ ಲಾಡ್ಜ್‌ ಅಂಡ್‌ ರೆಸಾರ್ಟ್‌ ಸ್ಥಾಪನೆ

*ಸನ್ನತಿಯಲ್ಲಿ ಅಂತರರಾಷ್ಟ್ರೀಯ ಬುದ್ಧ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ

*ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಮರತೂರು ಗ್ರಾಮದಲ್ಲಿ ಭಾರತೀಯ ಧರ್ಮಶಾಸ್ತ್ರದ ವಸ್ತುಸಂಗ್ರಹಾಲಯ ಸ್ಥಾಪನೆ

*ನಾಗನಹಳ್ಳಿ ಪೊಲೀಸ್‌ ತರಬೇತಿ ಶಾಲೆಯ ಆವರಣದಲ್ಲಿ ಕರ್ನಾಟಕ ಪೊಲೀಸ್‌ ವ್ಯವಸ್ಥೆ ಕುರಿತ ವಸ್ತುಸಂಗ್ರಹಾಲಯ ಸ್ಥಾಪನೆ

*
ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಶೀಘ್ರವೇ ಸಭೆ ಕರೆದು ಚರ್ಚೆ ನಡೆಸುತ್ತೇವೆ. ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ.
ರಮೇಶ ಮಂದಕನಳ್ಳಿ, ಎಚ್‌ಕೆಸಿಸಿಐ ಪ್ರವಾಸೋದ್ಯಮ ಉಪ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT