ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ ಹೋರಾಟ ಸಮಿತಿ ಕರೆ: ಐದು ಜಿಲ್ಲೆಗಳಲ್ಲಿ ಬಂದ್ ಯಶಸ್ವಿ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಸಂವಿಧಾನದ 371ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ `ಹೈದರಾಬಾದ್ ಕರ್ನಾಟಕ ಬಂದ್~ ಬಹುತೇಕ ಯಶಸ್ವಿಯಾಯಿತು.

ವಿಭಾಗೀಯ ಕೇಂದ್ರವಾದ ಗುಲ್ಬರ್ಗದಲ್ಲಿ ಬಂದ್‌ನ ಪ್ರಭಾವ ತೀವ್ರವಾಗಿತ್ತು. ನಸುಕಿನ ಜಾವದಿಂದಲೇ ಬಸ್ ಸಂಚಾರ ಸ್ಥಗಿತವಾಗಿತ್ತು. ಆಟೋ ಚಾಲಕರು ಸಹ ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ರಸ್ತೆಗಳು ಬಣಗುಟ್ಟಿದವು.  ಜಗತ್ ವೃತ್ತದಿಂದ ಡಿ.ಸಿ. ಕಚೇರಿವರೆಗೆ ಸಾವಿರಾರು ಕಾರ್ಯಕರ್ತರು ರ‌್ಯಾಲಿ ನಡೆಸಿ, ಮನವಿ ಸಲ್ಲಿಸಿದರು.

ಕೊಪ್ಪಳದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ- ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ, ವರ್ತಕರು ಬಂದ್‌ಗೆ ಬೆಂಬಲ ನೀಡಿದರು. ಗಡಿಯಾರ ಕಂಬದಿಂದ ಅಶೋಕ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ರಾಯಚೂರು ಜಿಲ್ಲೆಯಾದ್ಯಂತ ಬಂದ್ ಶಾಂತಿಯುತವಾಗಿ ನಡೆಯಿತು. ರಾಯಚೂರು ನಗರದಲ್ಲಿ ಬಸ್ ಸಂಚಾರ ಪೂರ್ಣ ಸ್ಥಗಿತಗೊಂಡಿದ್ದರೆ, ಆಟೋಗಳು ಎಂದಿನಂತೆ ಸಂಚರಿಸಿದವು. ಲಿಂಗಸುಗೂರಿನಲ್ಲಿ ಸಂಸದ ಎಸ್.ಪಕ್ಕೀರಪ್ಪ ಹಾಗೂ ಶಾಸಕ ಮಾನಪ್ಪ ವಜ್ಜಲ ಅವರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ, ಕೇಂದ್ರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿದರು.

ಬೀದರ್‌ನಲ್ಲೂ ಬಂದ್ ಬಹುತೇಕ ಯಶಸ್ವಿಯಾಯಿತು. 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ನಡೆದ ಮೆರವಣಿಗೆಯಲ್ಲಿ ಶಾಸಕರಾದ ಬಂಡೆಪ್ಪ ಕಾಶಂಪೂರ, ರೆಹಮಾನ್ ಖಾನ್ ಹಾಗೂ ಪ್ರಭು ಚವ್ಹಾಣ್ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರೂ ಭಾಗವಹಿಸಿದ್ದರು.

ಮೆರವಣಿಗೆ ಸಂದರ್ಭದಲ್ಲಿ ಕೆಲವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ವಿರುದ್ಧ ಘೋಷಣೆ ಹಾಕಿದಾಗ, ಇನ್ನೊಂದು ಗುಂಪು ಅದನ್ನು ಆಕ್ಷೇಪಿಸಿತು. ಇದರಿಂದಾಗಿ ಎರಡೂ ಗುಂಪುಗಳ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಯಾದಗಿರಿಯಲ್ಲಿ ಬಂದ್ ಶಾಂತಿಯುತವಾಗಿತ್ತು. ಶಾಲೆ-ಕಾಲೇಜು, ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದವು. ಬೆಳಿಗ್ಗೆಯಿಂದ ಬಸ್‌ಗಳು ಸಂಚಾರ ನಡೆಸಲಿಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ, ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮಂದಾದಾಗ ಪೊಲೀಸರು ಧಾವಿಸಿ ಪ್ರಯತ್ನ ವಿಫಲಗೊಳಿಸಿದರು. ಗಾಂಧಿ ವೃತ್ತದಿಂದ ಡಿ.ಸಿ. ಕಚೇರಿವರೆಗೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳವರು, ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಇದಕ್ಕೆ ವ್ಯತಿರಿಕ್ತವಾಗಿ, ಬಳ್ಳಾರಿ ಜಿಲ್ಲೆಯಲ್ಲಿ ಬಂದ್‌ನ ಸುಳಿವೇ ಕಾಣಿಸಲಿಲ್ಲ. ಹೋರಾಟ ಸಮಿತಿಯು ಬಳ್ಳಾರಿ ಜಿಲ್ಲೆಯನ್ನು ಹೈ-ಕ ಪ್ರದೇಶಕ್ಕೆ ಸೇರಿಸಿಕೊಂಡಿದ್ದರೂ ಆ ಜಿಲ್ಲೆಯಲ್ಲಿ ಬಂದ್ ಇರಲಿಲ್ಲ.

`ರಾಜಕೀಯ ಪ್ರೇರಿತ~
~ಸಂವಿಧಾನದ 371ನೇ ವಿಧಿಯ ತಿದ್ದುಪಡಿಗಾಗಿ ಕೆಲವರು ರಾಜಕೀಯ ಪ್ರೇರಿತ ಹೋರಾಟಗಳನ್ನು ನಡೆಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ~ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಒತ್ತಡ ತರುತ್ತಿಲ್ಲ: ಸಿ.ಎಂ
ಬೆಂಗಳೂರು:
ಜನರ ಭಾವನೆಗಳನ್ನು ಗೌರವಿಸಿ, ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಕ್ಷಾತೀತವಾಗಿ ಪ್ರಯತ್ನ ನಡೆಸಿದೆ. ಆದರೆ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮ ಸಿಂಗ್ ಅವರು ಈ ನಿಟ್ಟಿನಲ್ಲಿ ಸಾಕಷ್ಟು ಒತ್ತಡ ತರುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT