ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಗೆ ವಿಶೇಷ ಸ್ಥಾನ: ಮೇರೆ ಮೀರಿದ ಹರ್ಷ

Last Updated 5 ಆಗಸ್ಟ್ 2012, 9:50 IST
ಅಕ್ಷರ ಗಾತ್ರ

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಎಲ್ಲ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನ ನೀಡುವ ನಿಟ್ಟಿನಲ್ಲಿ ಸಂವಿಧಾನದ 371ನೇ `ಡಿ~ ಕಲಮಿಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿ ಶುಕ್ರವಾರ ಒಪ್ಪಿಗೆ ನೀಡಿರುವುದನ್ನು ಜಿಲ್ಲೆಯಾದ್ಯಂತ ಸ್ವಾಗತಿಸಲಾಗಿದೆ.

ಬಳ್ಳಾರಿಯೂ ಒಳಗೊಂಡಂತೆ ಬೀದರ್, ರಾಯಚೂರು, ಗುಲ್ಬರ್ಗ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಿ, ಅನುಕೂಲ ಒದಗಿಸುವಂತೆ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಪ್ರತಿಫಲ ದೊರೆತಂ ತಾಗಿದೆ ಎಂದು ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಅಭಿಪ್ರಾಯ ಪಟ್ಟಿವೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳಲ್ಲದೆ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ, 371ನೇ ಕಲಮ್ ತಿದ್ದುಪಡಿಗಾಗಿನ ಜಿಲ್ಲಾ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳೂ ಕೇಂದ್ರದ ಸಚಿವ ಸಂಪುಟ ಸಮಿತಿಯ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ.

ಕಾಂಗ್ರೆಸ್: ಕಾಂಗ್ರೆಸ್‌ನ ಬಳ್ಳಾರಿ ಜಿಲ್ಲಾ ನಗರ ಘಟಕದ ಪದಾಧಿಕರಿಗಳು ಶುಕ್ರವಾರ ಸಂಜೆ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸಭೆ ಸೇರಿ ವಿಜಯೋತ್ಸವ ಆಚರಿಸಿದ್ದಲ್ಲದೆ, ಈ ಭಾಗದ ಜನತೆ ಪಕ್ಷಾತೀತವಾಗಿ ನಡಸಿದ ಹೋರಾಟ ಪ್ರತಿಫಲವಾಗಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಹಾರಾಷ್ಟ್ರದ ವಿಧರ್ಭ ಮತ್ತು ಆಂಧ್ರದ ತೆಲಂಗಾಣ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ತಿಳಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಈ ಆರು ಜಿಲ್ಲೆಗಳ ಜನರ ಬಹುದಿನಗಳ ಕನಸು ಈ ಮೂಲಕ ನನಸಾಗುತ್ತಿದೆ ಎಂದು ಘಟಕದ ಅಧ್ಯಕ್ಷ ಜೆ.ಎಸ್. ಆಂಜಿನೇಯುಲು, ಪಕ್ಷದ ಮುಖಂಡರಾದ ಅರುಣಕುಮಾರ್. ವಿ.ಕೆ. ಬಸಪ್ಪ, ಎಚ್.ಅರ್ಜುನ್, ವಿನೋದ್‌ಕುಮಾರ್, ಕಲ್ಲುಕಂಬ ಪಂಪಾಪತಿ, ಕಮಲಮ್ಮ ಮರಿಸ್ವಾಮಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್: ಜಿಲ್ಲೆಯ ಜನರ ದಶಕಗಳ ಹೋರಾಟಕ್ಕೆ ಇದೀಗ ಜಯ ದೊರೆತಂತಾಗಿದೆ. ಪಕ್ಷದ ಧುರೀಣರು, ಕಾರ್ಯಕರ್ತರ ಸಲಹೆಯ ಮೇರೆಗೆ, ಲೋಕಸಭೆಯ ಕಲಾಪದಲ್ಲಿ ಅನೇಕ ಬಾರಿ ಕಲಮಿಗೆ ತಿದ್ದುಪಡಿ ತರುವಂತೆ ದನಿ ಎತ್ತಿದ್ದಾಗಿ ಸಂಸದೆ ಜೆ.ಶಾಂತಾ ಶನಿವಾರ ಕರೆದಿದ್ದ ಪತ್ರಕಾಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಮುಖಂಡ, ಶಾಸಕ ಬಿ.ಶ್ರೀರಾಮುಲು, ಶಾಸಕರಾದ ಬಿ.ನಾಗೇಂದ್ರ, ಸಂಸದ ಸಣ್ಣಫಕೀರಪ್ಪ ಅವರು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಅವರು ತಿಳಿಸಿದರು.

ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ, ಮೇಯರ್ ಕೆ.ಹನುಮಂತಪ್ಪ, ಪಾಲಿಕೆ ಸದಸ್ಯರಾದ ಶಶಿಕಲಾ ಮತ್ತಿತರರು ಪಕ್ಷದ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ವಿನಿಮಯ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ: ಪಕ್ಷದ ಮುಖಂಡ ವೈಜನಾಥ್ ಪಾಟೀಲ್ ಮತ್ತಿತರರು ಪಕ್ಷಾತೀತ ವಾಗಿ ನಡೆಸಿದ ಹೋರಾಟಕ್ಕೆ ಇದೀಗ ಮನ್ನಣೆ ದೊರೆತಂತಾಗಿದೆ. ಕೇಂದ್ರ ಸರ್ಕಾರದ ಕ್ರಮದಿಂದ, ಅತ್ಯಂತ ಹಿಂದುಳಿದಿರುವ ಈ ಭಾಗದಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್‌ಕುಮಾರ್, ಸಾಹುಕಾರ್ ಸತೀಶ್‌ಬಾಬು, ಸತೀಶ್ ಚಕ್ರವರ್ತಿ, ಹಾಲ ಹನುಮಂತಪ್ಪ, ಸಂಜಯ್ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್: ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಎಲ್ಲ ಯುವಕರಿಗೂ ವಿಶೇಷ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ತರಲು ನಿರ್ಧರಿಸಿ ರುವುದು ಅಭಿನಂದನೀಯ ಎಂದು ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಸೂರ್ಯನಾರಾಯಣ ರೆಡ್ಡಿ, ಸುಮಂಗಲಾ ಬಸವರಾಜ್, ಮುಂಡ್ರಿಗಿ ನಾಗರಾಜ್, ಮೀನಳ್ಳಿ ಚಂದ್ರಶೇಖರ್, ಮೀನಳ್ಳಿ ತಾಯಣ್ಣ ಮತ್ತಿತರರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹೋರಾಟ ನಿಲ್ಲದು: ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ 371ನೇ ಕಲಮ್‌ನ ತಿದ್ದುಪಡಿ ಹೋರಾಟ ಸಮಿತಿಯ ಸಿರಿಗೇರಿ ಪನ್ನರಾಜ್ ಮತ್ತಿತರರು ಅನೇಕ ವರ್ಷಗಳಿಂದ ನಡೆಸಿರುವ ಹೋರಾಟವನ್ನು ಮುಂದು ವರಿಸಿ, ಈ ಭಾಗದ ಜನತೆಗೆ ವಿಶ್ವ ವಿದ್ಯಾಲಯ ಮತ್ತಿತರ ಕಡೆ ಉದ್ಯೋಗ ಗಳು ದೊರೆಯುವಂತೆ ಆಗ್ರಹಿಸಲಾಗು ವುದು ಎಂದು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ನೂತನವಾಗಿ ಆರಂಭವಾಗಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ದಲ್ಲಿ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಲೋಕಸಭೆಯಲ್ಲಿ ತಿದ್ದುಪಡಿ ತಂದು ಈ ಭಾಗದ ಜನತೆಗೆ ಅನುಕೂಲ ದೊರೆಯುವವರೆಗೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಸಾಪ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಹಾಗೂ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು, ಈ ಕುರಿತು ದನಿ ಎತ್ತಿ ಹೋರಾಟ ನಡೆಸಿದ ಮಹನೀಯ ರೆಲ್ಲರೂ ಅಭಿನಂದನೀಯರು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT