ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಆದೇಶ ಉಲ್ಲಂಘಿಸಿ ಬಿಡಿಎ ನಿವೇಶನ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ) ಹಗರಣದಲ್ಲಿ ಸಿಲುಕಿರುವ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಈಗ ಇನ್ನೊಂದು ವಿವಾದ ಸುತ್ತಿಕೊಂಡಿದೆ.

ಹೈಕೋರ್ಟ್ ಆದೇಶ ಉಲ್ಲಂಘಿಸಿ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ (`ಜಿ~ ಗುಂಪು) 21 ಮಂದಿಗೆ ಕಾನೂನು ಬಾಹಿರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಮಂಜೂರು ಮಾಡಿರುವ ಸುಳಿಗೆ ಇವರು ಸಿಲುಕಿದ್ದಾರೆ.

`ಯಾವುದೇ ವ್ಯಕ್ತಿಗಳಿಗೆ ಯಾವುದೇ ರೀತಿಯ ನಿವೇಶನ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ~ ಎಂದು 2010ರ ಡಿಸೆಂಬರ್ 15ರಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರ ಏಕಸದಸ್ಯ ಪೀಠ ತೀರ್ಪು ನೀಡುವ ಮೂಲಕ ಇಂತಹ ನಿವೇಶನ ಮಂಜೂರಾತಿಯನ್ನು ರದ್ದು ಮಾಡಿತ್ತು.

ಕುಮಾರ್ ಬಂಗಾರಪ್ಪನವರು ಶಾಸಕರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿದ್ದ ನಿವೇಶನದ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದ್ದರು. ಆದರೆ ಈ ತೀರ್ಪಿಗೆ ವಿರುದ್ಧವಾಗಿ ನಿವೇಶನ ಮಂಜೂರು ಆಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ.

ಹೈಕೋರ್ಟ್ ಆದೇಶ ಹೊರಡಿಸಿದ ದಿನದಿಂದ 2011ರ ಡಿಸೆಂಬರ್ ಅಂತ್ಯದ ಒಳಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ 21 ನಿವೇಶನಗಳು ಮಂಜೂರು ಆಗಿರುವ ಬಗ್ಗೆ ಬಿಡಿಎ ಮಾಹಿತಿ ನೀಡಿದೆ. ವಕೀಲ ಬಿ.ಆರ್.ಶ್ರೀನಿವಾಸ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಲಾಗಿದೆ.

ಮೂವರು ಕಾಂಗ್ರೆಸ್ ಹಾಗೂ ಒಬ್ಬ ಜೆಡಿಎಸ್ ಶಾಸಕ, ನಾಲ್ವರು ಬಿಜೆಪಿಯ ವಿಧಾನಸಭಾ ಸದಸ್ಯರು ಈ ನಿವೇಶನ ಪಡೆದುಕೊಂಡಿದ್ದಾರೆ. ಮೂವರು ಮಾಜಿ ಶಾಸಕರು, ಒಬ್ಬ ಮಾಜಿ ಸಂಸದೆಗೂ ನಿವೇಶನ ದಕ್ಕಿದೆ. ಒಬ್ಬ ಐಎಎಸ್ ಅಧಿಕಾರಿ, ಒಬ್ಬ ಐಎಫ್‌ಎಸ್ ಅಧಿಕಾರಿಯೂ ಮುಖ್ಯಮಂತ್ರಿಗಳ ಕೋಟಾದಡಿ ನಿವೇಶನ ಗಿಟ್ಟಿಸಿಕೊಂಡಿದ್ದರೆ, ಒಬ್ಬ ಚಾಲಕನಿಗೂ ನಿವೇಶನ ನೀಡಲಾಗಿದೆ. ಉಳಿದ ಆರು ಮಂದಿಯ ಹುದ್ದೆಗಳ ಬಗ್ಗೆ ಮಾಹಿತಿಯಲ್ಲಿ ವಿವರ ನೀಡಲಾಗಿಲ್ಲ.

ಹೈಕೋರ್ಟ್‌ನಲ್ಲಿ ಪ್ರಕರಣ ವಿವರ: `ಕೆ.ರಾಜು ವರ್ಸಸ್ ಬಿಡಿಎ~ ಪ್ರಕರಣದಲ್ಲಿ ಹೈಕೋರ್ಟ್ ವಿವೇಚನಾ ಕೋಟಾದ ಬಗ್ಗೆ ಸ್ಪಷ್ಟಪಡಿಸಿತ್ತು. 2004ರಲ್ಲಿ ನಗರದ ಎಚ್‌ಎಸ್‌ಆರ್ ಲೇಔಟ್ ಬಳಿ ಕುಮಾರ್ ಬಂಗಾರಪ್ಪನವರಿಗೆ 8.5ಲಕ್ಷ ರೂಪಾಯಿಗೆ ನಿವೇಶನ  ಮಂಜೂರಾಗಿತ್ತು. ಈ ನಿವೇಶನಕ್ಕೆ ಬದಲಾಗಿ 2007ರ ಜೂನ್ ತಿಂಗಳಿನಲ್ಲಿ  ಬಾಣಸವಾಡಿಯಲ್ಲಿ ನಿವೇಶನ ನೀಡಲಾಯಿತು. ಈ ನಿವೇಶನವನ್ನು ಅವರು 85ಲಕ್ಷ ರೂಪಾಯಿಗೆ ಮಧು ಬಾಬರ್ ಎನ್ನುವವರಿಗೆ ಪರಭಾರೆ ಮಾಡಿದ್ದರು.

ಮಧು ಅವರು ಅದೇ ಸಾಲಿನ ಅಕ್ಟೋಬರ್‌ನಲ್ಲಿ ಕೆ.ರಾಜು ಅವರಿಗೆ 1.20ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಈ ಎಲ್ಲ ಪರಭಾರೆ ಪ್ರಕ್ರಿಯೆ ಐದು ತಿಂಗಳುಗಳ ಅವಧಿಯಲ್ಲಿ ನಡೆದಿತ್ತು.

ಆದರೆ 2008ರಂದು ರಾಜು ಅವರಿಗೆ ಬಿಡಿಎ ನೋಟಿಸ್ ಜಾರಿ ಮಾಡಿತು. ಇದು ಮೂಲೆ ನಿವೇಶನವಾಗಿದ್ದು, ಕಣ್ತಪ್ಪಿನಿಂದ ಮೂಲ ನಿವೇಶನದಾರರಿಗೆ ಮಂಜೂರು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಜೂರಾತಿ ಆದೇಶವನ್ನು ರದ್ದು ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಇದನ್ನು ರಾಜು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಾವು ಮೂಲ ಮಾಲೀಕರಲ್ಲ. ನಿವೇಶನವನ್ನು ಖರೀದಿಸಿದ್ದೇವೆ. ಈಗ ಮಂಜೂರಾತಿ ರದ್ದು ಮಾಡಿದರೆ ತಾವು ಬೀದಿ ಪಾಲಾಗಬೇಕಾಗುತ್ತದೆ ಎಂದು ಅವರು ದೂರಿದ್ದರು.

ಬಿಡಿಎ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. `ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ- 1976 ಹಾಗೂ ನಂತರದಲ್ಲಿ ಅದಕ್ಕೆ ಸೇರ್ಪಡೆಗೊಂಡ ನಿಯಮದ ಅನುಸಾರ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಮಂಜೂರು ಮಾಡುವುದು ಉಲ್ಲಂಘನೆ. ಇದರ ಹೊರತಾಗಿಯೂ ಈ ಪ್ರಕರಣದಲ್ಲಿ ನಿವೇಶನ ಹೇಗೆ ಮಂಜೂರು ಮಾಡಲಾಗಿದೆ ಎಂಬ ಬಗ್ಗೆ ನಗರದ ಪೊಲೀಸ್ ಕಮಿಷನರ್ ಅವರು ತನಿಖೆ ನಡೆಸಬೇಕು~ ಎಂದು ಅವರು ಆದೇಶಿಸಿದ್ದರು.

ಕೋರ್ಟ್ ಗಮನ ಸೆಳೆಯಲು ನಿರ್ಧಾರ: ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಶ್ರೀನಿವಾಸ್ ಅವರು, `ಏಕ ಸದಸ್ಯಪೀಠದ ಈ ತೀರ್ಪನ್ನು ವಿಭಾಗೀಯ ಪೀಠದಲ್ಲಿ ಬಿಡಿಎ ಅಥವಾ ಸರ್ಕಾರ ಪ್ರಶ್ನಿಸಿಲ್ಲ. ಈ ಹಿನ್ನೆಲೆಯಲ್ಲಿ ಏಕ ಸದಸ್ಯಪೀಠ ಏನು ತೀರ್ಪು ನೀಡಿದೆಯೋ ಅದಕ್ಕೆ ಸರ್ಕಾರ ಬದ್ಧವಾಗಿರಬೇಕು. ಆದರೆ ನ್ಯಾಯಾಲಯದ ತೀರ್ಪನ್ನೇ ಕಡೆಗಣಿಸಿ 21 ಮಂದಿಗೆ  ನಿವೇಶನ ಮಂಜೂರು ಮಾಡಲಾಗಿದೆ~ ಎಂದರು.

ಈ ಕುರಿತು ತಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್ ಗಮನ ಸೆಳೆಯುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT