ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ : ಎಂ.ಕೃಷ್ಣಪ್ಪ ಕುಟುಂಬದ ವಿರುದ್ಧ ಖಾಸಗಿ ದೂರು

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಅವರ ಪುತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ಪತ್ನಿ ಪ್ರಿಯದರ್ಶಿನಿ ಮತ್ತು ಕಿರಿಯ ಪುತ್ರ ಪ್ರದೀಪ್ ವಿರುದ್ಧ ರಾಜಾಜಿನಗರ ನಿವಾಸಿ ಎಚ್.ಸಿ.ಪ್ರಕಾಶ್ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಖಾಸಗಿ ದೂರು ಸಲ್ಲಿಸಿದ್ದಾರೆ.

ವಕೀಲ ಸತ್ಯನಾರಾಯಣ ಅವರೊಂದಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಬಂದ ಪ್ರಕಾಶ್, ಕೃಷ್ಣಪ್ಪ ಮತ್ತು ಅವರ ಕುಟುಂಬದ ಮೂವರು ಸದಸ್ಯರ ವಿರುದ್ಧ 44 ಪುಟಗಳ ದೂರು ಹಾಗೂ 990 ಪುಟಗಳ ದಾಖಲೆಗಳನ್ನು ಸಲ್ಲಿಸಿದರು. ದೂರಿನಲ್ಲಿರುವ ಆರೋಪಗಳ ಬಗ್ಗೆ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದೂರನ್ನು ವಿಚಾರಣೆಗೆ ಅಂಗೀಕರಿಸುವ ಸಂಬಂಧ ಗುರುವಾರ ಆದೇಶ ನೀಡುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿದರು.

ದೂರಿನಲ್ಲಿರುವ ಆರೋಪಗಳೇನು?: ಕೃಷ್ಣಪ್ಪ ಅವರು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯಲ್ಲಿದ್ದರು. ನಿವೃತ್ತಿ ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯರಾದರು. ಬಳಿಕ ರಾಜಕೀಯಕ್ಕೆ ಬಂದರು. ಈ ಹಂತದಲ್ಲಿ ಅವರು ಆರ್ಥಿಕವಾಗಿ ಸದೃಢವಾಗಿರಲಿಲ್ಲ. 2000ನೇ ವರ್ಷದಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2000-2006ರ ಅವಧಿಯಲ್ಲಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ದೂರಿದ್ದಾರೆ.

2008ರ ಏಪ್ರಿಲ್‌ನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ಅದೇ ವರ್ಷದ ಜೂನ್ 30ರಂದು ಲೋಕಾಯುಕ್ತರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ನಮೂದಿಸಿರುವ ಆಸ್ತಿಯ ಮೌಲ್ಯಗಳ ನಡುವೆ 700 ಕೋಟಿ ರೂಪಾಯಿಯಷ್ಟು ವ್ಯತ್ಯಾಸವಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲೂ ಈ ವ್ಯತ್ಯಾಸವಿದೆ ಎಂಬ ಆರೋಪ ದೂರಿನಲ್ಲಿದೆ.

ಮಾಗಡಿ ಸಮೀಪ ಕೃಷ್ಣಪ್ಪ ಅವರು 554 ಎಕರೆ ಮತ್ತು ಪ್ರಿಯಕೃಷ್ಣ 85 ಎಕರೆ ಭೂಮಿ ಹೊಂದಿದ್ದಾರೆ. ಈ ವಿಷಯವನ್ನು ಈವರೆಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ. ಈ ಆಸ್ತಿಯ ಮೌಲ್ಯವೇ ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಕೃಷ್ಣಪ್ಪ ಮತ್ತು ಅವರ ಕುಟುಂಬದ ಆದಾಯ ಇಳಿಕೆಯಾದ ಅವಧಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆ. ಅಕ್ರಮ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಕಲಂ 420, 465, 468, 471, ಕರ್ನಾಟಕ ಭೂ ಪರಭಾರೆ ನಿಯಂತ್ರಣ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 125ರ ಅಡಿಯಲ್ಲಿ ಕೃಷ್ಣಪ್ಪ ಮತ್ತು ಇತರೆ ಆರೋಪಿಗಳ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 156(3)ರ ಅಡಿಯಲ್ಲಿ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT