ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ತೀವ್ರ ತರಾಟೆ: ಸಚಿವರಿಗೆ ಸಮನ್ಸ್ ಎಚ್ಚರಿಕೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದ ಸರ್ಕಾರದ ಕ್ರಮಕ್ಕೆ ಕೆಂಡಾಮಂಡಲವಾದ ಹೈಕೋರ್ಟ್, ಬರುವ ಸೋಮವಾರದ ಒಳಗೆ ಸಮಸ್ಯೆ ಬಗೆಹರಿಸದೇ ಹೋದರೆ ಶಿಕ್ಷಣ ಸಚಿವರನ್ನು ಕೋರ್ಟ್‌ಗೆ ಕರೆಸಬೇಕಾಗುತ್ತದೆ ಎಂದು ಶುಕ್ರವಾರ ಎಚ್ಚರಿಸಿದೆ.

ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ `ಕಥೆ~. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿನ ವಿರುದ್ಧ ಹಲವಾರು ವಿದ್ಯಾರ್ಥಿಗಳು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಶಿಥಿಲ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕೊರತೆ, ಪುಸ್ತಕಗಳು ಇಲ್ಲದ ಗ್ರಂಥಾಲಯ, ಶಿಕ್ಷಕರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ತಮ್ಮ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿರುವ ಅವರು ತಮ್ಮನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಲು ಕಾಲೇಜಿಗೆ ಆದೇಶಿಸುವಂತೆ ಕೋರಿದ್ದಾರೆ.

ವಿದ್ಯಾರ್ಥಿಗಳ ದೂರು: `ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ನಮಗೆ ಸರ್ಕಾರಿ ಕೋಟಾದಡಿ ಈ ಕಾಲೇಜು ಸಿಕ್ಕಿದೆ. ಇದು ಸರ್ಕಾರಿ ಕಾಲೇಜು ಆಗಿರುವ ಹಿನ್ನೆಲೆಯಲ್ಲಿ ಇದರ ಆಗುಹೋಗುಗಳನ್ನು ನಾವು ಪರಿಶೀಲಿಸಲಿಲ್ಲ. ಎಲ್ಲ ಸೌಲಭ್ಯ ಇರಬಹುದು ಎಂಬುದು ನಮ್ಮ ಅನಿಸಿಕೆಯಾಗಿತ್ತು.

ಆದರೆ ಇಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಶಿಕ್ಷಕರ ಕೊರತೆಯೂ ಇದೆ. ಇರುವ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಇದೆ. ಇದರಿಂದ ಕಳೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ನಾವೆಲ್ಲ ಕಡಿಮೆ ಅಂಕ ಗಳಿಸಬೇಕಾಯಿತು~ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಚ್ಚರಿ: ಸರ್ಕಾರಿ ಕಾಲೇಜಿನಲ್ಲಿ ಈ ರೀತಿ ಕೊರತೆ ಇದೆ ಎಂಬುದನ್ನು ಮನಗಂಡ ನ್ಯಾಯಮೂರ್ತಿಗಳು, ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ತಪಾಸಣೆ ನಡೆಸದೇ ಇರುವುದು ಇಷ್ಟೊಂದು ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ವಿಚಾರಣೆ ವೇಳೆ ಅವರ ಗಮನಕ್ಕೆ ಬಂತು.

`ಖಾಸಗಿ ಕಾಲೇಜುಗಳಲ್ಲಿ ಈ ರೀತಿ ಸೌಲಭ್ಯಗಳ ಕೊರತೆ ಇದೆ ಎಂದರೆ ಅವರು ಏನೋ ಸಮಜಾಯಿಷಿ ನೀಡಬಹುದು. ಅಲ್ಲಿ ಭ್ರಷ್ಟಾಚಾರದಿಂದ ಹೀಗೆ ಆಗಿದೆ ಎಂದೂ ಅಂದುಕೊಳ್ಳಬಹುದು. ಆದರೆ ಸರ್ಕಾರದ ಅಧೀನಕ್ಕೆ ಒಳಪಟ್ಟ ಕಾಲೇಜು ಈ ಪರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ನಂಬಲು ಆಗುತ್ತಿಲ್ಲ. ಎಐಸಿಟಿಇ ಕೂಡ ತಪಾಸಣೆ ನಡೆಸುತ್ತಿಲ್ಲ ಎಂದರೆ ಏನರ್ಥ. ಇದೆಂಥ ಬೇಜವಾಬ್ದಾರಿ~ ಎಂದು ತರಾಟೆಗೆ ತೆಗೆದುಕೊಂಡಿತು.

ಈ ಬಗ್ಗೆ ಸಮಜಾಯಿಷಿ ಕೇಳಲು ಸೋಮವಾರ (ಫೆ.27) ಕಾಲೇಜಿನ ಪ್ರಾಂಶುಪಾಲರ ಖುದ್ದು ಹಾಜರಿಗೆ ಆದೇಶಿಸಿದೆ. ಅದೇ ವೇಳೆ ಸಚಿವರಿಗೆ ಸಮನ್ಸ್ ಜಾರಿ ಮಾಡುವ ಎಚ್ಚರಿಕೆಯನ್ನೂ ಪೀಠ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT