ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಪೀಠ ಸ್ಥಾಪನೆಯಾಗಲಿ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಧಾರವಾಡ ಮತ್ತು ಗುಲ್ಬರ್ಗಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ನಿರಾಕರಿಸಲು ಹಿಂದೆ ಇದ್ದ ಯಾವ ಕಾರಣಗಳು ಈಗ ಇಲ್ಲ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನ್ಯಾಯಾಲಯದ ಕಟ್ಟಡ, ವಸತಿ ಸಮುಚ್ಚಯ, ಕಕ್ಷಿದಾರರ ಕೊಠಡಿ, ಗ್ರಂಥಾಲಯ, ಸಾರಿಗೆ ವ್ಯವಸ್ಥೆ ಹೀಗೆ ಎರಡೂ ಕಡೆಗಳಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಗೊಂಡಿವೆ,  ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ.

ಬೇರೆ ಜಿಲ್ಲೆಗಳ ಜತೆಗಿನ ಸಂಪರ್ಕ ವ್ಯವಸ್ಥೆಯಲ್ಲಿಯೂ ಸುಧಾರಣೆಯಾಗಿದೆ. ಬೆಂಗಳೂರು ಮಂದಿ ಭಯಪಟ್ಟ ರೀತಿಯಲ್ಲಿ ನ್ಯಾಯವ್ಯವಸ್ಥೆಯ ಗುಣಮಟ್ಟ ಕೂಡಾ ಕುಸಿದಿಲ್ಲ. `ನ್ಯಾಯಾಂಗದ ಔನ್ನತ್ಯ, ಹೈಕೋರ್ಟ್‌ನ ಸಮಗ್ರ ಸ್ವರೂಪ ಮತ್ತು ನ್ಯಾಯದಾನದ ಗುಣಮಟ್ಟ ಪಾಲನೆಯ ದೃಷ್ಟಿಯಿಂದ ಹೈಕೋರ್ಟ್ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವುದು ಅವಶ್ಯ~ ಎನ್ನುವ ಐವತ್ತು ವರ್ಷಗಳ ಹಿಂದಿನ ಕಾನೂನು ಆಯೋಗದ ವರದಿ ಬದಲಾಗಿರುವ ವ್ಯವಸ್ಥೆಯಲ್ಲಿ ಪ್ರಸ್ತುತತೆಯನ್ನು ಕಳೆದುಕೊಂಡಿದೆ.
 
ಈ ಹಿನ್ನೆಲೆಯಲ್ಲಿ ಅಲ್ಲಿರುವ ಸಂಚಾರಿ ಪೀಠಗಳಿಗೆ ಪೂರ್ಣಪ್ರಮಾಣದ ಹೈಕೋರ್ಟ್ ಪೀಠದ ಸ್ಥಾನಮಾನ ನೀಡಲು ಹಿಂಜರಿಯಬೇಕಾದ ಕಾರಣಗಳೇ ಇಲ್ಲ. ನಾಲ್ಕು ದಶಕಗಳ ಹಿಂದೆ ಉತ್ತರಕರ್ನಾಟಕ್ಕೆ ಹೈಕೋರ್ಟ್ ಪೀಠ ಬೇಕು ಎಂಬ ಬೇಡಿಕೆ ಮೊದಲ ಬಾರಿ ಕೇಳಿಬಂದಾಗ ಇಡೀ ದೇಶದಲ್ಲಿದ್ದ ಪೀಠಗಳ ಸಂಖ್ಯೆ ಕೇವಲ ನಾಲ್ಕು. ಆ ಸಂಖ್ಯೆ ಈಗ ಹದಿನೇಳು ಆಗಿದೆ. ಅಲ್ಲೆಲ್ಲೂ ಅನ್ವಯವಾಗದ ಮಾನದಂಡಗಳನ್ನು ಕರ್ನಾಟಕದಲ್ಲಿ ಮಾತ್ರ ಅನ್ವಯಿಸುವುದು ಅನ್ಯಾಯವಲ್ಲದೆ ಬೇರೇನೂ ಅಲ್ಲ.

ಸಂಚಾರಿ ಪೀಠ ಮೂಲತಃ ತಾತ್ಕಾಲಿಕ ಸ್ವರೂಪದ್ದು. ಇದನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾವುದೇ ಕ್ಷಣದಲ್ಲಿ ರದ್ದುಮಾಡಬಹುದು. ಹೈಕೋರ್ಟ್‌ಗೆ ಇರುವ ಎಲ್ಲ ಅಧಿಕಾರಗಳು ಸಂಚಾರಿ ಪೀಠಗಳಿಗೆ ಇರುವುದಿಲ್ಲ.

ಕಾಯಂ ಪೀಠ ಸ್ಥಾಪಿಸಿದರೆ ನ್ಯಾಯಾಧಿಕರಣದ ವ್ಯಾಪ್ತಿ ನಿಗದಿಯಾಗುವುದರಿಂದ  ಈಗಿನ ವ್ಯವಸ್ಥೆಯಲ್ಲಿರುವಂತೆ ಧಾರವಾಡದ ಕಕ್ಷಿದಾರ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸುವಂತಿಲ್ಲ, ಅದನ್ನು ಧಾರವಾಡದಲ್ಲಿಯೇ ಮಾಡಬೇಕಾಗುತ್ತದೆ. ಪೀಠದ ಮುಖ್ಯಸ್ಥರಾಗಿ ಮುಖ್ಯನ್ಯಾಯಮೂರ್ತಿಗಳಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೂಡಾ ಸಲ್ಲಿಸಬಹುದಾಗಿದೆ.
 
ಕಂಪೆನಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೂಡಾ ವಿಚಾರಣೆ ಮಾಡುವ ಅಧಿಕಾರ ಇರುತ್ತದೆ.  ಹಸಿರು ಪೀಠವನ್ನು ಹೊಂದಲು ಹೈಕೋರ್ಟ್ ಪೀಠಕ್ಕೆ ಅವಕಾಶ ಇರುವುದರಿಂದ  ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯ ಪಡೆಯಲು  ಹೈಕೋರ್ಟ್ ಮೆಟ್ಟಿಲು ಹತ್ತಬೇಕಾದ ಅಗತ್ಯವೂ ಇಲ್ಲ.

ಇದರಿಂದ ಹೈಕೋರ್ಟ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಕಕ್ಷಿದಾರರ ಅನುಕೂಲದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ವಿಕೇಂದ್ರಿಕರಣದ ಮೂಲಕ ನ್ಯಾಯಾಲಯಗಳನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು ನಡೆಯುತ್ತಿರುವ ಪ್ರಯತ್ನ ಇದರಲ್ಲಿ ಪ್ರಮುಖವಾದುದು.

ಹೈಕೋರ್ಟ್ ಪೀಠ ಸ್ಥಾಪನೆಯ ಉದ್ದೇಶ ಕೂಡಾ ಇದೇ ಆಗಿರುವುದರಿಂದ  ಮುಖ್ಯನ್ಯಾಯಮೂರ್ತಿಗಳು ಧಾರವಾಡ ಮತ್ತು ಗುಲ್ಬರ್ಗ ಜನತೆಯ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ರಾಜ್ಯ ಸರ್ಕಾರ ಅವರಿಗೆ  ಕಾಯಂ ಪೀಠದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಬೇಕು. ಅಲ್ಲಿನ ಜನ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮತ್ತೆ ಬೀದಿಗಿಳಿಯಲು ಅವಕಾಶ ನೀಡಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT