ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಮೇಲೆ ಉಗ್ರರ ಕೆಂಗಣ್ಣು

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಹೈಕೋರ್ಟ್ ಬಳಿ ಬುಧವಾರ ಬೆಳಿಗ್ಗೆ ಶಕ್ತಿಯುತ ಬಾಂಬ್ ಸ್ಫೋಟಿಸಿ 11 ಮಂದಿ ಮೃತಪಟ್ಟು, ಸುಮಾರು 76 ಮಂದಿ ಗಾಯಗೊಂಡಿದ್ದಾರೆ. ನ್ಯಾಯಾಲಯ ಕಲಾಪ ಆರಂಭವಾಗುವ 15 ನಿಮಿಷಗಳ ಮೊದಲು ಅಂದರೆ 10.15ರ ಸುಮಾರಿಗೆ ಸ್ಫೋಟ ಸಂಭವಿಸಿತು. ಗೇಟ್ ಸಂಖ್ಯೆ 4 ಮತ್ತು 5ರ ಮಧ್ಯದಲ್ಲಿರುವ  `ಸ್ವಾಗತಕಾರರ ಕೌಂಟರ್~ ಬಳಿ ಬ್ರೀಫ್‌ಕೇಸ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಯಿತು.

ಬುಧವಾರ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಗಳ ವಿಚಾರಣೆ ನಡೆಸುತ್ತದೆ. ಈ ಕಾರಣಕ್ಕೆ ಹೆಚ್ಚು ಜನ  ಬಂದಿದ್ದರು. ಬೆಳಿಗ್ಗೆ 9.30ರಿಂದ ಪಾಸುಗಳನ್ನು ಪಡೆಯಲು ಕಕ್ಷಿಗಾರರು ಮತ್ತಿತರರು ಸರದಿಯಲ್ಲಿ ನಿಂತಿದ್ದರು. ಮಹಿಳೆಯರು, ಹಿರಿಯ ನಾಗರಿಕರು, ಪುರುಷರು ಸೇರಿದಂತೆ ಮೂರು ಸಾಲುಗಳಲ್ಲಿ 100ರಿಂದ 200 ಜನ ನಿಂತಿದ್ದಾಗ ಸ್ಫೋಟ ಸಂಭವಿಸಿತು.

`ಅಮೋನಿಯಂ ನೈಟ್ರೇಟ್~ ನೆರವಿನಿಂದ ಅತ್ಯಾಧುನಿಕ ವಿಧಾನದಲ್ಲಿ ಬಾಂಬ್ ತಯಾರಿಸಿರಬಹುದೆಂದು ಶಂಕಿಸಲಾಗಿದೆ. ಘಟನೆ ಸ್ಥಳದಿಂದ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎರಡು ಕೆ.ಜಿ. ಸ್ಫೋಟಕವನ್ನು ಇದಕ್ಕೆ ಬಳಸಲಾಗಿದೆ. ಪರೀಕ್ಷೆ ನಂತರ ಯಾವ ಸ್ಫೋಟಕ ಉಪಯೋಗಿಸಲಾಗಿದೆ ಎಂದು ಖಚಿತವಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಎದೆ ನಡುಗಿಸುವ ಸದ್ದಿನೊಂದಿಗೆ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಜನರ ಆಕ್ರಂದನ ಮುಗಿಲು ಮುಟ್ಟಿತು. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಕೆಲವರು ಶವವಾಗಿದ್ದರು. ಅನೇಕರು ಕೈಕಾಲುಗಳನ್ನು ಕಳೆದುಕೊಂಡು ಬಿದ್ದಿದ್ದರು. ಹಲವರು ಪ್ರಾಣ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದರು. ಇಡೀ ಸ್ಫೋಟದ ಸ್ಥಳ ರಕ್ತಸಿಕ್ತವಾಗಿ ಭಾರಿ ದುರಂತಕ್ಕೆ ಸಾಕ್ಷಿಯಾಯಿತು. ವಕೀಲರು ಮತ್ತಿತರರು ಓಡಿ ಬಂದು ಗಾಯಾಳುಗಳನ್ನು ಸಿಕ್ಕಸಿಕ್ಕ ವಾಹನಗಳಿಗೆ ಹಾಕಿ ರಾಮಮನೋಹರ ಲೋಹಿಯಾ, ಸಫ್ದರ್ ಜಂಗ್ ಆಸ್ಪತ್ರೆಗೆ ಕಳುಹಿಸಿದರು.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಹೈಕೋರ್ಟ್ ಮತ್ತು ಆಸ್ಪತ್ರೆ ಬಳಿ ಸ್ಫೋಟಕ್ಕೆ ಬಲಿಯಾದವರ ಬಂಧುಗಳ ಕಣ್ಣೀರ ಕೋಡಿ ಹರಿಯಿತು. 

 ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಕೈಕಾಲು ಕಳೆದುಕೊಂಡ ಉಳಿದ 51 ಜನರನ್ನು ಸರ್ಜರಿ ವಾರ್ಡ್‌ಗಳಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ಯು.ಕೆ. ಬನ್ಸಲ್ ತಿಳಿಸಿದ್ದಾರೆ. ಅನಧಿಕೃತ ಮೂಲಗಳ ಪ್ರಕಾರ ಗಾಯಗೊಂಡವರ ಸಂಖ್ಯೆ 75ಕ್ಕೂ ಹೆಚ್ಚು.

ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಪೊಲೀಸರು ಇಬ್ಬರು ಪ್ರಮುಖ ಶಂಕಿತರ ಮುಖ ಚಹರೆಗಳನ್ನು ಒಳಗೊಂಡ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರಕರಣದ ತನಿಖೆಯನ್ನು ~ರಾಷ್ಟ್ರೀಯ ತನಿಖಾ ಸಂಸ್ಥೆ~ (ಎನ್‌ಐಎ)ಗೆ ವಹಿಸಲಾಗಿದೆ. ಈ ಉದ್ದೇಶಕ್ಕಾಗಿ ಎನ್‌ಐಎ 20 ಅಧಿಕಾರಿಗಳ ತಂಡ ರಚಿಸಿದೆ. ತನಿಖೆಗೆ ದೆಹಲಿ ಪೊಲೀಸರ ನೆರವು ಕೇಳಲಾಗಿದೆ.

`ಹರ‌್ಕತ್- ಉಲ್- ಜಿಹಾದಿ~ (ಹುಜಿ) ಎಂಬ ಪಾಕಿಸ್ತಾನಿ ಮೂಲದ ಉಗ್ರಗಾಮಿ ಸಂಘಟನೆ ಸ್ಫೋಟದ ಹೊಣೆ  ಹೊತ್ತುಕೊಂಡಿದೆ. ಈ ಸಂಬಂಧ ಮಾಧ್ಯಮಗಳ ಕಚೇರಿಗೆ ಇ-ಮೇಲ್ ಕಳುಹಿಸಲಾಗಿದೆ. ಮೇಲ್ ಸಂದೇಶದ ಸಾಚಾತನ ಪರಿಶೀಲಿಸಲಾಗುತ್ತಿದೆ. `ನಾವು ಇ- ಮೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ~ ಎಂದು ಬನ್ಸಲ್ ಸ್ಪಷ್ಟಪಡಿಸಿದ್ದಾರೆ.

 `ದೆಹಲಿ ಹೈಕೋರ್ಟ್ ಬಳಿ ಬುಧವಾರ ಸಂಭವಿಸಿದ ಸ್ಫೋಟದ ಹೊಣೆಯನ್ನು ನಾವು ಹೊರುತ್ತೇವೆ. ಅಫ್ಜಲ್ ಗುರು ಮರಣ ದಂಡನೆ ತಕ್ಷಣ ರದ್ದು ಮಾಡಬೇಕು. ಇಲ್ಲವಾದರೆ,  ಪ್ರಮುಖ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗುರಿಯಾಗಿಟ್ಟುಕೊಂಡು ಬಾಂಬ್‌ಗಳನ್ನು ಸ್ಫೋಟಿಸುತ್ತೇವೆ~ ಎಂದು ಮೇಲ್ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

2001ರಲ್ಲಿ ಪಾರ್ಲಿಮೆಂಟ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿದೆ. ಈತನ ಕ್ಷಮಾದಾನ ಕೋರಿಕೆ ಅರ್ಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮುಂದಿದೆ. ಈ ಅರ್ಜಿಯನ್ನು ತಿರಸ್ಕರಿಸುವಂತೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ.

ಬಾಂಬ್ ಸ್ಫೋಟದ ಬಳಿಕ ಗೇಟ್ 4 ಮತ್ತು 5ನ್ನು ಬಂದ್ ಮಾಡಲಾಯಿತು. ದುರಂತ ಸ್ಥಳಕ್ಕೆ ಮಾಧ್ಯಮಗಳು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಯಿತು. ಸ್ಫೋಟ ಸ್ಥಳದಲ್ಲಿ ನಾಲ್ಕು ಅಡಿ ಆಳ ಗುಂಡಿ ಬಿದ್ದಿದ್ದು, ಇಡೀ ಪ್ರದೇಶಕ್ಕೆ ಪೊಲೀಸರು ಅಡ್ಡಗಟ್ಟೆಗಳನ್ನು ಹಾಕಿದ್ದಾರೆ. ಘಟನೆ ಸ್ಥಳವನ್ನು ಪೊಲೀಸರು, ಎನ್‌ಎಸ್‌ಜಿ ಕಮಾಂಡೋಗಳು ಸುತ್ತುವರಿದಿದ್ದಾರೆ. ಗೃಹ ಸಚಿವ ಪಿ.ಚಿದಂಬರಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ಸ್ಫೋಟದಿಂದ ನ್ಯಾಯಾಲಯದ ಕಲಾಪ ಬೆಳಿಗ್ಗೆ ಆರಂಭವಾಗಲಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ಕಲಾಪ ಎಂದಿನಂತೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT