ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಶೀಘ್ರ ಇತ್ಯರ್ಥ

Last Updated 8 ಜನವರಿ 2011, 6:40 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಗಳ ವಿವೇಚನಾ ಕೋಟಾ ಅಡಿ (‘ಜಿ’ ಗುಂಪು) ಯಾವುದೇ ವ್ಯಕ್ತಿಗಳಿಗೆ ಯಾವುದೇ ರೀತಿಯ ನಿವೇಶನ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ ಈಚೆಗಷ್ಟೇ ಮಹತ್ವದ ತೀರ್ಪು ನೀಡಿತ್ತು. ಆದರೆ ಇದರ ಬೆನ್ನಲ್ಲೇ ಈಗ ಈ ಕೋಟಾದ ಅಡಿ 2009ರ ಫೆ. 28ರ ಅಧಿಸೂಚನೆ ಅನ್ವಯ ನಿವೇಶನ ಪಡೆದಿರುವ 245 ಮಂದಿಯ ಬಗ್ಗೆ ಹೈಕೋರ್ಟ್ ಬರುವ ಮಾರ್ಚ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಇದರಲ್ಲಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರು ಸೇರಿದಂತೆ, 7 ಮಂದಿ ಹಾಲಿ, ಮಾಜಿ ಸಚಿವರು, ಐವರು ಸಂಸದರು, 12 ಮಂದಿ ವಿಧಾನ ಪರಿಷತ್ ಸದಸ್ಯರು, 72 ಶಾಸಕರು ಹಾಗೂ ಇತರ ಗಣ್ಯರು ಸೇರಿದ್ದಾರೆ.

ಮೊದಲೇ ನಿವೇಶನ ಹೊಂದಿರುವ ಇವರಿಗೆ ನಿಯಮ ಉಲ್ಲಂಘಿಸಿ ಪುನಃ ನಿವೇಶನ ನೀಡಲಾಗಿದೆ ಎಂದು ದೂರಿ ವಕೀಲ ಎಸ್.ವಾಸುದೇವ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. 2005ರಿಂದ ಈ ಕೋಟಾದ ಅಡಿ ಪ್ರಯೋಜನ ಪಡೆದುಕೊಂಡಿರುವವರ ನಿವೇಶನ ಮಂಜೂರಾತಿಯನ್ನು ರದ್ದು ಮಾಡಬೇಕು ಎನ್ನುವುದು ಅರ್ಜಿದಾರರ ವಾದ. ಆದರೆ ಇವರೆಲ್ಲ ಈಗಾಗಲೇ ಮನೆ ಕಟ್ಟಿ ವಾಸವಾಗಿರುವ ಕಾರಣ, ಒಂದು ವರ್ಷದಿಂದೀಚೆಗೆ ನಿವೇಶನ ಪಡೆದುಕೊಂಡಿರುವವರ ಮಂಜೂರಾತಿ ರದ್ದು ಮಾಡುವುದು ನ್ಯಾಯಮೂರ್ತಿಗಳ ಇಂಗಿತ.

ಈ ಬಗ್ಗೆ ಮಾರ್ಚ್ 3ರಂದು ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಕಾರಣ, ವಿವೇಚನಾ ಕೋಟಾದ ಅಡಿ ನಿವೇಶನ ಪಡೆದುಕೊಂಡಿರುವ ಕುರಿತಾಗಿ ಸುಪ್ರೀಂಕೋರ್ಟ್ ತೀರ್ಪೊ ಂದನ್ನು ನೀಡಿದ್ದು, ಅದರ ಆಧಾರದ ಮೇಲೆ ಇಲ್ಲಿಯೂ ತೀರ್ಪು ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ಅರ್ಜಿದಾರರ ದೂರೇನು? ಬಿಡಿಎ ನಿವೇಶನ ಮಂಜೂರಾತಿ ನಿಯಮ-1984 ಅನ್ನು ಉಲ್ಲಂಘಿಸಿ ಈ ಕೋಟಾದ ಅಡಿ ನಿವೇಶನ ಮಂಜೂರು ಮಾಡಲಾಗುತ್ತಿದೆ. ನಿವೇಶನ ಮಂಜೂರು ಮಾಡುವ ಮುನ್ನ, ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಹೆಸರಿನಲ್ಲಿ ಬೇರೊಂದು ನಿವೇಶನ ಇದ್ದರೆ ಅವರಿಗೆ ನಿವೇಶನ ನೀಡಬಾರದು. ಆದರೆ ಎಲ್ಲ ನಿಯಮ ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT