ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಸುಪರ್ದಿಯ ಜಾಗದಲ್ಲಿ ಉದ್ಯಾನ ನಿರ್ಮಾಣ: ನ್ಯಾಯಾಂಗ ನಿಂದನೆ ದಾಖಲು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಉದ್ಯಾನ ನಿರ್ಮಾಣ ಮಾಡಿದ್ದೂ ಅಲ್ಲದೇ ಕೋರ್ಟ್‌ಗೆ ಅಸಂಬದ್ಧ ಹೇಳಿಕೆ ನೀಡಿರುವ ಬಿಬಿಎಂಪಿ ಮಾಜಿ ಉಪಮೇಯರ್ ದಯಾನಂದ, ಇತರರ ವಿರುದ್ಧ ಕೋರ್ಟ್ ಖುದ್ದಾಗಿ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದೆ.

ಎನ್‌ಜಿಇಎಫ್ ಕಂಪೆನಿಗೆ ಸೇರಿದ್ದ ಜಮೀನು, ಕಂಪೆನಿಯನ್ನು ಮುಚ್ಚಿದ ನಂತರ ನ್ಯಾಯಾಲಯದ ಸುಪರ್ದಿಯಲ್ಲಿ ಇದೆ. ಇದು ತಿಳಿದಿದ್ದರೂ, ಪಾಲಿಕೆಯಿಂದ ಉದ್ಯಾನ ನಿರ್ಮಾಣ ಆಗಿರುವ ವಿವಾದ ಇದಾಗಿದೆ.

ಉದ್ಯಾನ ನಿರ್ಮಾಣದ ಕುರಿತಾಗಿ ಕಂಪೆನಿಯ ಸಮಾಪನಾಧಿಕಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಈ ಹಿಂದೆ ನಡೆಸಿದ್ದ ಏಕಸದಸ್ಯಪೀಠ, ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿತ್ತು.
ಈ ಆಧಾರದ ಮೇಲೆ ಈಗ ಮೊಕದ್ದಮೆ ದಾಖಲು ಮಾಡಲಾಗಿದ್ದು, ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರ ನೇತೃತ್ವದ ವಿಭಾಗೀಯ ಪೀಠ ಎಲ್ಲರಿಗೂ ನೋಟಿಸ್ ಜಾರಿಗೆ ಆದೇಶಿಸಿದೆ.

ತೋಟಗಾರಿಕಾ ಇಲಾಖೆಯ ಸೂಪರಿಂಟೆಂಡೆಂಟ್ ಎಸ್.ಚಂದ್ರಶೇಖರ್, ಇಲಾಖೆಯ ಹಿಂದಿನ ಸೂಪರಿಂಟೆಂಡೆಂಟ್ (ಗುಡಿಬಂಡೆ ತಾಲ್ಲೂಕು ಪಂಚಾಯಿತಿಯ ಹಾಲಿ ಪ್ರಧಾನ ಅಧಿಕಾರಿ) ಅಂಜನಪ್ಪ, ಇಲಾಖೆಯ ಅಂದಿನ ಜಂಟಿ ನಿರ್ದೇಶಕ ಎ. ನಾರಾಯಣಸ್ವಾಮಿ ಹಾಗೂ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಅಂದಿನ ಪಿಎಸ್‌ಐ ಸಿ.ರೋಹಿತ್  ಅವರ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ.

ಆರೋಪವೇನು?: 2004ರ ಆಗಸ್ಟ್ ತಿಂಗಳಿನಲ್ಲಿ ಕಂಪೆನಿಯನ್ನು ಮುಚ್ಚಲಾಗಿದೆ. ನಿಯಮದ ಅನ್ವಯ ಕಂಪೆನಿ ಜಮೀನು ಆದರೂ ಅದು ಈಗ ಕೋರ್ಟ್ ವಶದಲ್ಲಿದೆ. 2010ರಲ್ಲಿ ಉಪಮೇಯರ್ ಆಗಿದ್ದ ದಯಾನಂದ ಅವರು ಇತರ ಆರೋಪಿಗಳ ಸಹಾಯದೊಂದಿಗೆ ಕಂಪೆನಿಗೆ ಸೇರಿದ್ದ ಕಟ್ಟಡಗಳನ್ನು ನೆಲಸಮ ಮಾಡಿ ಉದ್ಯಾನ ನಿರ್ಮಾಣ ಮಾಡಿದ್ದಾರೆ. ಪಿಎಸ್‌ಐ ರೋಹಿತ್ ಅವರ ಗಮನಕ್ಕೆ ಅರ್ಜಿದಾರರು ತಂದರೂ ಅವರು ದೂರು ದಾಖಲಿಸಿಕೊಳ್ಳಲಿಲ್ಲ ಎನ್ನುವುದು ಆರೋಪ.

ಈ ಕುರಿತು ಹಿಂದೆ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಆರೋಪಿಗಳಿಂದ ಕೆಲವೊಂದು ಮಾಹಿತಿ ಕೇಳ್ದ್ದಿದರು.
ಅದಕ್ಕೆ ಉತ್ತರವಾಗಿ ದಯಾನಂದ ಅವರು, `ಕೃಷ್ಣಯ್ಯಪಾಳ್ಯದ ನಿವಾಸಿಗಳು ಉದ್ಯಾನಕ್ಕೆ ಒತ್ತಾಯ ಮಾಡಿದ್ದರು. ಇದಕ್ಕಾಗಿ ಉದ್ಯಾನ ನಿರ್ಮಾಣ ಮಾಡಲಾಯಿತು.

ಕೋರ್ಟ್‌ನ ಆಸ್ತಿಗೆ ಪಾಲಿಕೆ ಕಳೆ ತಂದುಕೊಟ್ಟಿದೆ~ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು. ಇದು ಅಸಂಬದ್ಧ ಹೇಳಿಕೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು. ಈ ಅಧಿಕಾರಿಗಳ ಕ್ರಮ ನ್ಯಾಯಾಂಗ ನಿಂದನೆ ಆಗಿದೆ ಎಂದು ಅವರು ಹೇಳಿದ್ದರು.

ಬಹುಮಾನ ಕೋರಿದ್ದ ಅರ್ಜಿ ವಜಾ
ನರಹಂತಕ ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇದ್ದ ವಿಶೇಷ ಕಾರ್ಯಪಡೆಯ ಸಿಬ್ಬಂದಿಗೆ ನೀಡಲಾಗುತ್ತಿರುವ ನಿವೇಶನ ಹಾಗೂ ನಗದು ತಮಗೂ ನೀಡುವಂತೆ ಕೋರಿ ಕೆಲವೊಂದು ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

2004ರ ಅ.18ರಂದು ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಯಪಡೆಯಲ್ಲಿದ್ದ ಸಿಬ್ಬಂದಿಗೆ ನಿವೇಶನ ಹಾಗೂ ನಗದು ನೀಡಲಾಗುವುದು ಎಂದು 2005ರ ಜುಲೈ ತಿಂಗಳ ಸರ್ಕಾರ ಆದೇಶಿಸಿತ್ತು. ಈ ಸಂಬಂಧ 754 ಮಂದಿಯ ಪಟ್ಟಿಯನ್ನು ಸರ್ಕಾರ ತಯಾರಿಸಿತ್ತು.

ಈ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಇಲ್ಲದೇ ಇರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT