ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ಕಟ್ಟಾ: ಸೋಮವಾರ ವಿಚಾರಣೆ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಕ್ಯಾನ್ಸರ್ ರೋಗಕ್ಕೆ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅದು ಯಶಸ್ವಿಯಾಗುವುದು ಅಪರೂಪ. ಆದುದರಿಂದ ಲಂಡನ್‌ನಲ್ಲಿಯೇ ಚಿಕಿತ್ಸೆ ಮುಂದುವರಿಸಬೇಕು. ದಯವಿಟ್ಟು ಜಾಮೀನು ನೀಡಿ~ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದನ್ನು ಹಾಗೂ ಚಿಕಿತ್ಸೆಗೆ ಕೆಲವೊಂದು ಷರತ್ತು ವಿಧಿಸಿದ್ದರ ರದ್ದತಿಗೆ ಕೋರಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ.

ಈ ಹಿಂದೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಈಗ ವೈದ್ಯಕೀಯ ಅಂಶಗಳ ಆಧಾರದ ಮೇಲೆ ಜಾಮೀನು ನೀಡುವಂತೆ ಅವರು ಕೋರಿದ್ದಾರೆ.

`ಲಂಡನ್‌ನ ರಾಯಲ್ ಫ್ರೀ ಹ್ಯಾಂಪ್‌ಸ್ಟೆಡ್ ಆಸ್ಪತ್ರೆಯಲ್ಲಿ ನನ್ನ `ಸ್ಟೆಮ್ ಸೆಲ್~ ಸಂಗ್ರಹಿಸಿ ಇಡಲಾಗಿದೆ. ಇದು ನನ್ನ ಚಿಕಿತ್ಸೆಗೆ ಉಪಯೋಗವಾಗಲಿದೆ. ಆದರೆ ಭಾರತದಲ್ಲಿ ಲಂಡನ್‌ನಷ್ಟು ಸುಸಜ್ಜಿತ  ಆಸ್ಪತ್ರೆ ಇಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ಅಲ್ಲಿಯೇ ಚಿಕಿತ್ಸೆ ಮುಂದುವರಿಸಬೇಕಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನಡೆಸದೇ ಹೋದರೆ ನನ್ನ ಆರೋಗ್ಯ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಆದರೆ ಲೋಕಾಯುಕ್ತ ಕೋರ್ಟ್ ಇಲ್ಲಿಯೇ ಚಿಕಿತ್ಸೆ ಪಡೆಯುವಂತೆ ಹೇಳುತ್ತಿದ್ದು ಅದು ಸರಿಯಲ್ಲ~ ಎಂದು ಅವರು ವಾದಿಸಿದ್ದಾರೆ.

`ನಾನು ನಿರಪರಾಧಿ. ನನ್ನ ಮೇಲೆ ವೃಥಾ ಆರೋಪ ಹೊರಿಸಲಾಗಿದೆ. ನನ್ನ ಮೇಲೆ ಆರೋಪ ಹೊರಿಸಿದ ದಿನದಿಂದ ಇಲ್ಲಿಯವರೆಗೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಪ್ರಯತ್ನ ಮಾಡಿಲ್ಲ. ಯಾರ ಮೇಲೆಯೂ ಪ್ರಭಾವ ಬೀರಿಲ್ಲ. ನನ್ನ ಆರೋಗ್ಯದ ಸ್ಥಿತಿ ಹದಗೆಟ್ಟಿರುವ ಬಗ್ಗೆ ತಜ್ಞ ವೈದ್ಯರೇ ಲೋಕಾಯುಕ್ತ ಕೋರ್ಟ್‌ಗೆ ದಾಖಲೆ ನೀಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಜಾಮೀನು ನೀಡಬೇಕು~ ಎಂದು ಅವರು ಕೋರಿದ್ದಾರೆ.

ಬಿಎಸ್‌ವೈ: ವಿಚಾರಣೆ ಮುಂದಕ್ಕೆ
ಭೂಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಜಾಮೀನು ಕೋರಿ ಇವರಿಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಶುಕ್ರವಾರ ಸುಮಾರು ಎರಡು ಗಂಟೆಗಳ ಕಾಲ ವಾದ, ಪ್ರತಿವಾದಗಳನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ಆಲಿಸಿದರು. ದೂರುದಾರ  ಸಿರಾಜಿನ್ ಬಾಷಾ ಪರ ವಕೀಲರು ಸೋಮವಾರ ವಾದ ಮುಂದುವರಿಸಲಿದ್ದಾರೆ.

ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಶನಿವಾರ ಪ್ರಕರಣದ ವಿಚಾರಣೆ ನಡೆಯಲಿದೆ.

ಜಾಮೀನು: ಕೃಷ್ಣ ಅರ್ಜಿ
ಗೆಜೆಟೆಡ್ ಪ್ರೊಬೇಷನರ್ಸ್‌ ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಎಚ್.ಎನ್.ಕೃಷ್ಣ ಅವರು ಜಾಮೀನು ಕೋರಿ ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇವರಿಗೆ ಜಾಮೀನು ನೀಡಲು ನಗರದ ಎಂಟನೇ ಎಸಿಎಂಎಂ ನ್ಯಾಯಾಲಯ ಗುರುವಾರ (ಅ.20) ನಿರಾಕರಿಸಿತ್ತು. ಈ ಆದೇಶದ ರದ್ದತಿಗೆ ಅವರು ಹೈಕೋರ್ಟ್ ಅನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT