ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ನಕ್ಸಲ್ ಮುಖಂಡರ ಮೊರೆ

Last Updated 21 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ


ಮಾಲ್ಕನ್‌ಗಿರಿ/ಕಟಕ್ (ಪಿಟಿಐ): ಅಪಹೃತ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಬಿಡುಗಡೆಗೆ ಪ್ರತಿಯಾಗಿ ನಕ್ಸಲೀಯರು ಪಟ್ಟು ಹಿಡಿದಿರುವ ಐವರು ಮಾವೊವಾದಿಗಳು ಜಾಮೀನು ಕೋರಿ ಸೋಮವಾರ ಒಡಿಶಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಐವರು ಮಾವೊವಾದಿ ಮುಖಂಡರ ಅರ್ಜಿಯನ್ನು ಭಾನುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು.

ನಕ್ಸಲೀಯರು ಬಿಡುಗಡೆಗೆ ಪಟ್ಟುಹಿಡಿದಿರುವ ಐವರು ಮುಖಂಡರಲ್ಲಿ ಗಂಟಿ ಪ್ರಸಾದಂ ಪ್ರಮುಖರಾಗಿದ್ದು ಅವರ ವಿರುದ್ಧ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸುಮಾರು 100 ಮೊಕದ್ದಮೆಗಳಿವೆ.

ಮಾತುಕತೆಗೆ ನಕ್ಸಲೀಯರು ಆಯ್ಕೆ ಮಾಡಿಕೊಂಡಿರುವ ಸಂಧಾನಕಾರರಾದ ಪ್ರೊ. ಜಿ.ಹರ್‌ಗೋಪಾಲ್, ಪ್ರಸಾದಂ ಅವರ ಬಿಡುಗಡೆ ಅಪಹೃತ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಮತ್ತು ಎಂಜಿನಿಯರ್ ಪವಿತ್ರ ಮಝಿ ಅವರ ಸುರಕ್ಷಿತ ಬಿಡುಗಡೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಅಪಹೃತರ ಬಿಡುಗಡೆ ಬಗ್ಗೆ ನಕ್ಸಲೀಯರೊಂದಿಗೆ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಸಾದಂ ಅವರ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ವಿಶೇಷವಾಗಿ ಮನವಿ ಮಾಡಲಾಯಿತು.

ಪ್ರಸಾದಂ ಜತೆಗೆ ಇತರ ಮಾವೊವಾದಿ ಮುಖಂಡರಾದ ಕೆನುಲಾಸಿರಿಸಾ ಅಲಿಯಾಸ್ ಪದ್ಮಾ, ಗೋಕುಲ್ ಕುಲದೀಪಿಯ, ಅಂಡಾಲುಯಿ ಈಶ್ವರಿ ಮತ್ತು ರುನೈ ತರಂಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಮಧ್ಯೆ, ಇನ್ನೊಬ್ಬ ಮಾವೊವಾದಿ ಮುಖಂಡರಾದ ಶ್ರೀರಾಮುಲು ಶ್ರೀನಿವಾಸಲು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯ, ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿದರು.

ನಕ್ಸಲೀಯರು ಶ್ರೀನಿವಾಸಲು ಅವರನ್ನೂ ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತ್ವರಿತ ನ್ಯಾಯಾಲಯದ ತೀರ್ಪು ಮಹತ್ವ ಪಡೆದುಕೊಂಡಿದೆ.

2007ರ ಜುಲೈಯಲ್ಲಿ ಶ್ರೀನಿವಾಸಲು ಅವರನ್ನು ಕಲಿಮೆಲಾ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಅವರು ಕಳೆದ 19ರಂದು ತ್ವರಿತ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ನಾಲ್ಕು ಪ್ರಕರಣಗಳಲ್ಲಿ ಶ್ರೀನಿವಾಸಲು ಅವರು  ದೋಷಮುಕ್ತ ಎಂದು ಈಗಾಗಲೇ ನ್ಯಾಯಾಲಯ ತೀರ್ಪು ನೀಡಿದ್ದು, ಇನ್ನೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಸಂಧಾನಕ್ಕೆ ಸಿದ್ಧ- ಗಂಟಿ
ಭುವನೇಶ್ವರ (ಪಿಟಿಐ): ನಕ್ಸಲರು ಅಪಹರಿಸಿರುವ ಜಿಲ್ಲಾಧಿಕಾರಿ ಮತ್ತು ಎಂಜಿನಿಯರ್ ಅವರನ್ನು ಬಿಡುಗಡೆ ಮಾಡಿಸಲು ಮಾವೊವಾದಿಗಳೊಂದಿಗೆ ಮಾತುಕತೆಗೆ ತಾವು ಸಿದ್ಧ ಎಂದು ಬಂಧನದಲ್ಲಿರುವ ಪ್ರಮುಖ ಮಾವೊವಾದಿ ಮುಖಂಡ ಗಂಟಿ ಪ್ರಸಾದಂ ಸೋಮವಾರ ಇಲ್ಲಿ ಹೇಳಿದರು. ಈ ವಿಚಾರವನ್ನು ಪ್ರಸಾದಂ ತಮ್ಮ ವಕೀಲ ನಿಹಾರ್ ರಂಜನ್ ಪಟ್ನಾಯಕ್ ಅವರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT