ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನತ್ತ ಬಿಎಸ್‌ವೈ ಚಿತ್ತ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ಅನಾರೋಗ್ಯದ ಕಾರಣದಿಂದ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಮವಾರ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರವಿ ಬಿ.ನಾಯಕ್ ನೇತೃತ್ವದ ವಕೀಲರ ತಂಡ ಯಡಿಯೂರಪ್ಪ ಅವರ ಜಾಮೀನು ಅರ್ಜಿಯನ್ನು ಸಿದ್ಧಪಡಿಸುತ್ತಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 439ರ ಅಡಿಯಲ್ಲಿ ಸೋಮವಾರ ಬೆಳಿಗ್ಗೆಯೇ ಹೊಸದಾಗಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದೆ. ಯಡಿಯೂರಪ್ಪ ಅವರ ಆರೋಗ್ಯದ ಸಮಸ್ಯೆಗಳನ್ನು ಜಾಮೀನು ಅರ್ಜಿಯಲ್ಲಿ ಪ್ರಮುಖ ಅಂಶಗಳಾಗಿ ಪ್ರಸ್ತಾಪಿಸುವ ಸಂಭವ ಇದೆ.

ಜಾಮೀನು ಅರ್ಜಿಗೆ ಮಧ್ಯಂತರ ಆದೇಶ ಹೊರಡಿಸುವಂತೆಯೂ ಕೋರಲು ಯಡಿಯೂರಪ್ಪ ಪರ ವಕೀಲರು ನಿರ್ಧರಿಸಿದ್ದಾರೆ. ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ದೂರಿನ ಬಗ್ಗೆ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈ ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವುದರಿಂದ ಈ ಪ್ರಕರಣವೂ ಮಹತ್ವದ ಘಟ್ಟ ತಲುಪುವ ನಿರೀಕ್ಷೆ ಇದೆ.

ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ಮುಂದಿರುವ ದಾರಿಗಳ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ರವಿ ನಾಯಕ್, `ತಕ್ಷಣವೇ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವುದು ಮಾತ್ರವೇ ಯಡಿಯೂರಪ್ಪ ಅವರಿಗಿರುವ ದಾರಿ.ಸಿಆರ್‌ಪಿಸಿ ಕಲಂ 439ರ ಅಡಿಯಲ್ಲಿ ಸೋಮವಾರವೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ~ ಎಂದರು.
ತೀವ್ರ ನಿಗಾ ಘಟಕದಲ್ಲಿ: ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದ ತಕ್ಷಣವೇ ಯಡಿಯೂರಪ್ಪ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಗಿನ ಜಾವ ಅವರನ್ನು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ನಡುವೆಯೇ ನಿರಂತರವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಮುಖಂಡರು ಮಾಜಿ ಮುಖ್ಯಮಂತ್ರಿಯವರ ಆರೋಗ್ಯ ವಿಚಾರಿಸಿದರು.

ಎದೆ ನೋವು, ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಯಡಿಯೂರಪ್ಪ ಅವರಿಗೆ ಐದು ಮಂದಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಅರಿವಳಿಕೆ ತಜ್ಞ ಡಾ.ಜಗದೀಶ್, ಮಧುಮೇಹ ತಜ್ಞ ಡಾ.ನರಸಿಂಹ ಶೆಟ್ಟಿ, ಹೃದ್ರೋಗ ತಜ್ಞರಾದ ಡಾ.ಪ್ರಸಾದ್ ಮತ್ತು ಡಾ.ರವೀಂದ್ರನಾಥ್ ಅವರು ಈ ತಂಡದಲ್ಲಿದ್ದಾರೆ.

ಪೊಲೀಸರು ಯಡಿಯೂರಪ್ಪ ಅವರನ್ನು ಶನಿವಾರ ಸಂಜೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದ ನಂತರ ಅವರಿಗೆ ಜೈಲಿನಲ್ಲೇ ಎದೆ ನೋವು ಕಾಣಿಸಿಕೊಂಡಿತ್ತು. ಅವರಿಗೆ ಚಿಕಿತ್ಸೆ ನೀಡಿದ ಕಾರಾಗೃಹ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 1.45ರ ಸುಮಾರಿಗೆ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

`ಜೈಲಿಗೆ ಬಂದ ನಂತರ ಯಡಿಯೂರಪ್ಪ ಅವರಿಗೆ ರಾತ್ರಿ ನಾಲ್ಕೈದು ಬಾರಿ ವಾಂತಿಯಾಯಿತು. ಅಲ್ಲದೇ ಅವರಿಗೆ ಎದೆ ನೋವು ಕಾಣಿಸಿಕೊಂಡು ಮತ್ತಷ್ಟು ಅಸ್ವಸ್ಥರಾದರು. ಈ ಹಿನ್ನೆಲೆಯಲ್ಲಿ ಜೈಲಿನ ಆಸ್ಪತ್ರೆ ವೈದ್ಯರಿಂದಲೇ ಚಿಕಿತ್ಸೆ ಕೊಡಿಸಲಾಯಿತು. ತೀವ್ರವಾಗಿ ಬಳಲಿದಂತೆ ಕಂಡುಬಂದ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆದಕಾರಣ ಅವರನ್ನು ಕಾರಾಗೃಹ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು~ ಎಂದು ಕಾರಾಗೃಹ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ ತಿಳಿಸಿದರು.

`ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆ ಇದ್ದವರಿಗೆ ಎದೆ ನೋವು ಕಾಣಿಸಿಕೊಳ್ಳುವುದು ಸಹಜ. ಯಡಿಯೂರಪ್ಪ ಅವರಿಗೆ 48 ಗಂಟೆಗಳ ವಿಶ್ರಾಂತಿಯ ಅಗತ್ಯವಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ~ ಎಂದು ಡಾ.ಮಂಜುನಾಥ್ ಅವರು `ಪ್ರಜಾವಾಣಿ~ಗೆ ವಿವರ ನೀಡಿದರು.

`ಯಡಿಯೂರಪ್ಪ ಅವರಿಗೆ ಇಸಿಜಿ ಮತ್ತು ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತದೊತ್ತಡದ ಪ್ರಮಾಣ 100/ 180ರ ಆಸುಪಾಸಿನಲ್ಲಿದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ 200ರಷ್ಟಿದೆ. ಸೋಮವಾರ ಆ್ಯಂಜಿಯೊ ಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಆ ಪರೀಕ್ಷೆಯ ಬಳಿಕ ಅವರಿಗೆ ಹೃದಯ ಸಂಬಂಧಿ ತೊಂದರೆ ಇದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಅವರಿಗೆ ಆಸ್ಪತ್ರೆಯ ಆಹಾರವನ್ನೇ ನೀಡಲಾಗುತ್ತಿದೆ~ ಎಂದು ಹೇಳಿದರು.

ಸಚಿವರು, ಶಾಸಕರ ದಂಡು: ಯಡಿಯೂರಪ್ಪ ಅವರು ದಾಖಲಾಗಿರುವ ಜಯದೇವ ಆಸ್ಪತ್ರೆಯಲ್ಲಿ ಭಾನುವಾರ ದಿನವಿಡೀ ಸಚಿವರು, ಶಾಸಕರ ದಂಡು ನೆರೆದಿತ್ತು. ಬೆಳಿಗ್ಗೆಯಿಂದ ತಂಡೋಪತಂಡವಾಗಿ ಆಸ್ಪತ್ರೆಯತ್ತ ಧಾವಿಸಿದ ಅವರು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರಾದ ಆರ್.ಅಶೋಕ, ಶೋಭಾ ಕರಂದ್ಲಾಜೆ, ಎಸ್.ಸುರೇಶ್ ಕುಮಾರ್ ವಿ.ಸೋಮಣ್ಣ, ಸಿ.ಎಂ. ಉದಾಸಿ, ಲಕ್ಷ್ಮಣ ಸವದಿ, ಎಂ.ಪಿ. ರೇಣುಕಾಚಾರ್ಯ, ಬಿ.ಎನ್.ಬಚ್ಚೇಗೌಡ, ಸಿ.ಸಿ.ಪಾಟೀಲ್, ಶಾಸಕರಾದ ಬಿ.ಪಿ.ಹರೀಶ್, ಎಚ್.ಹಾಲಪ್ಪ, ಎಂ. ಶ್ರೀನಿವಾಸ್, ಎಸ್.ಆರ್.ವಿಶ್ವನಾಥ್, ಎನ್.ಎಸ್.ನಂದೀಶ್ ರೆಡ್ಡಿ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮತ್ತಿತರರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದವರಲ್ಲಿ ಸೇರಿದ್ದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ ಅವರು, `ಯಡಿಯೂರಪ್ಪ ಅವರಿಗೆ ಎರಡು ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಅವರು ನನ್ನ ಜೊತೆ ಏನನ್ನೂ ಮಾತನಾಡಿಲ್ಲ. ತುಂಬಾ ಬಳಲಿದಂತೆ ಕಂಡುಬಂದರು~ ಎಂದರು.

ಯಡಿಯೂರಪ್ಪ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಅವರು ಇಡೀ ದಿನ ಆಸ್ಪತ್ರೆಯಲ್ಲೇ ಇದ್ದರು.

ಯಡಿಯೂರಪ್ಪ ಅವರ ಪುತ್ರಿಯರಾದ ಅರುಣಾದೇವಿ, ಉಮಾದೇವಿ, ಸೊಸೆ ಪ್ರೇಮಾ, ಅಳಿಯ ಆರ್.ಎನ್. ಸೋಹನ್‌ಕುಮಾರ್ ಮತ್ತು ಸಿಐಡಿ ಡಿಜಿಪಿ ಶಂಕರ ಬಿದರಿ, ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಅವರು ಸಹ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.

ಪೊಲೀಸ್ ಬಂದೋಬಸ್ತ್: ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯುತ್ತಿರುವ ಜಯದೇವ ಆಸ್ಪತ್ರೆ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಬೆಳಿಗ್ಗೆಯೇ ಆಸ್ಪತ್ರೆಗೆ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.

ಕಮಲ ಪಾಳೆಯದಲ್ಲಿ ಮೌನ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಸ್. ಎನ್.ಕೃಷ್ಣಯ್ಯ ಶೆಟ್ಟಿ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಬಿಜೆಪಿ ಮೌನಕ್ಕೆ ಶರಣಾಗಿದೆ. `ಕಮಲ ಪಾಳೆಯ~ದಲ್ಲಿ ಈಗ ನೀರವ ಮೌನ ಮನೆ ಮಾಡಿದೆ.

ಮುಖಂಡರ ಬಂಧನದಿಂದ ಆಘಾತಕ್ಕೆ ಒಳಗಾಗಿರುವ ಯಡಿಯೂರಪ್ಪ ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಭಾನುವಾರ ನಗರದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ ಅಂತಹ ಯಾವುದೇ ಸಭೆಯೂ ನಡೆಯಲಿಲ್ಲ. ಪಕ್ಷದ ವರಿಷ್ಠರು ಕೂಡ ಈ ಬಗ್ಗೆ ಹೆಚ್ಚು ಮಾತನಾಡದೇ ಮೌನ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT