ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಲ್ಲಿ ವಿನಾಯಕ್ ಸೆನ್ ಮೇಲ್ಮನವಿ

Last Updated 7 ಜನವರಿ 2011, 7:45 IST
ಅಕ್ಷರ ಗಾತ್ರ

ರಾಯಪುರ (ಪಿಟಿಐ): ಸ್ಥಳೀಯ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಎಡಪಂಥೀಯ ಕಾರ್ಯಕರ್ತ ವಿನಾಯಕ್ ಸೆನ್ ಛತ್ತೀಸ್‌ಗಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಮಾವೊವಾದಿಗಳ ಜತೆ ಸಂಪರ್ಕ ಸಾಧಿಸಿ, ಸರ್ಕಾರದ ವಿರುದ್ಧ ಚಳವಳಿ ನಡೆಸುತ್ತಿದ್ದರು ಎನ್ನುವ ಕಾರಣಕ್ಕೆ ಸ್ಥಳೀಯ ನ್ಯಾಯಾಲಯ ವಿನಾಯಕ್ ಸೆನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸಮರ್ಥವಾಗಿ ದೃಢಪಟ್ಟಿಲ್ಲ ಎಂದು ಸೆನ್ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ಕೆಳ ಹಂತದ ನ್ಯಾಯಾಲಯ 58 ವರ್ಷದ ಸೆನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಅವರ ವಕೀಲ ಮಹೇಂದ್ರ ದುಬೆ ಬುಧವಾರ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಅಧೀನ ನ್ಯಾಯಾಲಯದಲ್ಲಿ ಸೆನ್ ವಿರುದ್ಧದ ಆರೋಪಗಳು ಸೂಕ್ತ ರೀತಿಯಲ್ಲಿ ನಿರ್ಣಯವಾಗಿಲ್ಲ ಎನ್ನುವ ವಾದವನ್ನೂ ಅವರು ಮಂಡಿಸಿದ್ದಾರೆ. ಸಂಯೋಜನೆಯ ಕೊರತೆ ಮತ್ತು ಆರೋಪಿ ಪರ ವಕೀಲರ ವಾದವನ್ನು ಕಡೆಗಣಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆಯೇ ತೀರ್ಪು ನೀಡಲಾಗಿದೆ ಎಂದು ಡಿಸೆಂಬರ್ 24ರಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಪಿ.ವರ್ಮಾ ಅವರು ನೀಡಿದ ತೀರ್ಪನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಕಾನೂನು ಸಮ್ಮತವಾಗಿ ಅಪರಾಧಿಗಳ ವಿಚಾರಣೆ ನಿರ್ವಹಣಾ ವಿಧಾನವನ್ನು ಸೂಕ್ತವಾಗಿ ಪಾಲಿಸಿಲ್ಲ. ಅಥವಾ ಆರೋಪಿಯ ವಿರುದ್ಧದ ಸಾಕ್ಷ್ಯಗಳ ಬಗ್ಗೆಯೂ ಸರಿಯಾಗಿ ವಿವರಣೆ ನೀಡಿಲ್ಲ ಎಂದು ದುಬೆ ಅರ್ಜಿಯಲ್ಲಿ ತಿಳಿಸಿದ್ದಾರೆ.

‘ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್’ ಸಂಘಟನೆಯ ಉಪಾಧ್ಯಕ್ಷರಾಗಿದ್ದ ವಿನಾಯಕ ಸೆನ್ ಹಾಗೂ ಮಾವೊವಾದಿ  ನಾರಾಯಣ ಸನ್ಯಾಲ್ ಮತ್ತು ಕೋಲ್ಕತ್ತದ ವ್ಯಾಪಾರಿ ಪಿಯೂಸ್ ಗುಹ ಅವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಡಿಸೆಂಬರ್ 24ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT