ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಅವಳಿ ಸ್ಫೋಟಕ್ಕೆ 13 ಬಲಿ

80ಕ್ಕೂ ಹೆಚ್ಚು ಜನರಿಗೆ ಗಾಯ * ಆಂಧ್ರ ಸರ್ಕಾರದಿಂದ ಮೃತರ ಕುಟುಂಬಕ್ಕೆ ರೂ.6ಲಕ್ಷ ಪರಿಹಾರ
Last Updated 21 ಫೆಬ್ರುವರಿ 2013, 20:20 IST
ಅಕ್ಷರ ಗಾತ್ರ

ಹೈದರಾಬಾದ್:  ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್, ಮತ್ತೊಮ್ಮೆ ಉಗ್ರರ ಪಾಶವೀ ಕೃತ್ಯಕ್ಕೆ ಗುರಿಯಾಗಿದೆ. ಗುರುವಾರ ಸಂಜೆ  ನಡೆದ ಎರಡು ಸರಣಿ ಬಾಂಬ್ ಸ್ಫೋಟಗಳಲ್ಲಿ 13 ಜನ ಮೃತಪಟ್ಟಿದ್ದು, 84ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಗರದ ಹೃದಯಭಾಗದಿಂದ 15 ಕಿ.ಮೀ ದೂರದಲ್ಲಿರುವ ದಿಲ್‌ಸುಖ್‌ನಗರದ ಎರಡು ಚಿತ್ರಮಂದಿರಗಳ ಬಳಿ ಜನದಟ್ಟಣೆ ಇರುವ ಸ್ಥಳಗಳಲ್ಲಿಯೇ ಈ ಸ್ಫೋಟಗಳು ಸಂಭವಿಸಿವೆ. ಸುಧಾರಿತ ಸ್ಫೋಟಕ ಸಲಕರಣೆಗಳನ್ನು ಸ್ಟೀಲ್ ಊಟದ ಡಬ್ಬಿಗಳಲ್ಲಿ ಇಟ್ಟು,  ಸೈಕಲ್‌ಗಳಿಗೆ ಕಟ್ಟಿ ಈ ಕೃತ್ಯ ಎಸಗಲಾಗಿದೆ.

ಸಂಜೆ 7 ಗಂಟೆಯ ಹೊತ್ತಿಗೆ ವೆಂಕಟಾದ್ರಿ ಚಿತ್ರಮಂದಿರದ ಎದುರಿಗಿನ ಜನಪ್ರಿಯ ಉಪಾಹಾರಗೃಹದ ಬಳಿ ಮೊದಲ ಸ್ಫೋಟ ನಡೆಯಿತು. ಐದು ನಿಮಿಷಗಳ ನಂತರ ಮೊದಲ ಸ್ಫೋಟ ನಡೆದ ಸ್ಥಳದಿಂದ 100ರಿಂದ 150  ಮೀಟರ್ ದೂರದಲ್ಲಿರುವ ಕೋನಾರ್ಕ್ ಚಿತ್ರಮಂದಿರದ ಬಳಿ ಮತ್ತೊಂದು ಸ್ಫೋಟ ಸಂಭವಿಸಿತು. ಒಂದರ ಹಿಂದೆ ಒಂದರಂತೆ ಎರಡು ಸಲ ಭಾರಿ ಶಬ್ದ ಕೇಳಿಬಂತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭೀಕರ ದೃಶ್ಯ: ಸ್ಫೋಟದ ಸ್ಥಳದಲ್ಲಿ ರಕ್ತ ಚೆಲ್ಲಾಡಿತ್ತು. ಕೈಕಾಲು ಕಳೆದುಕೊಂಡು ನರಳುತ್ತ ಬಿದ್ದವರು, ಸುಟ್ಟ ವಾಸನೆ, ಸಿಡಿದ ಮಾಂಸದ ತುಣುಕುಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ    ಚಪ್ಪಲಿಗಳಿಂದಾಗಿ ಸ್ಫೋಟದ ತೀವ್ರತೆ  ಅಂದಾಜಿಸಬಹುದಾಗಿತ್ತು.
ಉಸ್ಮಾನಿಯಾ ಆಸ್ಪತ್ರೆ ಹಾಗೂ    ಮಲಕಪೇಟ್‌ನಲ್ಲಿರುವ ಯಶೋದಾ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.
ಸತ್ತವರಲ್ಲಿ ಮಹಿಳೆಯೊಬ್ಬರು ಸೇರಿದ್ದು, ಗಾಯಾಳುಗಳಲ್ಲಿ 6ಜನರ ಸ್ಥಿತಿ ಚಿಂತಾ ಜನಕವಾಗಿದೆ.

ಬಾಂಬ್‌ಗಾಗಿ ಶೋಧ: ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಹೈದರಾಬಾದ್ ಮತ್ತು ಅವಳಿ ನಗರ ಸಿಕಂದರಾಬಾದ್‌ನ ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್‌ಗಳಿಗಾಗಿ ತೀವ್ರ ಶೋಧ ನಡೆಸಿದರು. ಬಾಂಬ್‌ಗಳನ್ನು ಸೈಕಲ್‌ನಲ್ಲಿ  ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ದಳದ ತಂಡವನ್ನು (ಎನ್‌ಎಸ್‌ಜಿ) ಕೂಡಲೇ ಹೈದರಾಬಾದ್‌ಗೆ ಕಳುಹಿಸಲಾಗಿದೆ. ಅಲ್ಲಿಯೇ ಇರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ದುರಂತದ ನೆನಪು: ಈ ಅವಳಿ ಸ್ಫೋಟ 2007ರ ಆಗಸ್ಟ್‌ನಲ್ಲಿ ಇದೇ ನಗರದ `ಕೋಟಿ ಪ್ರದೇಶ'ದ ಚಾಟ್ ಕೇಂದ್ರದ ಬಳಿ ಹಾಗೂ ಲುಂಬಿಣಿ ಗಾರ್ಡನ್‌ನಲ್ಲಿ ನಡೆದ ಸರಣಿ ಸ್ಫೋಟದ ಘಟನೆಯ ಭೀಕರತೆಯನ್ನು ನೆನಪಿಗೆ ತಂದಿದೆ. ಆಗ 42 ಜನ ಮೃತಪಟ್ಟಿದ್ದರು.

ಅದೇ ವರ್ಷದ ಮೇ ತಿಂಗಳಿನಲ್ಲಿ ಹೈದರಾಬಾದ್‌ನ ಮೆಕ್ಕಾ ಮಸೀದಿ ಆವರಣದಲ್ಲಿ ನಡೆದ ಮತ್ತೊಂದು ಸ್ಫೋಟದಲ್ಲಿ 9 ಜನ ಸತ್ತಿದ್ದರು. ಘಟನೆ ನಂತರ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮತ್ತೆ ಐದು ಜನ ಮೃತಪಟ್ಟಿದ್ದರು.

ಕಟ್ಟೆಚ್ಚರ: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಚಾರ್‌ಮಿನಾರ್ ಪ್ರದೇಶ,   ವಿಶಾಖಪಟ್ಟಣ ಮತ್ತು ತಿರುಪತಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಸರ್ಕಾರ, ದೆಹಲಿ ಸೇರಿದಂತೆ ದೇಶದಾದ್ಯಂತ ಮಹಾನಗರಗಳು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ರಾಜ್ಯ ಸರ್ಕಾರಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಜನದಟ್ಟಣೆ ಪ್ರದೇಶ
ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿರುವ ದಿಲ್‌ಸುಖ್‌ನಗರ  ಹೈದರಾಬಾದ್‌ನ ಜನಪ್ರಿಯ ಶಾಪಿಂಗ್ ತಾಣಗಳಲ್ಲಿ ಒಂದು. ಮಾಲ್‌ಗಳು, ದೊಡ್ಡ ಶಾಪಿಂಗ್ ಕೇಂದ್ರಗಳು ಇರುವ ಇಲ್ಲಿ ಸಂಜೆಯ ಹೊತ್ತಿಗೆ ಭಾರಿ ಜನದಟ್ಟಣೆ ಇರುತ್ತದೆ. ಇಲ್ಲಿಂದ              ಚಾರ್‌ಮಿನಾರ್ 4 ಕಿ.ಮೀ ದೂರದಲ್ಲಿದೆ.

ದಾಳಿ ಸೂಚನೆ ಸಿಕ್ಕಿತ್ತು...
ಎರಡು ದಿನಗಳಿಂದ ದೇಶದಲ್ಲಿ ಉಗ್ರರ ದಾಳಿ ನಡೆಯವ ಸೂಚನೆ ದೊರಕಿತ್ತು. ಈ ಬೇಹುಗಾರಿಕಾ ಮಾಹಿತಿಯನ್ನು ಎಲ್ಲ ರಾಜ್ಯಗಳ ಜತೆ ಹಂಚಿಕೊಳ್ಳಲಾಗಿತ್ತು. ಆದರೆ, ಯಾವುದೇ ನಿರ್ದಿಷ್ಟ ಮಾಹಿತಿ ದೊರಕಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿದ್ದಾರೆ.

ಸಂಸತ್ತಿನ ಮೇಲಿನ ದಾಳಿಯ ಸಂಚು ರೂಪಿಸಿದ್ದ ಅಫ್ಜಲ್ ಗುರು  ಹಾಗೂ ಮುಂಬೈ ದಾಳಿಯಲ್ಲಿ ಭಾಗಿಯಾದ ಪಾಕ್ ಉಗ್ರ ಅಜ್ಮಲ್ ಕಸಾಬ್‌ನನ್ನು ನೇಣಿಗೆ ಹಾಕಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಬಹುತೇಕ ಎಲ್ಲ ಪ್ರಮುಖ ನಗರಗಳಿಗೂ ಫೆಬ್ರುವರಿ 19ರಿಂದ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಹೇಯ ಕೃತ್ಯ: ಪ್ರಧಾನಿ ಖಂಡನೆ
ನವದೆಹಲಿ (ಐಎಎನ್‌ಎಸ್): 
ಹೈದರಾಬಾದ್ ಸರಣಿ ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಡಾ. ಮನಮೋಹನ ಸಿಂಗ್ `ಇದೊಂದು ಹೇಡಿತನದ ಕೃತ್ಯವಾಗಿದ್ದು ದುಷ್ಕರ್ಮಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ' ಎಂದಿದ್ದಾರೆ.
ಸ್ಫೋಟಕ್ಕೆ ಬಲಿಯಾದವರಿಗೆ ಅತೀವ ಸಂತಾಪ ಸೂಚಿಸಿರುವ ಪ್ರಧಾನಿ, ಮೃತಪಟ್ಟವರ ಕುಟುಂಬಕ್ಕೆ ತಲಾ ರೂ.2 ಲಕ್ಷ , ತೀವ್ರವಾಗಿ ಗಾಯಗೊಂಡವರಿಗೆ  ರೂ. 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ರಾಜ್ಯದಾದ್ಯಂತ ಕಟ್ಟೆಚ್ಚರ
ಬೆಂಗಳೂರು:
ಹೈದರಾಬಾದ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರ (ಹೈ ಅಲರ್ಟ್) ಘೋಷಿಸಲಾಗಿದೆ.
`ರಾಜ್ಯದ ಎಲ್ಲ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್‌ಗಳು, ಬೃಹತ್ ಕಂಪೆನಿಗಳು ಸೇರಿದಂತೆ ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ `ಪ್ರಜಾವಾಣಿ'ಗೆ ತಿಳಿಸಿದರು.

`ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲು ಎಸ್‌ಪಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಭದ್ರತೆಗಾಗಿ ಇರುವ ಎಲ್ಲ ಪಡೆಗಳ ಸೇವೆ ಪಡೆಯಲು ನಿರ್ದೇಶನ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ' ಎಂದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT