ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಕೋಚ್ ಆಗಿ ಜೋಶಿ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಹೈದರಾಬಾದ್ ರಣಜಿ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಈ ವಿಷಯವನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) `ಪ್ರಜಾವಾಣಿ~ಗೆ ಖಚಿತಪಡಿಸಿದೆ. ಹಾಗಾಗಿ ಜೋಶಿ ಸದ್ಯದಲ್ಲಿಯೇ ರಣಜಿಗೆ ವಿದಾಯ ಹೇಳುವ ನಿರೀಕ್ಷೆ ಇದೆ.

`2011-12ರ ರಣಜಿ ಋತುವಿಗೆ ಜೋಶಿ ಅವರನ್ನು ಹೈದರಾಬಾದ್ ತಂಡದ ಕೋಚ್ ಆಗಿ ನೇಮಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದ ಎಚ್‌ಸಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಜೋಶಿ ಒಪ್ಪಿಗೆ ಸೂಚಿಸಿದ್ದಾರೆ~ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಪದಾಧಿಕಾರಿ ಹಾಗೂ ಮಾಧ್ಯಮ ಮ್ಯಾನೇಜರ್ ಶೇಷ ನಾರಾಯಣ ಭಾನುವಾರ ಪತ್ರಿಕೆಗೆ ತಿಳಿಸಿದರು.

`ವಿದಾಯ ಹೇಳಲು ಒಪ್ಪಿದ ಮೇಲೆಯೇ ನಾವು ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದೇವೆ. ಹಾಗಾಗಿ ಅವರು ಸದ್ಯದಲ್ಲಿಯೇ ರಣಜಿಗೆ ವಿದಾಯ ಹೇಳಲಿದ್ದಾರೆ~ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂಬಂಧ ಸುನಿಲ್ ಜೋಶಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, `ನಾನು ಚಂಡೀಗಡದಲ್ಲಿದ್ದೇನೆ. ಈಗ ಯಾವುದೇ ಪ್ರತಿಕ್ರಿಯೆ ನೀಡಲಾರೆ. ಬೆಂಗಳೂರಿಗೆ ಬಂದ ಮೇಲೆ ಮಾತನಾಡುತ್ತೇನೆ~ ಎಂದರು.

41 ವರ್ಷ ವಯಸ್ಸಿನ ಜೋಶಿ 160 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು         ಪ್ರತಿನಿಧಿಸಿದ್ದಾರೆ. ಇದರಲ್ಲಿ 5129 ರನ್ ಹಾಗೂ 615 ವಿಕೆಟ್ ಕಬಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗದುಗಿನ ಈ ಆಲ್‌ರೌಂಡರ್ 15 ಟೆಸ್ಟ್ ಹಾಗೂ 69 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಆಯ್ಕೆ ಅನುಮಾನವಿತ್ತು: ಜೋಶಿಗೆ ಈ ಬಾರಿಯ ರಣಜಿ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಅನುಮಾನಗಳಿದ್ದವು. ಅದಕ್ಕೆ ಕಾರಣ ಯುವ ಎಡಗೈ ಸ್ಪಿನ್ನರ್ ಎಸ್.ಕೆ.ಮೊಯಿನುದ್ದೀನ್ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ.

ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ನ ಈ ಬೌಲರ್ ಎಸ್. ಎ.ಶ್ರೀನಿವಾಸನ್ ಮೆಮೊರಿಯಲ್ ಟೂರ್ನಿಯಲ್ಲಿ 27 ವಿಕೆಟ್ ಪಡೆದಿದ್ದರು. ಶಫಿ ದಾರಾಷ ಟೂರ್ನಿಯಲ್ಲಿ `ಅತ್ಯುತ್ತಮ ಬೌಲರ್~ ಎನಿಸಿದ್ದರು. ಅಷ್ಟು ಮಾತ್ರವಲ್ಲದೇ, ಅಖಿಲ ಭಾರತ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲೂ ಮಿಂಚಿದ್ದರು.

`ಜೋಶಿ ವಿದಾಯ ಹೇಳುವ ವಿಷಯ ನಮಗೆ ಗೊತ್ತಿಲ್ಲ. ಕೋಚ್ ಆಗಿ ನೇಮಕವಾಗಿರುವುದೂ ನಮಗೆ ತಿಳಿದಿಲ್ಲ. ಆದರೆ ಅವರು ಹೈದರಾಬಾದ್ ತಂಡಕ್ಕೆ ಆಟಗಾರ ಹಾಗೂ ಕೋಚ್ ಆಗಿಯೂ ಕಾರ್ಯನಿರ್ವಹಿಸಬಹುದು. ಆ ತಂಡದ ಪರ ಆಡಿದರೆ ಕೆಎಸ್‌ಸಿಎನಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕು. ಕೇವಲ ಕೋಚ್ ಆದರೆ ಅದರ ಅಗತ್ಯವಿಲ್ಲ~ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ಸುಜಿತ್ ಸೋಮಸುಂದರ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT