ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಿಂದ ಕರ್ನಾಟಕ ತನಕ ‘ಗುಲ್ಬರ್ಗ’

Last Updated 12 ಏಪ್ರಿಲ್ 2014, 9:53 IST
ಅಕ್ಷರ ಗಾತ್ರ

ಗುಲ್ಬರ್ಗ: ಭಾರತವು ಸ್ವತಂತ್ರ ಪಡೆದ (1947 ಆಗಸ್ಟ್‌ 15) ವರ್ಷದ ಬಳಿಕ (1948 ಸೆಪ್ಟೆಂಬರ್‌ 17) ವಿಮೋಚನೆ­ಗೊಂಡು 1952ರಲ್ಲಿ ಚೊಚ್ಚಲ ಚುನಾ­­ವಣೆ ಎದುರಿಸಿದ ಗುಲ್ಬರ್ಗ ಲೋಕಸಭಾ ಕ್ಷೇತ್ರವು ಹಿಂದೆ ಹೈದರಾ­ಬಾದ್‌, ಮೈಸೂರು ಆಡಳಿತಕ್ಕೆ ಒಳಪ­ಟ್ಟಿತ್ತು, ಈಗ ಕರ್ನಾಟಕಕ್ಕೆ ಒಳಪಟ್ಟಿದೆ.

ಈ ಬಾರಿ ಸೇರಿ 16 ಸಾರ್ವತ್ರಿಕ ಮತ್ತು 2 ಉಪ ಚುನಾವಣೆ ಸೇರಿದಂತೆ ಒಟ್ಟು 18 ಚುನಾವಣೆಯನ್ನು ಕಂಡಿದೆ. ಈ ಪೈಕಿ ಮೊದಲ (1952) ಚುನಾ­ವಣೆ ನಡೆದಾಗ ಕ್ಷೇತ್ರವು ಹೈದರಾ­ಬಾದ್‌ ಆಡಳಿತಕ್ಕೆ ಒಳಪಟ್ಟಿತ್ತು. ಆ ಬಳಿಕ ಮೈಸೂರು ರಾಜ್ಯದಡಿ ನಾಲ್ಕು ಹಾಗೂ ಕರ್ನಾಟಕ ನಾಮಕರಣದ ಬಳಿಕ 13 ಚುನಾವಣೆಗೆ ಸಾಕ್ಷಿಯಾಗಿದೆ.

ಕರ್ನಾಟಕ ನಾಮಕರಣದ ಐತಿಹಾ­ಸಿಕ ನಿರ್ಣಯದ ವೇಳೆಯಲ್ಲಿ ಜಿಲ್ಲೆ­ಯಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ (ಗುರು­ಮಠ­ಕಲ್‌) ಮತ್ತು ಧರ್ಮಸಿಂಗ್‌ (ಜೇವರ್ಗಿ) ಪ್ರಸ್ತುತ ಗುಲ್ಬರ್ಗ ಮತ್ತು ಬೀದರ್‌ ಲೋಕಸಭೆಯ ಸಂಸದರೂ ಆಗಿದ್ದಾರೆ. ಆಗ ಶಾಸಕರಾಗಿದ್ದ ಬಹು­ತೇಕರು ಈಗ ಸಕ್ರಿಯ ರಾಜಕಾರಣ­ದಲ್ಲಿ ಇಲ್ಲ.

ನಂತರದ ಬೆಳವಣಿಗೆಯಲ್ಲಿ ಇಲ್ಲಿನ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ– ಹೆಸರು ಬದಲಾಗಿವೆ. ಮತದಾರರ ಸಂಖ್ಯೆಯೂ 4.7 ಪಟ್ಟು ಹೆಚ್ಚಾಗಿದೆ. ಆದರೆ ಅಂದಿನಿಂದ ಇಂದಿನ ತನಕ ಕ್ಷೇತ್ರ ಪುನರ್‌ವಿಂಡಗಣೆ, ಸಾಮಾನ್ಯದಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟರೂ, ಈ ಲೋಕಸಭಾ ಕ್ಷೇತ್ರಕ್ಕೆ ‘ಗುಲ್ಬರ್ಗ’ ಹೆಸರೇ ಉಳಿಸಿಕೊಂಡಿದೆ.

ಹೈದರಾಬಾದ್‌: ಗುಲ್ಬರ್ಗ ಕ್ಷೇತ್ರವು 1952ರಲ್ಲಿ ಹೈದರಾಬಾದ್‌ಗೆ ಒಳ­ಪಟ್ಟಿತ್ತು. ಆಗ ಹೈದರಾಬಾದ್‌ನ 21 ಲೋಕಸಭಾ ಕ್ಷೇತ್ರದ ಪೈಕಿ ಗುಲ್ಬರ್ಗ ಒಂದಾಗಿತ್ತು. ಈಗಿನ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಮುಖ ನಾಲ್ಕು ಕ್ಷೇತ್ರ­ಗಳು ಆಗ ಹೈದರಾಬಾದ್‌ ವ್ಯಾಪ್ತಿಯ­ಲ್ಲಿದ್ದರೆ, ಉಳಿದವು ಈಗಿನ ಮಹಾ­ರಾಷ್ಟ್ರ ಮತ್ತು ಆಂಧ್ರಪ್ರದೇಶ (ತೆಲಂಗಾಣ)ಕ್ಕೆ ಒಳಪಟ್ಟಿತ್ತು.

ಗುಲ್ಬರ್ಗದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ವಾಮಿ ರಮಾ­ನಂದ ತೀರ್ಥ, ಬೀದರ್‌ ಕ್ಷೇತ್ರದಿಂದ ಭಾರ­ತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಶೌಕತ್‌ ಉಲ್ಲಾ ಅನ್ಸಾರಿ, ಯಾದಗಿರಿ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೃಷ್ಣಾಚಾರ್ಯ ಜೋಶಿ ಹಾಗೂ ಕುಷ್ಟಗಿ ಕ್ಷೇತ್ರದಲ್ಲಿ ಪಕ್ಷೇತರ­ರಾದ ಶಿವಮೂರ್ತಿ ಸ್ವಾಮಿ ಆಯ್ಕೆ­ಯಾಗಿದ್ದರು. ಎಲ್ಲ ಕ್ಷೇತ್ರಗಳಲ್ಲೂ ಅಂದಾಜು 3.5ಲಕ್ಷದ ಆಸುಪಾಸು ಮತ­­ದಾರರಿದ್ದರು. ಮತದಾನ ಪ್ರಮಾಣ ಕಡಿಮೆ ಇದ್ದರೂ ಗೆದ್ದ ಎಲ್ಲ ಅಭ್ಯರ್ಥಿಗಳು ಶೇ 50ಕ್ಕೂ ಹೆಚ್ಚು ಮತ ಪಡೆದಿದ್ದರು.

ಮೈಸೂರು: 1ನವೆಂಬರ್‌ 1956ರಲ್ಲಿ ಭಾಷಾವಾರು ರಾಜ್ಯ ರಚನೆ ಆಧಾರ­ದಲ್ಲಿ ಗುಲ್ಬರ್ಗ ಕ್ಷೇತ್ರವು ಹೈದರಾ­ಬಾದ್ ಸಂಸ್ಥಾನದಿಂದ ಮೈಸೂರು ವ್ಯಾಪ್ತಿಗೆ ಒಳಪಟ್ಟಿತು. ಆ ಬಳಿಕ 1957­ರಲ್ಲಿ ನಡೆದ ಮೊದಲ ಚುನಾವಣೆ­ಯಲ್ಲಿ ಮೈಸೂರು ರಾಜ್ಯದ 28 ಕ್ಷೇತ್ರ­ಗಳ ಪೈಕಿ ಗುಲ್ಬರ್ಗವೂ ಒಂದಾಯಿತು. ನಾಲ್ಕು ಚುನಾವಣೆಯನ್ನು ಎದುರಿಸಿತು.

ಕರ್ನಾಟಕ: 1 ನವೆಂಬರ್‌್ 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂದು ಮರು­ನಾಮಕರಣ­ವಾಯಿತು. ಗುಲ್ಬರ್ಗದಲ್ಲಿ ಚೊಚ್ಚಲ ಉಪಚುನಾ­ವಣೆ ನಡೆಯಿತು. ಕಾಂಗ್ರೆಸ್‌ನ ಸಿದ್ರಾಮರೆಡ್ಡಿ ಆಯ್ಕೆಯಾದರು.   ಕರ್ನಾಟಕ ­ರಾಜ್ಯ­­ದಲ್ಲಿ ಚುನಾಯಿತ­ರಾದ ಮೊದಲ ಸಂಸ­ದರು ಸಿದ್ರಾಮ­ರೆಡ್ಡಿ ಎನ್ನುತ್ತವೆ ದಾಖಲೆ­ಗಳು. ಆ ಬಳಿಕ ಗುಲ್ಬರ್ಗ 12 ಚುನಾವಣೆ ­ಕಂಡಿದೆ.

371 (ಜೆ): ಪ್ರಾದೇಶಿಕ ಹಿಂದುಳಿ­ವಿಕೆಯ ಕಾರಣ 371ನೇ ಕಲಂ ತಿದ್ದುಪಡಿ ಬೇಡಿಕೆ ಕೂಗು ಹಚ್ಚಿತ್ತು. ಹೈದರಾಬಾದ್‌ ಕರ್ನಾಟಕಕ್ಕೆ ಸಂವಿ­ಧಾನದ ವಿಶೇಷ ಸ್ಥಾನಮಾನ ನೀಡುವ 371ನೇ ಜೆ ಕಲಂ ಜಾರಿಯಾಯಿತು. ನಂತರ ನಡೆಯುತ್ತಿರುವ ಮೊದಲ ಚುನಾವಣೆಯ ಮತದಾನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT