ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಮಾಸ್ಟ್: ಕೆಟ್ಟು ಎಂಟು ತಿಂಗಳಾದರೂ ಕೇಳೊರಿಲ್ಲ!

Last Updated 13 ಜೂನ್ 2011, 9:10 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಸಭೆ ವತಿಯಿಂದ ಸರ್ಕಾರದ ಅನುದಾನದಲ್ಲಿ ಸುಮಾರು ರೂ. 34 ಲಕ್ಷ ವೆಚ್ಚದಲ್ಲಿ ಸ್ಥಾಪನೆಗೊಂಡಿರುವ 8 ಹೈಮಾಸ್ಟ್ ದೀಪಗಳು ಕೆಟ್ಟು ಎಂಟು ತಿಂಗಳ ಮೇಲಾಗಿದ್ದರೂ ಕೇಳುವರಿಲ್ಲ ದಂತಾಗಿದೆ.

ಪಟ್ಟಣದ ಪ್ರಮುಖ ವೃತ್ತಗಳಾದ ವಿಶ್ವೇಶ್ವರಯ್ಯ ವೃತ್ತ, ಹೆಜ್ಜಿಗೆ ಎಂ.ಲಿಂಗಣ್ಣ ವೃತ್ತ, ನೆಹರೂ ವೃತ್ತ, ರೈಲ್ವೆ ಗೇಟ್, ಹಳೆ ಪೊಲೀಸ್ ಠಾಣೆ, ರಾಕ್ಷಸ ಮಂಟಪ, ಖಾಸಗಿ ಬಸ್ ನಿಲ್ದಾಣ ಮತ್ತು ಅಪೊಲೋ ವೃತ್ತ ಸೇರಿ 8 ಕಡೆ ಹೈಮಾಸ್ಟ್ ದೀಪಗಳನ್ನು 2007ರ ನವೆಂಬರ್ 5ರಲ್ಲಿ ಸ್ಥಾಪಿಸಲಾಯಿತು. ಒಂದು ಘಟಕಕ್ಕೆ ರೂ. 4.25 ಲಕ್ಷದಂತೆ ಒಟ್ಟು 34 ಲಕ್ಷ ರೂಪಾಯಿ ಇದರ ಅಂದಾಜು ವೆಚ್ಚವಾಗಿದೆ. ಪ್ರತಿಯೊಂದು ಘಟಕದಲ್ಲಿ `ಡಬಲ್ ಡ್ರಂ ಮೆಟಲ್ ಅಲೈಡ್ ಲ್ಯಾಂಪ್~ನ 8 ಸೆಟ್ ಅಳವಡಿಸಲಾಗಿದೆ. ಒಂದು ಸೆಟ್‌ನಲ್ಲಿ 2 ಲ್ಯಾಂಪ್ ಇದೆ.

ಪ್ರತಿಷ್ಠಾಪನೆ ಮಾಡಿದ ನಂತರ 2 ವರ್ಷಗಳ ಅವಧಿವರೆಗೆ ಇದರ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಗುತ್ತಿಗೆದಾರನೇ ನಿರ್ವಹಿಸಬೇಕು ಎಂಬ ಷರತ್ತಿಗೆ ಒಳಪಡಿಸಿ ಬೆಂಗಳೂರಿನ ಎಲೆಕ್ಟ್ರೋ ಲೈನ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.

ದೀಪಗಳು ಸುಸ್ಥಿತಿಯಲ್ಲಿ ಇರುವ ಹಾಗೆ ಎರಡು ವರ್ಷ ಕಳೆದ ನಂತರ ಪುರಸಭೆಗೆ ಹಸ್ತಾಂತರಿಸುವ ಷರತ್ತು ಕೂಡ ಇದರಲ್ಲಿ ಸೇರಿತ್ತು. ಅದರಂತೆ ಎರಡು ವರ್ಷದ ಅವಧಿ ಕಳೆದ 2009ರ ನವೆಂಬರ್ 4ಕ್ಕೆ ಅಂತ್ಯ ಕಂಡಿದೆ. ಆದರೆ, ಏನು ಕಾರಣವೋ ಗೊತ್ತಿಲ್ಲ ಮೂರು ವರ್ಷ ಕಳೆದರೂ ದೀಪಗಳ ನಿರ್ವಹಣೆ ಕಾರ್ಯ ಹಸ್ತಾಂತರವಾಗಲಿಲ್ಲ.

ಈ ನಡುವೆ 8 ಹೈಮಾಸ್ಟ್ ದೀಪಗಳು ಕೆಟ್ಟು ಎಂಟು ತಿಂಗಳ ಮೇಲಾಗಿದೆ. ಪ್ರಮುಖ ವೃತ್ತಗಳಲ್ಲಿ ಆಧುನಿಕ ಬೆಳಕಿನ ಕಿರಣ ಚೆಲ್ಲಬೇಕಾಗಿದ್ದ ದೀಪಗಳು ಮೌನವಾಗಿವೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಾಗಲೀ ಅಥವಾ ಚುನಾಯಿತ ಸದಸ್ಯರಾಗಲೀ ತಲೆಕೆಡಿಸಿಕೊಂಡಿಲ್ಲ. ಇನ್ನು ಸಮಾಜದ ಹಿತ ಚಿಂತನೆಯ ಯಾವ ಸಂಘ -ಸಂಸ್ಥೆಗಳು ಸಹ ಚಕಾರ ಎತ್ತಿಲ್ಲ. 

ಗುತ್ತಿಗೆ ಅವಧಿ ಮುಗಿದಿದ್ದು, ತಾವು ನೀಡಿರುವ ರೂ. 1.90 ಲಕ್ಷ ಭದ್ರತಾ ಠೇವಣಿ ಮತ್ತು ಇಎಂಡಿ ಮೊತ್ತ 34 ಸಾವಿರ ರೂಪಾಯಿ ವಾಪಸ್ ಮಾಡುವಂತೆ ಗುತ್ತಿಗೆದಾರರು ಪುರಸಭೆಗೆ ದುಂಬಾಲು ಬಿದ್ದಿದ್ದಾರೆ. ಆದರೆ, ದೀಪಗಳು ಕೆಟ್ಟಿರುವ ಕಾರಣ ದುರಸ್ತಿಯಾಗದೆ ಯಾವುದೇ ಕಾರಣಕ್ಕೂ ಠೇವಣಿ ಹಣ ಹಿಂದಿರುಗಿಸುವುದಿಲ್ಲ ಎಂದು ಪುರಸಭೆ ಅಧಿಕಾರಿಗಳು ಪಟ್ಟು ಹಾಕಿದ್ದಾರೆ. ಆದರೆ, ಇವರಿಬ್ಬರ ಕಚ್ಟಾಟದಲ್ಲಿ ಪಟ್ಟಣದ ನಾಗರಿಕರಿಗೆ ಒದಗಿಸಿದ್ದ ರೂ. 34 ಲಕ್ಷ ವೆಚ್ಚದ ಸೌಲಭ್ಯ ಹಾಳಾಗಿರುವುದು ದುರಂತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT